Advertisement

ಸಮಾಜಕ್ಕೆ ನೀಡುವ ಕೊಡುಗೆಗಳಿಂದ ಅಮರತ್ವ

12:33 PM Aug 29, 2018 | Team Udayavani |

ಬೆಂಗಳೂರು: ಹುಟ್ಟು ಸಾವು ಮನುಕುಲಕ್ಕೆ ಸಹಜ.ಆದರೆ, ಸಮಾಜಕ್ಕೆ ನೀಡುವ ಕೊಡುಗೆಗಳು ಸಾವಿನ ನಂತರವೂ ಜೀವಂತವಾಗಿರಿಸುತ್ತವೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಕರ್ನಾಟಕ ಚಿತ್ರಕಲಾ ಪರಿಷತ್‌, ಮಂಗಳವಾರ ಚಿತ್ರಕಲಾ ಪರಿಷತ್‌ ಸ್ಥಾಪಕ ಅಧ್ಯಕ್ಷ ಆರ್ಯಮೂರ್ತಿ ಮತ್ತು ಟ್ರಸ್ಟಿ ಎಚ್‌.ಕೆ. ಕೇಜ್ರಿವಾಲ್‌ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮುದ್ರಣ ಕಾರ್ಯಾಗಾರ ಮತ್ತು ಗಂಜೀಫಾ ಕಲಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯ ಜೀವದಲ್ಲಿ ಗುರಿ, ಬದ್ಧತೆಯಿಟ್ಟುಕೊಂಡು ಮುಂದೆ ಹೆಜ್ಜೆ ಹಾಕಬೇಕು. ಹೀಗೆ ಮಾಡಿದಾಗ ಮಾತ್ರ ನಾವು ಅಂದು ಕೊಂಡದನ್ನು ಸಾಧಿಸಲು ಸಾಧ್ಯ. ಕೆಲವರಲ್ಲಿ ಎಲ್ಲವೂ ಇರುತ್ತದೆ. ಆದರೆ ಅವರು ಏನೂ ಸಾಧಿಸುವುದಿಲ್ಲ. ಇಂತಹವರು ಇದ್ದರೂ ಸತ್ತಂತೆ. ಈ ನಿಟ್ಟಿನಲ್ಲಿ ಆಲೋಚಿಸಿ ವಿದ್ಯಾರ್ಥಿಗಳು ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಚಿತ್ರಕಲಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಆರ್ಯಮೂರ್ತಿ ಮತ್ತು ಟ್ರಸ್ಟಿ ಎಚ್‌.ಕೆ.ಕೇಜ್ರಿವಾಲ್‌ಅವರ ಕಾರ್ಯ ಪ್ರಶಂಸನೀಯ. ಮಹಾನ್‌ ಚೇತನಗಳು ನಿಧನದ ನಂತರವೂ ನಮ್ಮ ಮುಂದೆ ಜೀವಂತವಾಗಿದ್ದಾರೆ.ಇಂತವರ ಬದುಕು ನಮಗೆ ದಾರಿ ದೀಪ ಎಂದರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್‌.ಶಂಕರ್‌ ಮಾತನಾಡಿ,ರಾಜ್ಯ ಸರ್ಕಾರ ಕೂಡ ಚಿತ್ರಕಲಾ ಪರಿಷತ್ತಿಗೆ ಆರ್ಥಿಕ ಸಹಾಯ ನೀಡುತ್ತಿದೆ. ಇದರ ಜತೆ ಸಚಿವೆ ಜಯಮಾಲ ಅವರು ತಮ್ಮ ಅನುದಾನದಲ್ಲಿ ರಾಜರಾಜೇಶ್ವರಿ ನಗರದಲ್ಲಿ ತಲೆ ಎತ್ತಿರುವ ಚಿತ್ರಕಲಾ ಕ್ಯಾಂಪಸ್‌ಗೆ ಆರ್ಥಿಕ ಅನುದಾನ ನೀಡಲು ಮುಂದೆ ಬಂದಿದ್ದಾರೆ ಎಂದು ಹೇಳಿದರು.

Advertisement

ಚಿತ್ರಕಲಾ ಪರಿಷತ್‌ ಸ್ಥಾಪಕ ಅಧ್ಯಕ್ಷ ಆರ್ಯಮೂರ್ತಿ ಅವರ ಪುತ್ರ ಸೇನೆಯ ನಿವೃತ್ತ ಏರ್‌ಮಾರ್ಷಲ್‌ ಅಭಯ್‌ಕುಮಾರ್‌ ಮಾತನಾಡಿದರು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಜೆ.ಕಮಲಾಕ್ಷಿ, ಚಿತ್ರಕಲಾ ವಿವಿ ಪ್ರಾಂಶುಪಾಲ ಪ್ರೊ.ತೇಜೇಂದ್ರ ಸಿಂಗ್‌ ಬಾವ್ನಿ ಇತರರಿದ್ದರು. 

“ಅರಸು ಹೆಸರಿನಲ್ಲಿ ಪ್ರಶಸ್ತಿ’: ಪರಿಷತ್ತಿನ ಏಳ್ಗೆಗಾಗಿ ದುಡಿದವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಚಿತ್ರಕಲಾ ಪರಿಷತ್ತು ಮುಂದಾಗಿದೆ. ಪರಿಷತ್ತಿಗೆ ಭೂಮಿ ನೀಡಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು, ಪರಿಷತ್‌ ಸಂಸ್ಥಾಪಕರಾದ ಆರ್ಯಮೂರ್ತಿ ಮತ್ತು ಎಚ್‌.ಕೆ.ಕೇಜ್ರಿವಾಲ್‌ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಮುಂದಿನ ಜನವರಿಯಲ್ಲಿ ನಡೆಯುವ ಚಿತ್ರ ಸಂತೆಯಲ್ಲಿ ಅತ್ಯುತ್ತಮ ಕಲಾವಿದರಿಗೆ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್‌.ಶಂಕರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next