Advertisement

ಕರಾವಳಿಯಲ್ಲಿರುವ ಮತಾಂತರ ಕೇಂದ್ರಗಳನ್ನು ಕೂಡಲೇ ಮುಚ್ಚಿ: ಶರಣ್ ಪಂಪ್ ವೆಲ್

01:28 PM Sep 19, 2019 | Mithun PG |

ಮುಲ್ಕಿ: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವು ನಗರ ಗ್ರಾಮಗಳಲ್ಲಿ ಮತಾಂತರ ಚಟುವಟಿಕೆಗಳು ಹೆಚ್ಚುತ್ತಿದ್ದು ಅಮಾಯಕ ಮುಗ್ಧ ಹಿಂದುಗಳನ್ನು ಮೋಸದಿಂದ ಮತಾಂತರಗೊಳಿಸುವ ದುಷ್ಕೃತ್ಯಗಳು ನಡೆಯುತ್ತಿದೆ. ಮತಾಂತರದ ವಿರುದ್ಧ ಜನಜಾಗೃತಿ ಮೂಡಿಸಲು ಪರಿಷತ್ ನೇತೃತ್ವದಲ್ಲಿ 26ರಂದು ಮುಲ್ಕಿಯಲ್ಲಿ ಜನಜಾಗೃತಿ ಜನಾಂದೋಲನ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ತಿಳಿಸಿದ್ದಾರೆ.

Advertisement

ಮೂಲ್ಕಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರಾವಳಿಯ ಹಲವು ಕಡೆಗಳಲ್ಲಿ ಪ್ರಾರ್ಥನಾಮಂದಿರದ ಮುಖಾಂತರ ಕ್ರಿಶ್ಚಿಯನ್ ಮಿಷನರಿಗಳು ಹಿಂದೂಗಳನ್ನು ಮತಾಂತರ ಮಾಡಲು ತೊಡಗಿದೆ. ಮುಲ್ಕಿಯ ಡಿವೈನ್ ಕಾಲ್ ಸೆಂಟರ್ ನ ಪ್ರಾರ್ಥನಾ ಮಂದಿರದ ಮೇಲೆ ಪ್ರಕರಣ ದಾಖಲಾಗಿದೆ. ಈ ಪ್ರಾರ್ಥನಾ ಮಂದಿರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈಗಾಗಲೇ ಜಿಲ್ಲಾಧಿಕಾರಿ ಸಹಿತ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ದೂರು ನೀಡಲಾಗಿದ್ದು ಯಾವುದೇ ಕ್ರಮ ಕೈಗೊಳ್ಳದ ಕಾರಣ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಕೆಲವೊಂದು ಕ್ರಿಶ್ಚಿಯನ್ ಸಮುದಾಯದ ಮುಖಂಡರು ಈ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ನಮ್ಮ ಹೋರಾಟ ಕ್ರಿಶ್ಚಿಯನ್ ಸಮುದಾಯದ ವಿರುದ್ಧ ಅಲ್ಲ. ಬದಲಾಗಿ ನಾವು ವಿರೋಧಿಸುತ್ತಿರುವುದು ಹಿಂದೂಗಳನ್ನು ಮತಾಂತರ ಮಾಡುವ ವ್ಯಕ್ತಿಗಳು ಮತ್ತು ಅವರ ಸಂಸ್ಥೆಗಳ ವಿರುದ್ಧ ಮಾತ್ರ. ನಾವು ಕ್ರೈಸ್ತ ಸಮುದಾಯಕ್ಕೆ ಗೌರವ ಕೊಡುತ್ತೇವೆ. ಧರ್ಮ ಪ್ರಚಾರದ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ . ಇದರ ವಿರುದ್ಧ ನಮ್ಮ ಹೋರಾಟ ಎಂದು  ಹೇಳಿದರು.

ಮುಲ್ಕಿಯಲ್ಲಿ ನಡೆಯಲಿರುವ ಮತಾಂತರ ವಿರುದ್ಧ ಜನಾಂದೋಲನ ಸಭೆಯಲ್ಲಿ ಸುಮಾರು ಐದು ಸಾವಿರ ಮಂದಿ ಭಾಗವಹಿಸಲಿದ್ದಾರೆ.ಬಪ್ಪನಾಡು ದೇವಸ್ಥಾನದಿಂದ ಮುಲ್ಕಿಯ ಶಿವಾಜಿ ಮಂಟಪದವರೆಗೆ ಕಾರ್ಯಕರ್ತರ ಜನಜಾಗೃತಿ ಮೆರವಣಿಗೆ ನಡೆದು ಬಜರಂಗದಳದ ರಾಷ್ಟ್ರೀಯ ಸಂಯೋಜಕ ಸೂರ್ಯನಾರಾಯಣ ಅವರು ಪ್ರಮುಖ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರಿನ ವಿಶ್ವಹಿಂದೂ ಪರಿಷತ್ ನ ಅಧ್ಯಕ್ಷ ಗೋಪಾಲ್ ಕುತ್ತಾರ್ ವಿಶ್ವ ಹಿಂದೂ ಪರಿಷತ್ತಿನ ಕಾರ್ಯದರ್ಶಿ ಸಂತೋಷ್ ಮಂಗಳೂರು ಬಜರಂಗದಳದ ವಿಭಾಗ ಸಂಚಾಲಕ ಭುಜಂಗ ಕುಲಾಲ್ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರಮೋದ್ ಶೆಟ್ಟಿ ಭಾಗವಹಿಸಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next