ಶಹಾಪುರ: ತಾಲೂಕು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ವತಿಯಿಂದ ಸಂಗೊಳ್ಳಿ ರಾಯಣ್ಣ ಬಲಿದಾನ ದಿನದಂಗವಾಗಿ ಇತ್ತೀಚೆಗೆ ನಗರದ ಜೀವೇಶ್ವರ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರ ಜರುಗಿತು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಹೋತಪೇಠ ಕೈಲಾಸ ಆಶ್ರಮದ ಶಿವಲಿಂಗ ಶರಣರು ಮಾತನಾಡಿ, ದಾನಗಳಲ್ಲಿಯೇ ಸರ್ವ ಶ್ರೇಷ್ಠ ದಾನ ರಕ್ತದಾನ, ದಾನಗಳಲ್ಲಿ ಹಲವಾರು ದಾನ ಮಾಡುವ ಆಯಾಮಗಳಿವೆ. ನಿತ್ಯ ಕಾಯಕದಿಂದ ಬಂದ ಒಂದಿಷ್ಟು ಹಣದಲ್ಲಿ ದಾನ ಧರ್ಮಕ್ಕಾಗಿ ಒಂದಿಷ್ಟು ತೆಗೆದು ದಾನ ಮಾಡುವುದು ಬೇರೆ. ಬಂದ ಲಾಭದಲ್ಲಿ ಮಠ ಮಾನ್ಯಗಳಿಗೆ ಶೈಕ್ಷಣಿಕ ಅಭಿವೃದ್ಧಿಗಾಗಿ ಅನ್ನ ದಾಸೋಹಕ್ಕಾಗಿ ನೆರವು ನೀಡುವುದು ಬೇರೆ ಎಂದರು.
ಮಹಾನ್ ದೇಶಭಕ್ತ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ ಬಲಿದಾನ ದಿನ ಇಂತಹ ಮಹತ್ವದ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಪ್ರಸ್ತುತ ಯುವ ಸಮೂಹ ವಾಟ್ಸಪ್, ಫೇಸ್‌ಬುಕ್ ಎಂಬ ಗೀಳಿಗೆ ಅಂಟಿಕೊಂಡು ಸಮಯ ಹಾಳು ಮಾಡುತ್ತಿದ್ದಾರೆ. ಇಂತದರಲ್ಲಿ ಯುವಕರೆಲ್ಲ ಸೇರಿ ಮಹತ್ವದ ಶಿಬಿರ ಹಮ್ಮಿಕೊಂಡಿರುವುದು ನಿಜಕ್ಕೂ ಸಂತೋಷ. ಇದೇ ರೀತಿ ಮಾನವೀಯ ಮೌಲ್ಯಗಳನ್ನು ಗುರುತಿಸಿ ನಡೆದುಕೊಳ್ಳವ ಕಾರ್ಯಕ್ರಮ ನಡೆಯಲಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಜರುಗಿತು. ಮುಂಚಿತವಾಗಿ ಪಂಜಿನ ಮೆರವಣಿಗೆ ನಡೆಯಿತು. ಕಾರ್ಯಕ್ರಮವನ್ನು ಸಮಾಜದ ಹಿರಿಯ ಮುಖಂಡ ಶರಣಪ್ಪ ಸಲಾದಪುರ ಉದ್ಘಾಟಿಸಿದರು.
ತಾಲೂಕು ಕುರುಬ ಸಮಾಜದ ಅಧ್ಯಕ್ಷ ಭೀಮಣ್ಣ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಡಾ| ಚಂದ್ರಶೇಖರ ಸುಬೇದಾರ, ಜೆಡಿಎಸ್ ಅಧ್ಯಕ್ಷ ವಿಠಲ್ ವಗ್ಗಿ, ಬಸವರಾಜ ವಿಭೂತಿಹಳ್ಳಿ, ದೇವಿಂದ್ರಪ್ಪ ಮುನಮುಟಗಿ, ಕುರಿ ಮತ್ತು ಹುಣ್ಣೆ ನಿಗಮದ ನಿರ್ದೇಶಕ ಶಾಂತಗೌಡ ನಾಗನಟಗಿ ಇದ್ದರು.
ಸಂಘದ ಅಧ್ಯಕ್ಷ ರವಿ ರಾಜಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣು ಮೇಟಿ ಸ್ವಾಗತಿಸಿದರು. ಶ್ರೀಶೈಲ್ ಬಿರೆದಾರ ನಿರೂಪಿಸಿದರು. ಬೀರೆಂದ್ರ ಕೊಂಡಾಪುರ ವಂದಿಸಿದರು. ಸಮಾಜದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.