Advertisement

ಜೋಕಟ್ಟೆ : ನದಿ ಒಡಲು ಸೇರುತ್ತಿದೆ ಮಾಂಸದ ತ್ಯಾಜ್ಯ!

12:43 AM Feb 11, 2020 | Team Udayavani |

ಸುರತ್ಕಲ್‌: ಸ್ಥಳೀಯರಿಗೆ ಮೀನುಗಾರಿಕೆಗೆ, ಕೃಷಿಗೆ ಆಧಾರವಾಗಿರುವ ಫ‌ಲ್ಗುಣಿ ನದಿ ನೀರು ಇದೀಗ ಕಲ್ಮಶವಾಗುತ್ತಿದ್ದು, ಒಡಲಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಮಾಂಸದ ತ್ಯಾಜ್ಯ ಸೇರುತ್ತಿದೆ. ಇದು ಜನ, ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

Advertisement

ಬೈಕಂಪಾಡಿ-ಜೋಕಟ್ಟೆಗೆ ಸಾಗುವ ಕೈಗಾರಿಕಾ ಪ್ರದೇಶದ ಜೋಕಟ್ಟೆ ಬ್ರಿಡ್ಜ್ ಬಳಿ ಭಾರೀ ಪ್ರಮಾಣದಲ್ಲಿ ಕೋಳಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಇಲ್ಲಿನ ನೀರಿನ ಹರಿವಿಗಾಗಿ ನಿರ್ಮಿಸಿದ ಸಂಕವೊಂದು ಕೋಳಿ ತ್ಯಾಜ್ಯದಿಂದ ಮುಚ್ಚಿ ಹೋಗಿದ್ದು, ಸ್ಥಳದಲ್ಲಿ ದುರ್ವಾಸನೆ ಹರಡಿದೆ.

ಇನ್ನು ಹಳ್ಳಿಗಳ ಬಳಿ ಇರುವ ಮನೆಗಳ, ಕಂಪೆನಿಗಳ ತ್ಯಾಜ್ಯ, ಕೊಳಚೆ ನೀರು ರಾಜಕಾಲುವೆ ಮೂಲಕ ನೇರವಾಗಿ ನದಿಗೆ ಸೇರುತ್ತಿದ್ದು, ಆತಂಕಕ್ಕೆ ಕಾರಣವಾಗುತ್ತಿದೆ. ಫ‌ಲ್ಗುಣಿ ನದಿಯನ್ನು ಕಲುಷಿತಗೊಳಿಸುತ್ತಿದ್ದರೂ ಸಂಬಂಧಿ ಸಿದವರು ಕಣ್ಮುಚ್ಚಿ ಕುಳಿತಿರುವುದು ಅಚ್ಚರಿಗೆ ಕಾರಣವಾಗಿದೆ.

ಸತ್ತ ಪ್ರಾಣಿ, ಕೋಳಿ ತ್ಯಾಜ್ಯ
ಇಲ್ಲಿನ ಸ್ಥಳೀಯ ಗ್ರಾ.ಪಂ. ತ್ಯಾಜ್ಯ ವಿಲೇವಾರಿಗೆ ಒದ್ದಾಡುತ್ತಿದರೆ, ಮತ್ತೂಂದೆಡೆ ಕೆಲವರು ಸತ್ತಪ್ರಾಣಿಗಳು, ಕೋಳಿತ್ಯಾಜ್ಯ, ಹಳೆಯ ಬಟ್ಟೆ, ಕಸಕಡ್ಡಿಗಳನ್ನು ಚೀಲದಲ್ಲಿ ತುಂಬಿಸಿ ಇಲ್ಲಿನ ಸಂಕದ ಬಳಿ ನದಿಗೆ ಎಸೆಯುತ್ತಿದ್ದಾರೆ. ಸ್ಥಳೀಯ ಪ್ರಾಣಿ ಪಕ್ಷಿಗಳಿಗೂ ಈ ನೀರು ಕುಡಿಯಲು ಅಯೋಗ್ಯವಾಗಿದೆ. ಒಂದು ಕಾಲಕ್ಕೆ ಸಾವಿರಾರು ವಲಸೆ ಪಕ್ಷಿಗಳು ಆಶ್ರಯ ಕಂಡುಕೊಂಡು ಸಂತಾನೋತ್ಪತ್ತಿ ನಡೆಸುತ್ತಿದ್ದವು. ಆದರೆ ಇದೀಗ ಕಲ್ಮಶ ನೀರು ಇವುಗಳಿಗೂ ಕಂಟಕರವಾಗಿದೆ.

ಕಪ್ಪು ಬಣ್ಣಕ್ಕೆ ತಿರುಗಿದ ನೀರು
ಇಲ್ಲಿ ಅಗಾಧ ಪ್ರಮಾಣದಲ್ಲಿ ನೀರಿನ ಸೆಲೆಯಿದ್ದು ಇದು ಮರವೂರು ಬಳಿ ಫ‌ಲ್ಗುಣಿ ನದಿಯನ್ನು ಸೇರುತ್ತದೆ. ಈ ಹಿಂದೆ ಹಚ್ಚ ಹಸುರಿನ ತಿಳಿ ನೀರು ಕಂಗೊಳಿಸುತ್ತಿದ್ದರೆ ಇದೀಗ ಮಾಲಿನ್ಯ ಗೊಂಡು ಕಪ್ಪು ಬಣ್ಣಕ್ಕೆ ತಿರುಗಿದೆ. ಮೀನುಗಳ, ಮಾಂಸದ ತುಂಡಿಗಾಗಿ ಹುಡುಕಾಟಕ್ಕೆ ಪ್ರಾಣಿಗಳು ನೀರಿಗಿಳಿದರೆ ತೈಲ ಮಿಶ್ರೀತ ಕಪ್ಪು ಬಣ್ಣ ಮೈ ಎಲ್ಲ ಮೆತ್ತಿಕೊಳ್ಳತ್ತದೆ.

Advertisement

ಪಟ್ಟಣದಲ್ಲಿರುವ ಜನರಿಗೆ ಮಳವೂರು ನದಿಯಿಂದ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ. ಆದರೂ ಕೊಳಚೆ ನೀರು ಸೇರುತ್ತಿದ್ದರೂ ಅದನ್ನು ತಡೆದು ಪಾವಿತ್ರ್ಯ ಕಾಪಾಡುವ ನಿಟ್ಟಿನಲ್ಲಿ ಯಾರೊಬ್ಬರೂ ಗಮನಹರಿಸುತ್ತಿಲ್ಲ. ಇಂತಹ ಕೊಳಕು ನೀರಿನಿಂದ ಹಿಡಿಯುವ ಮೀನುಗಳ ಕೂಡ ಆರೋಗ್ಯಕ್ಕೆ ಮಾರಕವಾಗುವ ಸಾಧ್ಯತೆ ಇದೆ.

ಸುರಕ್ಷಾ ಬೇಲಿಯಲ್ಲೂ ನೇತಾಡುತ್ತದೆ ತ್ಯಾಜ್ಯ!
ಬೈಕಂಪಾಡಿಯಿಂದ ಕೈಗಾರಿಕಾ ಪ್ರದೇಶದ ಇಕ್ಕೆಲಗಳಲ್ಲೂ ತ್ಯಾಜ್ಯ ತಂದು ರಾಶಿ ಹಾಕದಂತೆ ಅರಣ್ಯ ಇಲಾಖೆ ಮತ್ತು ಇತರ ಇಲಾಖೆ ಸೇರಿ ರಸ್ತೆಯ ಎರಡೂ ಬದಿ ತಂತಿ ಬೇಲಿ ನಿರ್ಮಿಸಿ ಸಸಿಗಳನ್ನು ನೆಟ್ಟಿತ್ತು. ಇದರಿಂದ ತ್ಯಾಜ್ಯ ಸುರಿಯುವ ಘಟನೆ ಕೆಲವೆಡೆ ಕಡಿಮೆಯಾದರೂ ನೀರಿನ ಒರತೆ ಇರುವ ಪ್ರದೇಶದಲ್ಲಿ ತಂತಿ ಬೇಲಿ ಲೆಕ್ಕಿಸದೆ ಸುರಿಯುತ್ತಿದ್ದಾರೆ.

ನಿಗಾ ವಹಿಸಿ ಕ್ರಮ ಕೈಗೊಳ್ಳಲಾಗುವುದು
ಈ ಭಾಗದಲ್ಲಿ ತ್ಯಾಜ್ಯ ಎಸೆಯುವ ಬಗ್ಗೆ ಪರಿಶೀಲಿಸಿ ಸಂಬಂಧ ಪಟ್ಟ ಗ್ರಾಮ ಪಂಚಾಯತ್‌ಗೆ ಕಾರಣ ಕೇಳಿ ಪತ್ರ ಬರೆಯಲಾಗಿದೆ. ಹೆದ್ದಾರಿ ಬದಿ ತ್ಯಾಜ್ಯ ಎಸೆಯದಂತೆ ತಂತಿ ಬೇಲಿ ಹಾಕಲಾಗಿದೆ. ರಾತ್ರಿ ವೇಳೆ ಎಲ್ಲಿಂದಲೋ ಬಂದು ತ್ಯಾಜ್ಯ ಎಸೆದು ಹೋಗುವವರ ಬಗ್ಗೆ ನಿಗಾ ವಹಿಸಿ ಕ್ರಮ ಕೈಗೊಳ್ಳಬೇಕಿದೆ.
-ಕೀರ್ತಿ ಕುಮಾರ್‌,
ಪರಿಸರ ಅಧಿಕಾರಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ

ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next