Advertisement

ಜಲಾವೃತ ಬೆಳೆಗೆ ತಕ್ಷಣ ಪರಿಹಾರ: ನಿರ್ಮಲಾ

11:21 PM Aug 10, 2019 | Team Udayavani |

ಬೆಳಗಾವಿ: ಬೆಳಗಾವಿ, ಬಾಗಲಕೋಟೆ ಸೇರಿ ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಜಲಾವೃತವಾಗಿರುವ ಬೆಳೆಗಳಿಗೆ ತಕ್ಷಣವೇ ತಾತ್ಕಾಲಿಕ ಪರಿಹಾರ ನೀಡಲು ವಿಮಾ ಕಂಪೆನಿಗಳಿಗೆ ಸೂಚಿಸಲಾಗುವುದು. ಅಲ್ಲದೇ ನೆರೆ ಸಂತ್ರಸ್ತರಿಗೆ ತಕ್ಷಣ ನೆರವಾಗಲು ಪ್ರತಿ ಕುಟುಂಬಕ್ಕೆ 3,800ರೂ. ಪರಿಹಾರ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

Advertisement

ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬೆಳೆವಿಮೆ ಕಂಪನಿಗಳು, ಪ್ರವಾಹ ಪೀಡಿತ ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿ ಮುಳುಗಡೆಯಾಗಿರುವ ಬೆಳೆ ಸಮೀಕ್ಷೆಗೆ ಮುಂದಾಗದೇ ತಕ್ಷಣವೇ ತಾತ್ಕಾಲಿಕವಾಗಿ ಪರಿಹಾರ ನೀಡಬೇಕು. ಸಮೀಕ್ಷೆ ಹಾಗೂ ಹೆಚ್ಚಿನ ಪರಿಹಾರದ ಬಗ್ಗೆ ನಂತರ ನಿರ್ಧರಿಸಬೇಕೆಂದು ಸೂಚನೆ ನೀಡಲಾಗುವುದು ಎಂದರು.

ತೀವ್ರ ಪ್ರವಾಹದ ಹಿನ್ನೆಲೆಯಲ್ಲಿ ಬೆಳೆವಿಮೆ ಕಂತು ಪಾವತಿಸುವ ಅವಧಿ ವಿಸ್ತರಿಸುವ ಅಗತ್ಯವಿದೆ ಎಂಬುದು ತಮಗೆ ಮನವರಿಕೆಯಾಗಿದ್ದು, ಈಗಿರುವ ಆ.15ರ ಬೆಳೆವಿಮೆ ಕಂತು ಪಾವತಿಸುವ ಅವಧಿ ವಿಸ್ತರಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಾಲ ವಸೂಲಾತಿಗೆ ಒತ್ತಡ ಬೇಡ: ಸಾಲ ಮರುಪಾವತಿಸುವಂತೆ ನೆರೆ ಹಾವಳಿ ಸಂತ್ರಸ್ತರಿಗೆ ಮೈಕ್ರೋ ಫೈನಾನ್ಸ್‌ ಕಂಪನಿಗಳು ಒತ್ತಾಯಿಸುವುದು ಸಲ್ಲ. ಸದ್ಯದ ಸ್ಥಿತಿಯಲ್ಲಿ ಯಾರೂ ಸಾಲ ಪಾವತಿ ಮಾಡುವ ಸ್ಥಿತಿಯಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಕಿರುಕುಳ ಕೊಡದೇ ಮರುಪಾವತಿಗೆ ಅವಕಾಶ ನೀಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಆದೇಶ ನೀಡಲಿದೆ ಎಂದು ಭರವಸೆ ನೀಡಿದರು.

ಬೆಳಗಾವಿ ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಾಗ ನೇಕಾರ ಕುಟುಂಬಗಳು ತುಂಬಾ ಸಂಕಷ್ಟಕೀಡಾಗಿರುವುದು ಕಂಡುಬಂದಿದೆ. ಆದ್ದರಿಂದ ನೇಕಾರರ ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಅವಕಾಶ ನೀಡುವಂತೆ ಕ್ರಮ ವಹಿಸಲಾಗುವುದು ಎಂದರು.

Advertisement

ಕೆಸರಿನಲ್ಲೇ ನಡೆದುಕೊಂಡು ಹೋದ ಸಚಿವೆ: ನಿರ್ಮಲಾ ಸೀತಾರಾಮನ್‌ ಅವರು ಧಾಮಣೆ ರಸ್ತೆಯಲ್ಲಿ ಆಗಿರುವ ಹಾನಿಯ ವೀಕ್ಷಣೆ ಮಾಡಿದರು. ಆಗ ಸಚಿವರ ಬಳಿ ಬಂದ ಮಹಿಳೆಯರು ಕಾಲಿಗೆ ಬೀಳಲು ಮುಂದಾದರು. ಕೂಡಲೇ ಮಹಿಳೆಯ ಕೈಹಿಡಿದು ನಿಲ್ಲಿಸಿದ ಸಚಿವರು, ನಿಮ್ಮ ಸಮಸ್ಯೆ ಏನೆಂಬುದನ್ನು ಹೇಳಿ ಎಂದರು.

ಆಗ ಮಹಿಳೆಯರು, ಮೇಡಂ, ನಮ್ಮ ಮನೆಗೆ ಬಂದು ಸ್ಥಿತಿ ನೋಡಿ. ಆಗ ನಿಮಗೆಲ್ಲವೂ ಅರ್ಥವಾಗುತ್ತದೆ ಎಂದಾಗ, ನಿರ್ಮಲಾ ಅವರು ಕೆಸರಿನಲ್ಲಿಯೇ ನಡೆದುಕೊಂಡೇ ಹೋಗಿ ನೀರು ನುಗ್ಗಿದ ಮನೆಗಳು ಹಾಗೂ ಮಗ್ಗಗಳನ್ನು ಪರಿಶೀಲಿಸಿದರು. ನೇಕಾರ ಕಾಲೋನಿ ರಸ್ತೆ ಬಹುತೇಕ ಕೆಸರುಮಯವಾಗಿತ್ತು. ಸಚಿವರ ನಡೆ ಕಂಡು ಸ್ಥಳೀಯ ನಿವಾಸಿಗಳು ಭಾರತ ಮಾತಾಕೀ ಜೈ ಎಂದು ಘೋಷಣೆ ಕೂಗಿದರು.

ಬಾಗಲಕೋಟೆಗೆ ಪ್ರಯಾಣ: ಬಳ್ಳಾರಿ ನಾಲಾ ಪ್ರವಾಹದಿಂದ ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿ ರಸ್ತೆ ಮೂಲಕ ಸಂಕೇಶ್ವರಕ್ಕೆ ತೆರಳುತ್ತಿದ್ದ ಸಚಿವೆ ನಿರ್ಮಲಾ ಪ್ರಯಾಣ ಅರ್ಧಕ್ಕೆ ಮೊಟಕುಗೊಳಿಸಿದರು. ಹತ್ತರಗಿಯಿಂದ ವಾಪಸ್‌ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಾಗಲಕೋಟೆ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಅರಿಯಲು ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next