Advertisement

ಮಾನವ ಹಕ್ಕು ಉಲ್ಲಂಘನೆ ದೂರುಗಳಿಗೆ ತಕ್ಷಣ ಸ್ಪಂದಿಸಿ

12:09 PM Oct 06, 2018 | |

ವಿಜಯಪುರ: ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ದೂರು ಸ್ವೀಕೃತವಾಗುತ್ತಲೇ ನಿರ್ಲಕ್ಷ್ಯ ಮಾಡದೇ ತಕ್ಷಣ ಸ್ಪಂದಿಸಿ, ಕ್ರಮ ಕೈಗೊಳ್ಳಬೇಕು. ಅಲ್ಲದೇ ಒಂದು ತಿಂಗಳೊಳಗೆ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವರದಿ ಸಲ್ಲಿಸುವಂತೆ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕುಮಾರ ದತ್ತ ಸೂಚನೆ ನೀಡಿದರು.

Advertisement

ಶುಕ್ರವಾರ ನಗರದ ಜಿಪಂ ಸಭಾಂಗಣದಲ್ಲಿ ಮಾನವ ಹಕ್ಕುಗಳ ಪ್ರಕರಣಗಳ ವಿಚಾರಣೆ ನಡೆಸಿದ ಅವರು, ಸ್ವೀಕೃತ ದೂರುಗಳ ಕುರಿತು ಮೂರು ತಿಂಗಳಲ್ಲಿ ಇಂತಹ ದೂರುಗಳ ಕುರಿತು ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ
ಇತ್ಯರ್ಥಪಡಿಸಲು ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದರು. 

ದೂರು ಬರುತ್ತಲೇ ಕೆಳಹಂತದ ಅಧಿಕಾರಿಗಳ ಮೇಲೆ ಅವಲಂಬಿತರಾಗಿ ವಿಳಂಬ ಮಾಡದೇ ಹಿರಿಯ ಅಧಿಕಾರಿಗಳು ಖುದ್ದು ವಿಚಾರಣೆ ನಡೆಸಬೇಕು. ಮಾನವ ಹಕ್ಕುಗಳ ಉಲ್ಲಂಘನೆ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಬೇಕು.
ಇದನ್ನು ಜವಾಬ್ದಾರಿಯಿಂದ ನಿರ್ವಹಿಸುವಂತೆ ಸೂಚನೆ ನೀಡಿದರು. ಕಳೆದ 5 ವರ್ಷಗಳಿಂದ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷ ಮತ್ತು ಸದಸ್ಯರು ಇಲ್ಲದ ಹಿನ್ನೆಲೆಯಲ್ಲಿ ಅನೇಕ ಪ್ರಕರಣಗಳು ಬಾಕಿ ಉಳಿದಿದ್ದವು. ಈಗ ಪೂರ್ಣ
ಪ್ರಮಾಣದ ಆಯೋಗ ಕಾರ್ಯರೂಪಕ್ಕೆ ಬಂದಿದೆ. ಅಧ್ಯಕ್ಷರು ಹಾಗೂ ಸದಸ್ಯರು ಪ್ರತಿ ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಿಗೆ ವಿಚಾರಣೆ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು, ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಗಣಿಸುವಂತೆ ಸೂಚಿಸಿದರು.

ವಿಶೇಷವಾಗಿ ಸಂವಿಧಾನದ ಬಗ್ಗೆ ಸ್ಪಷ್ಟವಾಗಿ ಅರಿಯುವ ಹಾಗೂ ಭಾಗ-3ರಲ್ಲಿರುವ ಮಾನವ ಹಕ್ಕುಗಳು ಹಾಗೂ ಭಾಗ-4ರಲ್ಲಿರುವ ರಾಜ್ಯ ನಿರ್ದೇಶನ ತತ್ವಗಳ ಬಗ್ಗೆಯೂ ಸಂಪೂರ್ಣ ಅರಿವು ಹೊಂದಬೇಕು. ವ್ಯಕ್ತಿಗೆ ಸಂವಿಧಾನವು
ಸ್ವಾತಂತ್ರ್ಯ ಸಮಾನತೆ, ಜೀವಿಸುವ ಹಕ್ಕು ಸೇರಿದಂತೆ ಎಲ್ಲ ರೀತಿಯ ಹಕ್ಕುಗಳನ್ನು ಒದಗಿಸಿದ್ದು, ಅವುಗಳ ಉಲ್ಲಂಘನೆ ಆಗದಂತೆ ನಿಗಾ ವಹಿಸಬೇಕು. ದೂರು ಬಂದ ತಕ್ಷಣ ಕ್ರಮ ಕೈಗೊಂಡು ಆಯೋಗಕ್ಕೆ ತೃಪ್ತಿದಾಯಕ ಉತ್ತರ ನೀಡಬೇಕು
ಸೂಚಿಸಿದರು.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದಾಗ ವಿಜಯಪುರ ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಡಿಮೆ ದಾಖಲಾಗಿವೆ. ಈವರೆಗೆ ಬಾಕಿ ಇರುವ ಪ್ರಕರಣಗಳ ಬಗ್ಗೆ ಇಂದು ವಿಚಾರಣೆ ಹಾಗೂ ಪರಿಶೀಲನೆ ನಡೆಸಲಾಗಿದೆ. ದೂರು ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡುವುದರಿಂದ ಮಾನವ ಹಕ್ಕುಗಳ ಆಯೋಗದಿಂದಲೂ ದೂರುಗಳ ಇತ್ಯರ್ಥಕ್ಕೆ ತೊಡಕು ಉಂಟಾಗುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆ ತಡೆಗೆ ಸ್ಥಾಪಿತವಾಗಿರುವ ಆಯೋಗದ ಉದ್ದೇಶ ಈಡೇರಿಕೆಗಾಗಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

Advertisement

ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ ವಿವಿಧ ಕುಂದು-ಕೊರತೆಗಳ ಅರ್ಜಿಗಳ ವಿಚಾರಣೆ ನಡೆಸಿದರು. ವಿಶೇಷವಾಗಿ ಸರ್ಕಾರಿ ಇಲಾಖೆ ವ್ಯಾಪ್ತಿಯಲ್ಲಿನ ನಿವೇಶನ ಹಂಚಿಕೆ, ಪೋಲಿಸ್‌ ಇಲಾಖೆ ವ್ಯಾಪ್ತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ವಸತಿ ಸೌಲಭ್ಯ, ಬೆಳೆ ಪರಿಹಾರ, ಗುಣಮಟ್ಟದ ಕಾಮಗಾರಿ ಸಾಮಾಜಿಕ ಬಹಿಷ್ಕಾರ, ಮಹಿಳಾ ಶೋಷಣೆ, ಆಮ ಆದ್ಮಿ ವಿಮಾ ಸೌಲಭ್ಯ, ಸೇರಿದಂತೆ ಇಂತಹ ವಿವಿಧ ಅರ್ಜಿಗಳ ಬಗ್ಗೆ ಪರಿಶೀಲನೆ ನಡೆಸಿದರು. 

ಅರ್ಜಿಗಳಿಗೆ ಸಂಬಂಧಿಸಿದಂತೆ ಆಯಾ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಆಯೋಗದಲ್ಲಿ ಬಾಕಿ ಇದ್ದ 18 ಪ್ರಕರಣಗಳು ಹಾಗೂ ನೂತನ 3 ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ, ಎಸ್ಪಿ ನಿಕ್ಕಂ ಪ್ರಕಾಶ, ಜಿಪಂ ಸಿಇಒ ವಿಕಾಸ ಸುರಳಕರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next