ಪೇಶಾವರ: ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಪಾಕ್‌ಗೆ ಸಾಲ ನೀಡಲು ಐಎಂಎಫ್ (ಅಂತಾರಾಷ್ಟ್ರೀಯ ಹಣಕಾಸು ನಿಧಿ) ಹಾಕಿರುವ ಷರತ್ತುಗಳು ಆ ದೇಶಕ್ಕೆ ವಿಪರೀತ ತಲೆಬಿಸಿಯನ್ನುಂಟು ಮಾಡಿವೆ.
ಈ ಬಗ್ಗೆ ಮಾತನಾಡಿರುವ ಪ್ರಧಾನಿ ಶೆಹಬಾಜ್ ಷರೀಫ್, ಪಾಕಿಸ್ತಾನ ಅಂಗೀಕರಿಸಬೇಕಾಗಿರುವ ಐಎಂಎಫ್ ಷರತ್ತುಗಳು ಕಲ್ಪನೆಗೂ ಮೀರಿದ್ದು. ಹಾಗೆಯೇ ದೇಶದ ಮುಂದಿರುವ ಆರ್ಥಿಕ ಸವಾಲುಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದಿದ್ದಾರೆ.
ಇಷ್ಟರಮಧ್ಯೆ ಈ ಸವಾಲುಗಳನ್ನು ದಾಟಬೇಕಾದರೆ ಷರತ್ತುಗಳನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ ಎಂದೂ ಹೇಳಿದ್ದಾರೆ. ಖಚಿತವಾಗಿ ಷರೀಫ್ ಏನನ್ನೂ ಹೇಳದಿರುವುದರಿಂದ ಆ ದೇಶ ಏನು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಮೂಲಗಳ ಪ್ರಕಾರ ಐಎಂಎಫ್, ತೆರಿಗೆ ಪ್ರಮಾಣ ಏರಿಸಬೇಕು, ಸಬ್ಸಿಡಿ ಇಳಿಸಬೇಕೆಂಬ ಷರತ್ತು ಹಾಕಿದೆ. ಅಕ್ಟೋಬರ್‌ನಲ್ಲಿ ಚುನಾವಣೆ ಇರುವುದರಿಂದ ಇದನ್ನು ಒಪ್ಪಿಕೊಳ್ಳಲು ಷರೀಫ್ ಸಿದ್ಧರಿಲ್ಲ. ಮತ್ತೂಂದು ಕಡೆ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಸರ್ಕಾರದ ಮೇಲೆ ಅವಧಿಗೂ ಮುನ್ನ ಚುನಾವಣೆ ನಡೆಸಿ ಎಂದು ಒತ್ತಡ ಹಾಕುತ್ತಿದ್ದಾರೆ.
ಪೊಲೀಸ್ ದಾಳಿಗೆ 4 ಉಗ್ರರ ಸಾವು
ತೀವ್ರ ಪ್ರಕ್ಷುಬ್ಧ ಸ್ಥಿತಿಯಲ್ಲಿರುವ ಪಾಕ್‌ನ ಖೈಬರ್ ಪ್ರಾಂತ್ಯದಲ್ಲಿ ಪೊಲೀಸರ ದಾಳಿಗೆ ನಾಲ್ವರು ಉಗ್ರರು ಹತರಾಗಿದ್ದಾರೆ. ಚರ್ಸಡ್ಡ ಜಿಲ್ಲೆಯ ಗುಜರಾಬಾದ್‌ನಲ್ಲಿ ಪೊಲೀಸರ ಸಂಚಾರಿ ವ್ಯಾನ್ ಮೇಲೆ ಶಸ್ತ್ರಸಜ್ಜಿತ ಉಗ್ರರು ದಾಳಿ ಮಾಡಿದರು. ಪ್ರತಿದಾಳಿಯಲ್ಲಿ ಮೂವರು ಸತ್ತಿದ್ದಾರೆ. ಇನ್ನು ಶಬರ್ರಾ ಪ್ರದೇಶದಲ್ಲಿ ಇನ್ನೊಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ.