Advertisement

ಕ್ಯಾಬಿನೆಟ್‌ಗೆ ಕಾಲ ಕೂಡಿತು; ನಾಳೆ ಕೇಂದ್ರ ಸಂಪುಟ ಪುನಾರಚನೆ

06:00 AM Sep 01, 2017 | Team Udayavani |

ನವದೆಹಲಿ: ಕೇಂದ್ರ ಸಚಿವ ಸಂಪುಟದ ಪುನಾರಚನೆ ಖಚಿತವಾಗಿದ್ದು, ಇದರ ಬೆನ್ನಲ್ಲೇ ಐವರು ಸಚಿವರು ರಾಜೀನಾಮೆ ಸಲ್ಲಿಸಿದ್ದರೆ, ಇನ್ನಿಬ್ಬರು ಯಾವುದೇ ಕ್ಷಣದಲ್ಲಿ ಸಚಿವ ಸ್ಥಾನ ತ್ಯಜಿಸುವ ಸಾಧ್ಯತೆ ಇದೆ. ಹೀಗಾಗಿ ಶನಿವಾರ ಸಂಜೆಯೇ ಸಂಪುಟ ಪುನಾರಚನೆಯಾಗಲಿದೆ ಎಂದು ಹೇಳಲಾಗುತ್ತಿದೆ.

Advertisement

ಜಲಸಂಪನ್ಮೂಲ ಮತ್ತು ಗಂಗಾ ಪುನರುಜ್ಜೀವನ ಇಲಾಖೆ ಸಚಿವೆ ಉಮಾಭಾರತಿ, , ಕೌಶಲಾಭಿವೃದ್ಧಿ ಸಚಿವ ರಾಜೀವ್‌ ಪ್ರತಾಪ್‌ ರೂಢಿ, ಸಣ್ಣ, ಮಧ್ಯಮ ಕೈಗಾರಿಕೆಗಳ ಸಹಾಯಕ ಸಚಿವ ಗಿರಿರಾಜ್‌ ಸಿಂಗ್‌, ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನರುಜ್ಜೀವನ ಇಲಾಖೆ ಸಹಾಯಕ ಸಚಿವ ಸಂಜೀವ್‌ ಬಲಿಯಾನ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಇನ್ನು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಸಣ್ಣ, ಮಧ್ಯಮ ಕೈಗಾರಿಕೆಗಳ ಸಚಿವ ಕಲ್‌ರಾಜ್‌ ಮಿಶ್ರಾ ಕೂಡ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಇನ್ನೊಂದು ವರ್ಷದಲ್ಲಿ ಕರ್ನಾಟಕವೂ ಸೇರಿದಂತೆ ಆರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅಲ್ಲದೆ ಈಗಾಗಲೇ ಎನ್‌ಡಿಎ ತೆಕ್ಕೆಗೆ ಬಂದಿರುವ ಜೆಡಿಯುಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿಕೊಡಬೇಕಿದೆ. ಜತೆಗೆ ಎನ್‌ಡಿಎಗೆ ಸೇರಿಕೊಳ್ಳಲು ಸಜ್ಜಾಗಿರುವ ತಮಿಳುನಾಡಿನ ಎಐಎಡಿಎಂಕೆಗೂ ಜಾಗ ನೀಡಬೇಕಾಗಿರುವುದರಿಂದ ಮೋದಿ ಸಂಪುಟದಿಂದ ಇವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಪಕ್ಷ ಸಂಘಟನೆ ಮತ್ತು ಹೊಸಬರಿಗೆ ದಾರಿ ಮಾಡಿಕೊಡುವ ದೃಷ್ಟಿಯಿಂದ ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಜೆಡಿಯುನಿಂದ ಇಬ್ಬರು, ಎಐಎಡಿಎಂಕೆಯಿಂದ ಮೂವರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಯೇ ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ನಿವಾಸದಲ್ಲಿ ಪಕ್ಷದ ಎಂಟು ಹಿರಿಯ ಸಚಿವರು ಚರ್ಚೆ ನಡೆಸಿದ್ದಾರೆ. ಗುರುವಾರ ಸಂಜೆ ಅಮಿತ್‌ ಶಾ ಅವರು, ಪ್ರಧಾನಿ ಮೋದಿ ನಿವಾಸಕ್ಕೆ ತೆರಳಿ ಸಂಪುಟ ಪುನಾರಚನೆ ಕುರಿತಂತೆ ಚರ್ಚೆ ನಡೆಸಿದ್ದಾರೆ. ಅಲ್ಲದೆ ಶುಕ್ರವಾರದಿಂದ ಮೂರು ದಿನಗಳ ಕಾಲ ಆರ್‌ಎಸ್‌ಎಸ್‌ ಮತ್ತು ಇದರ 40 ಸಹ ಸಂಘಟನೆಗಳ ಭೈಠಕ್‌ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಮಿತ್‌ ಶಾ ಅವರು ತೆರಳಲಿದ್ದಾರೆ. ಹೀಗಾಗಿ ಗುರುವಾರವೇ ಯಾರು ರಾಜೀನಾಮೆ ಕೊಡಬೇಕು ಎಂಬುದನ್ನು ಪಕ್ಕಾ ಮಾಡಿ ಹೋಗಿದ್ದಾರೆ.

ಶನಿವಾರವೇ ಪುನಾರಚನೆ?
ಸೆ.3 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಚೀನಾ ಪ್ರವಾಸಕ್ಕೆ ತೆರಳಲಿದ್ದು, ಅದಕ್ಕೂ ಮುನ್ನವೇ ಈ ಪುನಾರಚನೆ ಕಾರ್ಯ ನಡೆಯಲಿದೆ ಎನ್ನಲಾಗಿದೆ. ಅಲ್ಲದೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಶುಕ್ರವಾರ ಬೆಳಗ್ಗೆ ಆಂಧ್ರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಶನಿವಾರ ಸಂಜೆ ವೇಳೆಗೆ ಅವರು ದೆಹಲಿಗೆ ವಾಪಸ್‌ ಆಗಲಿದ್ದಾರೆ ಎಂದು ಹೇಳಲಾಗಿದೆ. ರಾಷ್ಟ್ರಪತಿ ಅವರ ಸಮಯ ನೋಡಿಕೊಂಡು ಪುನಾರಚನೆ ಕಾರ್ಯ ನಡೆಯಲಿದೆ ಎಂದು ಮೂಲಗಳು ಹೇಳಿವೆ.ಸದ್ಯ ಮನೋಹರ್‌ ಪರಿಕ್ಕರ್‌, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಾಜೀನಾಮೆ ನೀಡಿದ್ದರಿಂದ ಎರಡು ಸ್ಥಾನ ಖಾಲಿ ಇವೆ. ಪರಿಸರ ಸಚಿವ ಅನಿಲ್‌ ಮಾಧವ್‌ ದವೆ ನಿಧನದಿಂದಲೂ ಒಂದು ಸ್ಥಾನ ಖಾಲಿ ಉಳಿದಿದೆ. ಈ ಮೂವರ ಖಾತೆಗಳನ್ನು ಬೇರೆಯವರಿಗೆ ಹಂಚಿಕೆ ಮಾಡಲಾಗಿದೆ.2014ರ ಮೇನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದ ಬಳಿಕ ಮೂರನೇ ಬಾರಿಗೆ ಸಂಪುಟದಲ್ಲಿ ಬದಲಾವಣೆಗಳಾಗುತ್ತಿವೆ.

Advertisement

ಎರಡು ಖಾತೆ ಹೆಚ್ಚು ದಿನ ಇರುವುದಿಲ್ಲ: ಜೇಟ್ಲಿ
ಗುರುವಾರ ಬೆಳಗ್ಗೆಯೇ ಸಂಪುಟ ಪುನಾರಚನೆ ಬಗ್ಗೆ ಹಣಕಾಸು ಮತ್ತು ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಅವರು ಮುನ್ಸೂಚನೆ ನೀಡಿದ್ದರು. ತಾವು ಎರಡು ಪ್ರಮುಖ ಖಾತೆ ಹೊಂದಿದ್ದು, ಇದರಿಂದ ವಿಮುಕ್ತಿ ಹೊಂದುವುದಾಗಿ ಹೇಳಿದ್ದರು. ಇದರ ಬೆನ್ನಲ್ಲಿಯೇ ಸಚಿವರು ರಾಜೀನಾಮೆ ನೀಡುತ್ತಿದ್ದಾರೆ.

ಎನ್‌ಸಿಪಿ ಸೇರ್ಪಡೆ ಇಲ್ಲ
ಎನ್‌ಡಿಎ ತೆಕ್ಕೆಗೆ ಜೆಡಿಯು ಬಂದ ಬೆನ್ನಲ್ಲೇ ಎನ್‌ಸಿಪಿ ಸೇರ್ಪಡೆಯಾಗಲಿದೆ ಎಂಬ ಸುದ್ದಿಗಳು ಜೋರಾಗಿದ್ದವು. ಶರದ್‌ ಪವಾರ್‌ ಅವರು ಸಂಪುಟ ಸೇರಲಿದ್ದು, ರಕ್ಷಣೆ ಅಥವಾ ಕೃಷಿ ಸಚಿವರಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಗುರುವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರದ ಮಾಜಿ ಸಚಿವ ಪ್ರಫ‌ುಲ್‌ ಪಟೇಲ್‌ ಇಂಥ ವರದಿಗಳಿಗೆ ಆಧಾರವಿಲ್ಲ ಎಂದಿದ್ದಾರೆ. ಆದರೆ ಕೇಂದ್ರ ಸಂಪುಟದಿಂದ ಬಹಳಷ್ಟು ಮಂದಿ ರಾಜೀನಾಮೆ ಕೊಟ್ಟಿರುವುದರಿಂದ ಈ ಬೆಳವಣಿಗೆಯಾದರೂ ಅಚ್ಚರಿ ಏನಿಲ್ಲ.

ರಾಜೀನಾಮೆ ಕೊಟ್ಟವರು
ಉಮಾಭಾರತಿ, ರಾಜೀವ್‌ ಪ್ರತಾಪ್‌ ರೂಢಿ, ಗಿರಿರಾಜ್‌ ಸಿಂಗ್‌, ರಾಧಾಮೋಹನ್‌ ಸಿಂಗ್‌, ಸಂಜೀವ್‌ ಬಲಿಯಾನ್‌

ಸಂಭಾವ್ಯ ರಾಜೀನಾಮೆ
ನಿರ್ಮಲಾ ಸೀತಾರಾಮನ್‌, ಕಲ್‌ರಾಜ್‌ಮಿಶ್ರಾ

Advertisement

Udayavani is now on Telegram. Click here to join our channel and stay updated with the latest news.

Next