ರಾಮನಗರ: ಸರ್ಕಾರಿ ಕಾರ್ಯಕ್ರಮಗಳನ್ನು ಪಂಚಾಯ್ತಿ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಹೊಣೆ ಅರಿತು ಮುಂದಾಗಬೇಕು ಎಂದು ಬಿಳಗುಂಬ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಾಪಣ್ಣ ಸೂಚಿಸಿದರು.
ತಾಲೂಕಿನ ಕಸಬಾ ಹೋಬಳಿ ಬಿಳಗುಂಬ ಗ್ರಾಮಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ತ್ತೈಮಾಸಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಅವರು ಮಾತನಾಡಿ, ಸರ್ಕಾರದ 20 ಅಂಶಗಳ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಬೇಕು. ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ತುಲಪಿಸಿ, ನರೇಗಾ ಯೋಜನೆಯಡಿಯಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಿ ಎಂದು ಪಂಚಾಯ್ತಿ ಅಧಿಕಾರಿಗಳಿಗೆ ತಿಳಿಸಿದರು.
ಬಡವರಿಗೆ ಉತ್ತಮ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಶುದ್ದ ನೀರನ್ನು ನೀಡುವ ನಿಟ್ಟಿನಲ್ಲಿ ಮೂಲ ಸೌಕರ್ಯ ಕಲ್ಪಿಸಿ ಎಂದು ಹೇಳಿದರು.
ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆ ನಡೆಸಿ: ಪಿಡಿಒ ಎಂ.ರಾಜೇಗೌಡ ಮಾತನಾಡಿ, ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆಯನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನಡೆಸಬೇಕು. ವರ್ಷದಲ್ಲಿ ನಾಲ್ಕು ಸಭೆಗಳನ್ನು ಆಯೋಜಿಸುವ ಮೂಲಕ ವಿವಿಧ ಇಲಾಖೆಗಳ ಪ್ರಗತಿ ಮತ್ತು ಮುಂದೆ ಕೈಗೊಳ್ಳಬಹುದಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡಿ, ಚರ್ಚೆ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ತಮ್ಮ ತಮ್ಮ ಇಲಾಖೆ ಪ್ರಗತಿಯ ಅಂಕಿ ಅಂಶಗಳ ವರದಿಯೊಂದಿಗೆ ಮಾಹಿತಿ ನೀಡಿ ಪಂಚಾಯ್ತಿ ಮಟ್ಟದಲ್ಲಿ ಕೆಡಿಪಿ ಸಭೆಯನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಲು ಮನವಿ ಮಾಡಿದರು.
ಸಭೆಯಲ್ಲಿ ದೊಡ್ಡಮಣ್ಣುಗುಡ್ಡೆ ಶಾಲಾ ಶಿಕ್ಷಕ ಗೌರಿಶಂಕರ್, ರೇಷ್ಮೆ ಇಲಾಖೆಯ ಅಧಿಕಾರಿ ರಂಗಸ್ವಾಮಿ, ಕೃಷಿ ಅಧಿಕಾರಿ ಚಿಕ್ಕವೀರಯ್ಯ, ತೋಟಗಾರಿಕಾ ಇಲಾಖೆ ಅಧಿಕಾರಿ ಸಿದ್ದಗಂಗಪ್ಪ, ಯುವ ಜನ ಕ್ರೀಡಾ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿ ಮತ್ತು ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.
ಪಂಚಾಯ್ತಿ ಉಪಾಧ್ಯಕ್ಷೆ ಮಂಚಮ್ಮ, ಕಾರ್ಯದರ್ಶಿ ಉಮೇಶ್ ಸೇರಿದಂತೆ 15ಕ್ಕೂ ಹೆಚ್ಚು ಇಲಾಖಾ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.