Advertisement

ಹೋಗಿ ಬಾ, ಮಗಳೇ…

09:05 AM May 16, 2019 | Team Udayavani |

ಮದುವೆ ದಿನ ನಿಗದಿ ಆದಂದಿನಿಂದಲೇ ಹೆಣ್ಣಿನ ಕಣ್ಣಲ್ಲಿ ಕಾತರ. ದಿನ ಎಣಿಸುತ್ತಾ ಕೂರುವ ಸಿಹಿಧ್ಯಾನ. ಯಾವಾಗ ಹುಡುಗನ ತೆಕ್ಕೆಯಲ್ಲಿ ಬೆಚ್ಚಗೆ ಕೂರುತ್ತೇನೋ ಎನ್ನುವ ಹಳವಂಡ. ಮದುವೆಯ ದಿನದಂದೂ ಆಕೆಗೆ ಅದೇ ಹರ್ಷದ ಪುಳಕವೇ ಆದರೂ, ಮದುವೆ ಮಂಟಪದಿಂದ ಹೊರಡುವಾಗ, ಅಲ್ಲಿ ತೆರೆಯಾಗುವ ಚಿತ್ರವೇ ಬೇರೆ. ಮಗಳನ್ನು ಬೀಳ್ಕೊಡುವ ಚಿತ್ರಗಳನ್ನು ತೆಗೆಯುತ್ತಲೇ, ಭಾವುಕರಾದ ಫೋಟೋಗ್ರಾಫ‌ರ್‌ ಇಲ್ಲಿ, ಆ ಕ್ಷಣಗಳಿಗೆ ಅಕ್ಷರದ ಚೌಕಟ್ಟು ಹೊದಿಸಿದ್ದಾರೆ…

Advertisement

ಅಲ್ಲಿ ನಗುವಿನದ್ದೇ ಪುಟ್ಟ ಪುಟ್ಟ ತೊರೆಗಳು. ಮದುವೆ ಗಮ್ಮೆಂದು, ಅರಳಿಕೊಳ್ಳುವುದೇ ಇಂಥ ಸಹಸ್ರಾರು ನಗುವಿನ ಮಿಲನದಿಂದ. ಕಲ್ಯಾಣ ಮಂಟಪದಲ್ಲಿ ಫೋಟೋ ತೆಗೆಯುವುದೆಂದರೆ, ಅದೇನೋ ಹುಮ್ಮಸ್ಸು. ಹೂವಿನ ಉದ್ಯಾನದೊಳಗೆ ನಿಂತು, ಹೂಗಳನ್ನು ಸೆರೆಹಿಡಿದ ಆನಂದದ ಪುಳಕ. “ಸ್ವಲ್ಪ ಸ್ಟೈಲ್‌ ಕೊಡಿ ಸಾರ್‌’ ಅನ್ನುವ ಪ್ರಸಂಗವೇ ಬರುವುದಿಲ್ಲ. ಅಷ್ಟೊಂದು ರಾಶಿನಗು. ಆದರೆ, ಅದೇ ಮದುವೆ ಮನೆಯಲ್ಲಿ ಅದೇ ನಗು, ಜಾರುತ್ತಾ ಜಾರುತ್ತಾ, ಕೊನೆಯ ಬಿಂದುವಿಗೆ ಬಂದು ನಿಲ್ಲುತ್ತದಲ್ಲ… ಅದು ಒಬ್ಬ ಫೋಟೋಗ್ರಾಫ‌ರ್‌ಗೆ, ಕ್ಯಾಮೆರಾ ಶೇಕ್‌ ಆಗಬಾರದೆಂದರೂ, ಆಗುವ ಸಮಯ.

ಅದು ನನ್ನನ್ನೂ ಕಾಡಿದೆ. ಆ ದೃಶ್ಯಗಳನ್ನು ಕ್ಲಿಕ್ಕಿಸುತ್ತಲೇ, ನನಗರಿವಿಲ್ಲದೆ ಭಾವುಕನಾಗುತ್ತೇನೆ. ಹೃದಯದಲ್ಲಿ ಯಾವುದೋ ಸಿಹಿದುಃಖದ ಶ್ರುತಿ. ಕೈ ಬೆರಳಲ್ಲಿ ಹಿಡಿತಕ್ಕೆ ನಿಲುಕದ ಕಂಪನ. ಹಾಗೆ ನನಗಾಗುವ ನರ್ವಸ್‌ನಿಂದಾಗಿ ಆ ಅಪರೂಪದ ಕ್ಷಣಗಳ ಫೋಟೋಗ್ರಫಿ ಹಾಳಾಗಬಹುದು; ಫೋಕಸ್‌ ಔಟ್‌ ಆಗಬಹುದು; ಬ್ಲಿರ್‌ ಆಗಬಹುದು; ಎಕ್ಸ್ ಪೋಸ್‌ ಅಥವಾ ಅಂಡರ್‌ ಎಕ್ಸ್‌ಪೋಸ್‌ ಆದರೂ ಅಚ್ಚರಿಯಿಲ್ಲ. ಆದರೂ, ಹಾಗೆಲ್ಲ ಆಗದಂತೆ ಒಂದು ಎಚ್ಚರಕ್ಕೆ ಕಿವಿಗೊಟ್ಟು, ಕ್ಯಾಮೆರಾ ಮತ್ತು ಲೆನ್ಸು ಅಲುಗಾಡದಂತೆ ಸ್ಟೆಡಿಯಾಗಿ ಹಿಡಿದುಕೊಳ್ಳುವುದೂ ರೂಢಿಯಾಗಿಬಿಟ್ಟಿದೆ. ಯಾವಾಗ ನನ್ನ ಕ್ಯಾಮೆರಾದ ಕೈ ಹಿಡಿತ ದೃಢವಾಗುತ್ತದೋ, ಸಹಜವಾಗಿ ಆ ದೃಶ್ಯಗಳ ಸೆರೆಗೆ ಭಂಗವಿಲ್ಲ.

ಹೆಣ್ಣೊಪ್ಪಿಸುವ ಸುಮಧುರ ಗಳಿಗೆಯನ್ನು ಚಿತ್ರಗಳಲ್ಲಿ ಸೆರೆಹಿಡಿಯುವುದು ನನ್ನಂಥ ಭಾವುಕನಿಗೆ ಒಂದು ಚಾಲೆಂಜೇ ಸರಿ. ಹೆಚ್ಚೆಂದರೆ ಹತ್ತು ಹದಿನೈದು ನಿಮಿಷ ಇದು ನಡೆದರೂ, ಜೀವನಪೂರ್ತಿ ನನ್ನೊಳಗೆ ಇದೊಂದು ಆಲ್ಬಂನಂತೆ ಅಚ್ಚಾಗಿ, ಪದೇಪದೆ ನನ್ನನ್ನು ಅಲುಗಾಡಿಸುತ್ತದೆ. ಅಕ್ಕ, ಅಮ್ಮ, ತಂಗಿ, ಅಣ್ಣ, ಅಪ್ಪ, ಕೊನೆಗೆ ವಧು ಇವರೆಲ್ಲರ ಭಾವುಕತೆಯ, ಆನಂದಬಾಷ್ಪದ ದೃಶ್ಯಗಳು ಯಾವಾಗ ಪ್ರಾರಂಭವಾಗಿ ಯಾವಾಗ ಮುಗಿಯುತ್ತವೋ ಹೇಳಲೂ ಆಗುವುದಿಲ್ಲ. ಇವೆಲ್ಲವನ್ನೂ ಸೆರೆಹಿಡಿದಾದ ಮೇಲೆ, ಅವರಿಗೆ ಕಾಣದಂತೆ ಸ್ವಲ್ಪ ದೂರ ಹೋಗಿ, ನನ್ನ ಕಣ್ಣಂಚಲ್ಲಿ ಜಾರಲು ತುದಿಗಾಲಲ್ಲಿ ನಿಂತ ಕಣ್ಣೀರನ್ನು ಒರೆಸಿಕೊಳ್ಳುತ್ತೇನೆ. ಹಾಗೆ ಕಿರುಬೆರಳಿಗೆ ಕಣ್ಣೀರು ಅಂಟಿಕೊಳ್ಳುವ ಹೊತ್ತಿಗೆ, ಆ ಕುಟುಂಬದ ಭಾಗವೇ ಆಗಿಬಿಡುತ್ತೇನೆ.

ವಧುವನ್ನು ಬೀಳ್ಕೊಡುತ್ತಿರುವ ಈ ಚಿತ್ರಗಳನ್ನು ತೆಗೆದಿದ್ದು, ಇತ್ತೀಚೆಗೆ ದಕ್ಷಿಣ ಕನ್ನಡದ ಉಜಿರೆಯ ಕಿಲ್ಲೂರೆಂಬ ಪುಟ್ಟ ಹಳ್ಳಿಯಲ್ಲಿ. ಅಕ್ಷತಾ ಹೆಗ್ಡೆ, ಗಣೇಶ್‌ ಶೆಟ್ಟಿ ಅವರನ್ನು ವರಿಸಿದ ಮಧುರ ಕ್ಷಣ. ನನ್ನ ಅಳುವೂ ಅವರ ದುಃಖದಲ್ಲಿ ಕರಗಿಹೋಯಿತು. ಕಳೆದ ಇಪ್ಪತ್ತು ವರ್ಷಗಳಿಂದ ನೂರಾರು ಮದುವೆಯ ಪೋಟೋಗ್ರಫಿ ಮಾಡಿದ್ದರೂ, ಇಂಥ ಅಪರೂಪದ ದೃಶ್ಯಗಳು ಯಾಕೋ ಇತ್ತೀಚೆಗೆ ಕಾಣದಾಗಿದ್ದೆ. ಫೋಟೋಗ್ರಫಿ ಆರಂಭಿಸಿದ ದಿನಗಳಲ್ಲಿ, ಮದುವೆಗಳು ಸಾಂಪ್ರದಾಯಿಕವಾಗಿದ್ದವು. ಈಗಿನಂತೆ ಮೊಬೈಲು, ಅಂತರ್ಜಾಲ, ನೂರಾರು ಟಿವಿ ಚಾನೆಲ್ಲುಗಳು ಮನರಂಜನೆಗಳು ಇರಲಿಲ್ಲವಾದ್ದರಿಂದ ಎಲ್ಲರ ಮನಸ್ಸು ಮತ್ತು ಹೃದಯಗಳು ಸಹಜವಾಗಿ ಸ್ಪಂದಿಸುತ್ತಿದ್ದವು. ಮದುವೆಗಳಂತೂ ಧಾರೆಯೆರೆಯುವ ಕ್ಷಣ, ತಾಳಿಕಟ್ಟುವ ಕ್ಷಣ, ಹೆಣ್ಣೊಪ್ಪಿಸುವ ಕ್ಷಣಗಳೆಲ್ಲಾ ಹೃದಯತುಂಬಿ ಅದಕ್ಕೆ ಸಂಬಂಧಿಸಿದವರೆಲ್ಲ ಭಾವುಕರಾಗುತ್ತಿದ್ದರು. ಆದರೆ, ಈಗ ಎಲ್ಲರೂ ಮೊಬೈಲಿನಲ್ಲಿ ಮುಳುಗಿರುವುದರಿಂದ ಮದುವೆಯ ಯಾವ ಕ್ಷಣವೂ ಭಾವುಕತೆಯಿಂದ ಕೂಡಿರುವುದಿಲ್ಲ. ಆದರೂ ಅಪರೂಪವೆನ್ನುವಂತೆ ಇಂಥ ಸನ್ನಿವೇಶಗಳು, ಫೋಟೋಗ್ರಾಫ‌ರ್‌ನ ಎದೆಯ ಬಾಗಿಲು ಬಡಿದು, ಹೃದಯದಾಳದಲ್ಲಿ ಲಂಗರು ಹಾಕುತ್ತವೆ.

Advertisement

– ಚಿತ್ರ- ಲೇಖನ: ಶಿವು ಕೆ.

Advertisement

Udayavani is now on Telegram. Click here to join our channel and stay updated with the latest news.

Next