ಕಲಬುರಗಿ: ಎಲ್‌ಕೆಜಿ ಮಗುವಿನಿಂದ ಹಿಡಿದು ಮುಪ್ಪಿನ ವ್ಯಕ್ತಿಗಳವರೆಗಿಂದು ನಾವು ಒತ್ತಡ ಕಾಣುತ್ತಿದ್ದು, ಇದೇ ಒತ್ತಡ ದೈಹಿಕ ಹಾಗೂ ಮಾನಸಿಕವಾಗಿ ಪರಿಣಾಮ ಬೀರುತ್ತಿರುವುದರಿಂದ ಹಲವಾರು ಮಸ್ಯೆ ಎದುರಿಸುವಂತಾಗಿದೆ ಎಂದು ಮನೋವಿಜ್ಞಾನಿ ಡಾ| ಸಿ.ಆರ್. ಚಂದ್ರಶೇಖರ ಹೇಳಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘಸ ಎಸ್‌ಬಿಆರ್ ಶಾಲೆಯ ಸ್ಟಡಿ ಸೆಂಟರ್‌ನಲ್ಲಿ ವಿಕಾಸ ಅಕಾಡೆಮಿ, ಡಾ| ಎಸ್.ಎಸ್. ಸಿದ್ಧಾರೆಡ್ಡಿ, ರಾಜ್ಯ ಫಾರ್ಮಾಸಿಸ್ಟ್ ಸಂಘ, ಆಪ್ತ ಸಮಾಲೋಚನಾ ಕೇಂದ್ರ ಹಾಗೂ ಎಸ್‌ಬಿಆರ್ ಪಬ್ಲಿಕ್ ಶಾಲೆಗಳ ಆಶ್ರಯದಲ್ಲಿ ಲಿಂಗೈಕ್ಯ ಡಾ| ಅಕ್ಕಮಹಾದೇವಿ ಶಿವಕುಮಾರ ಸ್ವಾಮಿ ಸ್ಮರಣಾರ್ಥ ಆಯೋಜಿಸಲಾದ ಹವ್ಯಾಸಿ ಆಪ್ತ ಸಮಾಲೋಚಕರ ಪುನರ್ ಮನನ ತರಬೇತಿ ಕಾರ್ಯಗಾರ ಉದ್ದೇಶಿಸಿ ಅವರು ಮಾತನಾಡಿದರು.
ದೈಹಿಕ ಒತ್ತಡ ಪರಿಗಣನೆಗೆ ತೆಗೆದುಕೊಂಡು ವೈದ್ಯರ ಬಳಿ ತೆರಳುತ್ತೇವೆ. ಆದರೆ ಮಾನಸಿಕ ಕಾಯಿಲೆ ಕಡೆ ಹೆಚ್ಚಿನ ಒತ್ತು ಕೊಡೋದಿಲ್ಲ. ದೈಹಿಕ ಒತ್ತಡಕ್ಕೆ ಮಾನಸಿಕತೆಯೂ ಕಾರಣ ಎನ್ನುವುದನ್ನು ಮರೆಯುತ್ತಿರುತ್ತೇವೆ. ಮಾನಸಿಕ ಚಿಕಿತ್ಸೆಗೆ ಆಪ್ತ ಸಮಾಲೋಚಕರು ಬೇಕು. ಜತೆಗೆ ಸಾಂತ್ವನ ನುಡಿ ಬೇಕು ಎಂದು ವಿವರಿಸಿದರು.
ಈ ಹಿಂದೆ ನಾವಿ ಅವಿಭಕ್ತ ಕುಟುಂಬ ಹೊಂದಿದ್ದೆವು. ಮನೆಯಲ್ಲಿ ಹಿರಿಯರಿಂದ ಸಾಂತ್ವನ ಸಿಗುತ್ತಿತ್ತು. ಆದರೆ ನಾವಿಂದು ಹರಿದು ಹಂಚಿ ಹೋಗಿದ್ದು, ಒಂದು ಮನೆಯಲ್ಲಿ ನಾಲ್ಕು ಜನರಿದ್ದರೆ ನಾಲ್ಕು ಟಿವಿ, ನಾಲ್ಕು ಮೊಬೈಲ್‌ಗಳನ್ನು ಹೊಂದಿ ಸಂಪರ್ಕ ಹಾಗೂ ಸಮನ್ವಯತೆ ಇಲ್ಲದಂತಾಗಿ ಎಲ್ಲದರಲ್ಲೂ ಕುಗ್ಗಿದ್ದೇವೆ ಎಂದರು.
ಎಸ್‌ಬಿಆರ್ ಶಾಲೆಯ ಪ್ರಾಚಾರ್ಯ ಪ್ರೊ| ಎನ್.ಎಸ್. ದೇವರಕಲ್ ಅವರು ಡಾ| ಸಿ.ಆರ್. ಚಂದ್ರಶೇಖರ ಬರೆದ ಮಾನಸಿಕ ಆರೋಗ್ಯ ನಿಮ್ಮ ಮಕ್ಕಳು ನಿಮ್ಮ ಪ್ರಶ್ನೆಗಳು, ಸಮಾಧಾನ ಚಿತ್ತರಾಗಿ ಹಾಗೂ ಹೆಲ್ತ್ ಮೈಂಡ್ ಆ್ಯಂಡ್ ಯುವರ್ ಚಿಲ್ಡ್ರನ್-ಯುವರ್ ಕ್ವಶ್ಚನ್ ಎನ್ನುವ ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.
ಹಿರಿಯ ಆಪ್ತ ಸಮಾಲೋಚಕ ಎ.ಎಸ್. ರಾಮಚಂದ್ರ, ಯುನೈಟೆಡ್ ಆಸ್ಪತ್ರೆಯ ಡಾ| ವೀಣಾ ವಿಕ್ರಂ ಸಿದ್ಧಾರೆಡ್ಡಿ, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ ಸಂಘದ ಅಧ್ಯಕ್ಷ ಬಿ.ಎಸ್. ದೇಸಾಯಿ, ಮಹಾನಂದಾ ಹಿರೇಮಠ ಇದ್ದರು. ಜಿಲ್ಲಾ ಕನ್ನಡ ವೈದ್ಯಕೀಯ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಎಸ್.ಎಸ್. ಗುಬ್ಬಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ಸಂಯೋಜಕ ಎಸ್. ಎಸ್.ಹಿರೇಮಠ ಸ್ವಾಗತಿಸಿ, ನಿರೂಪಿಸಿದರು. ರೇಣುಕಾ ಗೊಬ್ಬೂರ ಪ್ರಾರ್ಥನಾ ಗೀತೆ ಹಾಡಿದರು. ಎಸ್‌ಬಿಆರ್ ಶಾಲೆ ವಿಜ್ಞಾನ ಶಿಕ್ಷಕ ಜಿ.ಕೆ. ಪ್ರಸಾದ ವಂದಿಸಿದರು.