Advertisement
ಮಂಗಳೂರು: ಮಾತು ಆಡಿದರೆ ಮುಗಿಯಿತು, ಮುತ್ತು ಒಡೆದರೆ ಹೋಯಿತು. ಇದು ಯಾವತ್ತಿಗೂ ಸತ್ಯವೇ. ಆದರೆ ರಾಜಕಾರಣದಲ್ಲಿ ಈ ಮಾತೆಂಬುದು ಲಾಭದ ಕೊಯ್ಲೂ ಮಾಡಿದ್ದಿದೆ, ನಷ್ಟದ ನೆರೆಯನ್ನೂ ತಂದದ್ದಿದೆ. ಯಾವುದೋ ಜೋಶ್‌ನಲ್ಲಿ ರಾಜಕಾರಣಿ ಗಳು ಏನನ್ನೋ ಹೇಳಲು ಹೋಗಿ ಏನೋ ಹೇಳಿಬಿಡುತ್ತಾರೆ. ಅದು ವಿವಾದಕ್ಕೀಡಾಗಿ, ಸಂಕಷ್ಟವನ್ನು ತಂದೊಡ್ಡುತ್ತದೆ. ಇನ್ನು ಹಲವು ಬಾರಿ ವಿಷಯಕ್ಕಿಂತ ಬಳಸಿದ ಪದಗಳೇ ಪಕ್ಷಗಳನ್ನು ಮುಳುಗಿಸಿದ್ದಿದೆ.
Related Articles
Advertisement
ಇತ್ತೀಚೆಗೆ ಮೂಡುಬಿದಿರೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿರುವ ಕಾಂಗ್ರೆಸ್‌ನ ಮಿಥುನ್ ರೈ ಉಡುಪಿಯ ಶ್ರೀಕೃಷ್ಣಮಠಕ್ಕೆ ಜಾಗ ನೀಡಿರುವ ಸಂಗತಿ ಕುರಿತ ಹೇಳಿಕೆ ರಾಜ್ಯಾದ್ಯಂತ ಸದ್ದು ಮಾಡಿದೆ. ಅದಾಗಲೇ ಅವರು ತಮ್ಮ ಹೇಳಿಕೆಗೆ ಆಧಾರ ವಿವರಿಸಿ, ಸ್ಪಷ್ಟೀಕರಿಸಿದ್ದಾರೆ. ಆದರೂ ಗಾಳಿ ಬೀಸಿ ಹೋದ ಮೇಲೆ ಉಳಿದ ಕಾಳುಗಳೆಷ್ಟು ಎಂದು ಎಣಿಸಿಕೊಳ್ಳುವುದಕ್ಕೆ ಸ್ವಲ್ಪ ಹೊತ್ತು ಬೇಕು. ಹಾಗಾಗಿ ಇಂಥ ಹೇಳಿಕೆ ಯಾವ ಪರಿಣಾಮ ಬೀರಬಹುದು ಎಂಬುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕು. ಇದೇನೂ ಹೊಸದಲ್ಲ, ರಾಷ್ಟ್ರಮಟ್ಟದಲ್ಲಿ, ರಾಜ್ಯ, ಪ್ರಾದೇಶಿಕ ಮಟ್ಟದಲ್ಲಿ ರಾಜಕೀಯ ನಾಯಕರ ಹೇಳಿಕೆಗಳು ಉದ್ದೇಶ ಪೂರ್ವಕವೋ, ಅಲ್ಲವೋ ಒಟ್ಟೂ ವಿವಾದಕ್ಕೆ ಕಾರಣವಾಗಿವೆ. ಇತ್ತೀಚೆಗಷ್ಟೇ ಸಂಸದರೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಪಕ್ಷದ ಬೂತ್ ಅಭಿಯಾನದ
ಸಂದರ್ಭದಲ್ಲಿ ಲವ್ ಜೆಹಾದ್ ಬಗ್ಗೆ ಮಾತನಾಡಿ, ಚರಂಡಿ, ರಸ್ತೆ ಬಗ್ಗೆ ಅಲ್ಲ ಎಂಬ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶಕ್ಕೆ, ಟ್ರೋಲಿಂಗ್‌ಗೆ ಒಳಗಾಯಿತು. 2017ರಲ್ಲಿ ಬಿಜೆಪಿ ಕಾರ್ಯಕರ್ತ ಕಾರ್ತಿಕ್ ರಾಜ್ ಅವರ ಹತ್ಯೆ ವಿರುದ್ಧ ಹಮ್ಮಿಕೊಂಡ ಪ್ರತಿಭಟನೆ ವೇಳೆ ಆರೋಪಿಗಳನ್ನು ಬೇಗ ಬಂಧಿಸಲು ಆಗ್ರಹಿಸಿ ನೀಡಿದ ಹೇಳಿಕೆ ವಿರುದ್ಧ ಕೇಸು ದಾಖಲಾಗಿತ್ತು. ಎರಡು ವರ್ಷದ ಬಳಿಕ ಪ್ರಕರಣ ಬಿದ್ದು ಹೋಯಿತು. ಆದರೆ ಆ ಹೇಳಿಕೆ ಬಹಳಷ್ಟು ಟೀಕೆಗೆ ಗುರಿಯಾಗಿತ್ತು.ಇಂತಹುದೇ ಇನ್ನೊಂದು ಪ್ರಕರಣ 2017ರಲ್ಲಿ ನಡೆದಿತ್ತು, ಮಾಜಿ ಸಚಿವರೂ, ಕಾಂಗ್ರೆಸ್ ನಾಯಕರೂ ಆದ ಬಿ. ರಮಾನಾಥ ರೈ ಅವರು ನಾನು 6 ಬಾರಿ ಶಾಸಕ ಆಗಲು ಒಂದು ಸಮುದಾಯದ ಬೆಂಬಲ ಪ್ರಮುಖ ಕಾರಣ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಅದರ ವೀಡಿಯೊ ತುಣುಕು ಕೆಲವು ಸಮಯದ ಬಳಿಕ ಬಹಿರಂಗಗೊಂಡು ಸಾಕಷ್ಟು ವಿವಾದಕ್ಕೆ ಒಳಗಾಯಿತು. ಇದನ್ನು ಸಮರ್ಥವಾಗಿ ಬಳಸಿಕೊಂಡ ಬಿಜೆಪಿ ರೈ ಅವರ ವಿರುದ್ಧ ಅಸ್ತ್ರವಾಗಿ ಬಳಸಿತ್ತು. ಅದಕ್ಕೆ ಉದುರುವ ಮಾತು ಮುತ್ತೋ, ಮೃತ್ಯುವೋ ಎಂದು ಆಮೇಲೆ ಯೋಚಿಸುವುದಕ್ಕಿಂತ ಮೊದಲೇ ಅದರ ರೂಪವನ್ನು ನಿರ್ಧರಿಸುವುದು ಹೆಚ್ಚು ಸುರಕ್ಷಿತ ಎನ್ನುತ್ತಾರೆ ಹಿರಿಯರು.