Advertisement

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

11:52 AM Sep 29, 2024 | Team Udayavani |

ಜಗತ್ತಿನ ಜನಸಂಖ್ಯೆಯಲ್ಲಿ ಶೇ. 62.3ರಷ್ಟು ಮಂದಿ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ. ಭಾರತದಲ್ಲಿ 80 ದಶಲಕ್ಷಕ್ಕಿಂತಲೂ ಹೆಚ್ಚು ಮಂದಿ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುತ್ತಾರೆ. ವ್ಯಕ್ತಿಯೊಬ್ಬರು ಒಂದು ದಿನಕ್ಕೆ ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಸರಾಸರಿ ಅವಧಿಯು 2.23 ತಾಸುಗಳಾಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರನ್ನು ಮತ್ತು ಅವರ ಚಟುವಟಿಕೆಗಳನ್ನು ವೀಕ್ಷಿಸುವುದರಿಂದ ಜಗತ್ತಿನ ಜತೆಗೆ ಸುಸಂಪರ್ಕ ಹೊಂದಿರುವ ಭಾವ ನಮ್ಮಲ್ಲಿ ಉಂಟಾಗುತ್ತದೆ. ಆದರೆ ಇದಕ್ಕೆ ಇನ್ನೊಂದು ಕರಾಳ ಮುಖವೂ ಇದೆ.

Advertisement

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ

  1. ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಅಸಂಪೂರ್ಣತೆ ಮತ್ತು ಖನ್ನತೆಯ ಭಾವನೆಗಳು ಉಂಟಾಗಬಹುದು ಎಲ್ಲರಲ್ಲೂ ಇದು ಉಂಟಾಗಬಹುದಾದರೂ ಹದಿಹರಯದವರು ಮತ್ತು ಯುವಜನರಲ್ಲಿ ಇದರ ಸಾಧ್ಯತೆ ಹೆಚ್ಚು. ಸಾಮಾಜಿಕ ಮಾಧ್ಯಮಗಳ ಬಳಕೆಯು ಮಿದುಳಿನ ಶ್ಲಾಘನಾತ್ಮಕ ಪಥದ ಬಳಕೆಯನ್ನು ಮಾಡಿಕೊಳ್ಳುವ ಮೂಲಕ “ಫೀಲ್‌ ಗುಡ್‌ ಕೆಮಿಕಲ್‌’ ಅಥವಾ ಡೋಪಮೈನ್‌ ಸ್ರಾವಕ್ಕೆ ಕಾರಣವಾಗಿ ಅದರ ಚಟಕ್ಕೆ ಒಳಗಾಗುವಂತೆ ಮಾಡುತ್ತದೆ. ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಏನನ್ನಾದರೂ ಪೋಸ್ಟ್‌ ಮಾಡಿದಾಗ ನಮ್ಮ ಗೆಳೆಯ-ಗೆಳತಿಯರು, ಕುಟುಂಬ ಸದಸ್ಯರು ಅದನ್ನು ಲೈಕ್‌ ಮಾಡುತ್ತಾರೆ, ಇದರಿಂದ ಡೋಪಮೈನ್‌ ಸ್ರಾವಕ್ಕೆ ಪ್ರಚೋದನೆ ಉಂಟಾಗುತ್ತದೆ. ಆದರೆ ಇಂತಹ ಲೈಕ್‌ಗಳು ಅಥವಾ ಮೆಚ್ಚುಗೆ ಬಾರದೆ ಇದ್ದಾಗ ನಮ್ಮ ಆತ್ಮಗೌರವ ಮತ್ತು ಆತ್ಮವಿಶ್ವಾಸ ಹಾಗೂ ಪರಿಪೂರ್ಣತೆಯ ಭಾವಕ್ಕೆ ಪೆಟ್ಟು ಬೀಳುತ್ತದೆ. ಡಿಜಿಟಲ್‌ ಆಗಿರುವ ಸಾಮಾಜಿಕ ಮಾಧ್ಯಮಗಳ ಮೂಲಕ ಜಾಳುಜಾಳಾದ, ತೋರಿಕೆಯ ಸಂವಹನ ಹೆಚ್ಚಿದಂತೆ ನಿಜ ಬದುಕಿನ ಗಾಢವಾದ ಸಂವಹನಗಳು, ಸಂಬಂಧಗಳು ಕಡಿಮೆಯಾಗುತ್ತವೆ. ಇದರಿಂದಾಗಿ ಏಕಾಕಿತನ, ಖನ್ನತೆ ಮತ್ತು ಆತ್ಮಹತ್ಯಾತ್ಮಕ ವರ್ತನೆಗಳು ಹೆಚ್ಚುತ್ತವೆ.
  2. ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದ ಉತ್ಪಾದಕತೆ ಮತ್ತು ಸೃಜನಶೀಲತೆ ನಷ್ಟ
  3. ಫೊಮೊಅಥವಾ “ಫಿಯರ್‌ ಆಫ್ ಮಿಸಿಂಗ್‌ ಔಟ್‌‘ (ಅಸ್ತಿತ್ವವನ್ನು ಕಳೆದುಕೊಳ್ಳುವ ಭಯ) ಸಾಮಾಜಿಕ ಮಾಧ್ಯಮಗಳು ಮತ್ತು ಅವುಗಳ ಅತಿಯಾದ ಬಳಕೆಯ ಜತೆಗೆ ಸಂಬಂಧ ಹೊಂದಿರುವ ವಿನೂತನ ಚಾಳಿ ಇದು.

“ಫೊಮೊ’ದಿಂದಾಗಿ ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮಗಳನ್ನು, ಜಾಲತಾಣಗಳನ್ನು ಆಗಾಗ ಪರಿಶೀಲಿಸುತ್ತ, ರಿಫ್ರೆಶ್‌ ಮಾಡುತ್ತ ಇರುತ್ತಾರೆ. ಡಿಜಿಟಲ್‌ ಜಗತ್ತಿನಲ್ಲಿ ನಡೆಯುತ್ತಿರುವ ಯಾವುದೋ ಒಂದು ಹೊಸತು ತನ್ನ ಗಮನಕ್ಕೆ ಬಾರದೆ ಹೋಗಬಹುದು ಎಂಬ ಆತಂಕವೇ ಇದಕ್ಕೆ ಕಾರಣ. ಇಂಥವರು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರ ಜೀವನದ ಘಟನೆಗಳ ಅತ್ಯುತ್ತಮ ಭಾಗಗಳಿಗೆ ತೆರೆದುಕೊಂಡಿರುತ್ತಾರೆ. ಇದು ಆತಂಕ, ಆತ್ಮವಿಶ್ವಾಸ ಕುಸಿತ, ಅಪರಿಪೂರ್ಣತೆಯ ಭಾವನೆಗಳಿಗೆ ಕಾರಣವಾಗಿ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಇನ್ನಷ್ಟು ಹೆಚ್ಚಿಸುವುದಕ್ಕೆ ಕಾರಣವಾಗಬಹುದು.

  1. ಸೈಬರ್‌ ದೌರ್ಜನ್ಯ

ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಒಬ್ಬ ವ್ಯಕ್ತಿಯು ಇನ್ನೊಬ್ಬರ ಮೇಲೆ ಉದ್ದೇಶಪೂರ್ವಕವಾಗಿ ಸತತ ನಿಂದನೆ, ದೌರ್ಜನ್ಯ, ಶೋಷಣೆ, ಅಪಹಾಸ್ಯ ನಡೆಸುವುದನ್ನು ಸೈಬರ್‌ ಬುಲ್ಲೀಯಿಂಗ್‌ ಅಥವಾ ಸೈಬರ್‌ ದೌರ್ಜನ್ಯ ಎಂದು ಕರೆಯಲಾಗುತ್ತದೆ. ಇದರಿಂದ ವ್ಯಕ್ತಿಯ ಆತ್ಮವಿಶ್ವಾಸ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ತರಹದ ವ್ಯತಿರಿಕ್ತ ಪರಿಣಾಮಗಳು ಉಂಟಾಗಬಹುದು.

Advertisement

ಸಾಮಾಜಿಕ ಮಾಧ್ಯಮಗಳು ಸೈಬರ್‌ ದೌರ್ಜನ್ಯ ಹಾಗೂ ಅವಹೇಳನಕಾರಿ ವದಂತಿಗಳು, ಸುಳ್ಳುಗಳು ಮತ್ತು ನಿಂದನೆಯನ್ನು ನಡೆಸುವ ಹಾಟ್‌ಸ್ಪಾಟ್‌ಗಳಾಗಿವೆ. ಇಂತಹ ಘಟನೆಗಳಿಂದ ಜನರ ಮನಸ್ಸಿನ ಮೇಲೆ ವಾಸಿಯಾಗದಂತಹ ಆಘಾತ ಉಂಟಾಗಬಹುದು.

  1. ಫಿಲ್ಟರ್‌ ಗುಳ್ಳೆಗಳು

ಸಾಮಾಜಿಕ ಮಾಧ್ಯಮಗಳು ಉಪಯೋಗಿಸುವ ಅಲ್ಗಾರಿತಂಗಳು ಫಿಲ್ಟರ್‌ ಗುಳ್ಳೆಗಳನ್ನು ಸೃಷ್ಟಿಸಬಹುದಾಗಿದೆ. ಈ ಫಿಲ್ಟರ್‌ ಬಬಲ್‌ಗ‌ಳಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಿ ತನ್ನ ಆಸಕ್ತಿಯ ವಿಷಯಗಳಿಗೆ ಪದೇಪದೆ ಒಡ್ಡಿಕೊಳ್ಳುತ್ತಾನೆ. ತನಗೆ ಎದುರಾಗುವ ಇಂತಹ ವಿಷಯಗಳಿಂದಾಗಿ ಆತನ ಅಭಿಪ್ರಾಯಗಳು ಏಕಪಕ್ಷೀಯವಾಗಿ, ಪಕ್ಷಪಾತಿಯಾಗಿ ಬದಲಾಗಬಹುದು ಮತ್ತು ಆತ ಪರ್ಯಾಯ ಅಭಿಪ್ರಾಯಗಳು, ಕಲ್ಪನೆಗಳು ಮತ್ತು ಆಲೋಚನೆಗಳನ್ನು ಸ್ವೀಕರಿಸದ/ ಒಪ್ಪದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು.

  1. ನಿದ್ದೆಯ ಚಕ್ರದಲ್ಲಿ ವ್ಯತ್ಯಯ

ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದಾಗಿ ನಿದ್ದೆಯ ಚಕ್ರದಲ್ಲಿ ವ್ಯತ್ಯಯ ಉಂಟಾಗಬಹುದು. ನಿದ್ದೆಯ ಶೈಲಿ ಮತ್ತು ಲಯದಲ್ಲಿ ಬದಲಾವಣೆ ಉಂಟಾಗುವುದರಿಂದ ತಲೆನೋವು, ಸಿಟ್ಟಿಗೇಳುವುದು ಮತ್ತು ದೇಹದಲ್ಲಿ ನೋವು ಕಾಣಿಸಿಕೊಳ್ಳಬಹುದು.

ಸಾಮಾಜಿಕ ಮಾಧ್ಯಮ ಬಳಕೆಯ ಜತೆಗೆ ಆರೋಗ್ಯಯುತ ಸಂಬಂಧ ಇರಿಸಿಕೊಳ್ಳುವುದು ಹೇಗೆ?

1. ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ವಿಷಯಗಳನ್ನು ವಿವೇಚನಾರಹಿತವಾಗಿ ಸ್ಕ್ರೋಲ್‌ ಮಾಡುವುದನ್ನು ಬಿಟ್ಟುಬಿಡಿ ಸಾಮಾಜಿಕ ಮಾಧ್ಯಮ ಬಳಕೆಗೆ ಸಮಯ ಮಿತಿಯನ್ನು ಹಾಕಿಕೊಳ್ಳಿ. ಇದಕ್ಕಾಗಿ ನಿಮ್ಮ ಫೋನ್‌ನಲ್ಲಿ ಸೆಟಿಂಗ್‌ ಆ್ಯಪ್‌ ಉಪಯೋಗಿಸಿ. ಸಾಮಾಜಿಕ ಮಾಧ್ಯಮಗಳಲ್ಲಿ ಏನಿದೆ ಎಂದು ನೋಡುವುದಕ್ಕೆ ಒಂದು ನಿರ್ದಿಷ್ಟ ವೇಳಾಪಟ್ಟಿ ಹಾಕಿಕೊಳ್ಳಿ.

2. ನಿಮ್ಮ ಫೀಡ್‌ ವಿವೇಚನೆಯಿಂದ ಕೂಡಿರಲಿ ಧನಾತ್ಮಕತೆ ಮತ್ತು ಸ್ಫೂರ್ತಿಯನ್ನು ಉತ್ತೇಜಿಸುವ ವಸ್ತು-ವಿಷಯಗಳನ್ನು ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಅನುಸರಿಸಿ. ಋಣಾತ್ಮಕತೆಯನ್ನು ಸೃಷ್ಟಿಸುವ, ಋಣಾತ್ಮಕ ಭಾವನೆಗಳು, ಆಲೋಚನೆಗಳನ್ನು ಹುಟ್ಟು ಹಾಕುವ ವಿಷಯಗಳು, ತಾಣಗಳಿಂದ ದೂರವಿರಿ.

3. ಹೋಲಿಕೆಯನ್ನು ಕಡಿಮೆ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವವರು ತಮ್ಮ ನೈಜ ಅಸ್ತಿತ್ವವನ್ನು ಮರೆಮಾಚಿ ಆದರ್ಶ ವ್ಯಕ್ತಿತ್ವವನ್ನು ತೋರ್ಪಡಿಸುತ್ತಾರೆ. ಇದರಿಂದಾಗಿ ಆ ವ್ಯಕ್ತಿಯ ಬಗ್ಗೆ ವೀಕ್ಷಕರಲ್ಲಿ ತಪ್ಪು ಕಲ್ಪನೆ ಉಂಟಾಗುತ್ತದೆ.

4. ಸಾಮಾಜಿಕ ಮಾಧ್ಯಮಗಳ ಬಳಕೆ ಮತ್ತು ಡಿಜಿಟಲ್‌ ಪರದೆಯನ್ನು ವೀಕ್ಷಿಸುವುದರಿಂದ ಆಗಾಗ ಪ್ರಜ್ಞಾಪೂರ್ವಕವಾಗಿ ದೂರ ಸರಿಯಿರಿ ಡಿಜಿಟಲ್‌ ಪರದೆಯಿಂದ ದೂರವಿರುವ, ಸಾಮಾಜಿಕ ಮಾಧ್ಯಮಗಳನ್ನು ಬಳಸದೆ ಇರುವ ದಿನಗಳನ್ನು ನಿಗದಿಪಡಿಸಿಕೊಳ್ಳಿ. ಇಂತಹ ದಿನಗಳಲ್ಲಿ ನಿಸರ್ಗದ ಜತೆ ಇರಿ.

5. ವಾಸ್ತವ ಬದುಕಿನ ಸಂಬಂಧ, ಸಂಪರ್ಕಗಳಿಗೆ ಆದ್ಯತೆ ನೀಡಿ. ನೈಜ ಬದುಕಿನ ಗೆಳೆಯ ಗೆಳತಿಯರು, ಕುಟುಂಬ ಸದಸ್ಯರ ಜತೆಗೆ ಹೆಚ್ಚು ಸಮಯ ಕಳೆಯಿರಿ.

6. ಪೌಷ್ಟಿಕಾಂಶಯುಕ್ತ ಆಹಾರ, ಸಾಕಷ್ಟು ದೈಹಿಕ ಚಟುವಟಿಕೆ-ವ್ಯಾಯಾಮ, ಚೇತೋಹಾರಿ ನಿದ್ದೆ ಮತ್ತು ಆರೋಗ್ಯಪೂರ್ಣ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದಕ್ಕೆ ಆದ್ಯತೆ ನೀಡಿ.

ಸಾಮಾಜಿಕ ಮಾಧ್ಯಮಗಳು ಎರಡು ಅಲಗಿನ ಕತ್ತಿ ಇದ್ದ ಹಾಗೆ. ಅದನ್ನು ವಿವೇಕಯುತವಾಗಿ, ಎಚ್ಚರಿಕೆಯಿಂದ, ಬುದ್ಧಿವಂತಿಕೆಯಿಂದ ಉಪಯೋಗಿಸಿಕೊಳ್ಳಬೇಕು.

ಸಾಮಾಜಿಕ ಮಾಧ್ಯಮ ಬಳಕೆಯು ನಿಮ್ಮ ನಿಯಂತ್ರಣವನ್ನು ಮೀರಿದೆ ಮತ್ತು ಅದರಿಂದಾಗಿ ದೈನಿಕ ಚಟುವಟಿಕೆಗಳು, ಉದ್ಯೋಗ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ನಿಮಗೆ ಅನ್ನಿಸಿದ್ದಲ್ಲಿ ಹಿಂಜರಿಯದೆ ಪರಿಣತರಿಂದ ನೆರವನ್ನು ಪಡೆದುಕೊಳ್ಳಿ.

-ಡಾ| ಪೂನಂ ಸಂತೋಷ್‌

ಕನ್ಸಲ್ಟಂಟ್‌ ಸೈಕಿಯಾಟ್ರಿಸ್ಟ್‌

ಕೆಎಂಸಿ ಆಸ್ಪತ್ರೆ, ಡಾ| ಬಿ.ಆರ್‌.

ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಸಿನ್‌ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next