Advertisement

ಐಎಂಎ ಆಸ್ತಿ, ನಗದು, ಚಿನ್ನಾಭರಣ ಜಪ್ತಿ

10:19 AM Sep 27, 2019 | Team Udayavani |

ಬೆಂಗಳೂರು: ಬಹುಕೋಟಿ ರೂ. ವಂಚನೆ ಪ್ರಕರಣದ ಆರೋಪ ಎದುರಿಸುತ್ತಿರುವ ಐಎಂಎ ಕಂಪೆನಿಯ ಆಸ್ತಿ, ನಗದು, ಚಿನ್ನಾ ಭರಣಗಳನ್ನು ಕಂದಾಯ ಇಲಾಖೆ ಜಪ್ತಿ ಮಾಡಿಕೊಂಡಿದೆ.

Advertisement

ಕಂದಾಯ ಸಚಿವ ಆರ್‌. ಅಶೋಕ್‌ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಐಎಂಎ ಕಂಪೆನಿಗೆ ಸೇರಿದ ಬಿಬಿಎಂಪಿ ವ್ಯಾಪ್ತಿಯ ಫ್ರೆಜರ್‌ ಟೌನ್‌, ಕಾಕ್ಸ್‌ ಟೌನ್‌, ಬೇಗೂರು, ಜೆಪಿನಗರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಲ್ಲಿರುವ ಕೃಷಿ ಜಮೀನು ಸೇರಿ 21.73 ಕೋಟಿ ರೂ. ಮೌಲ್ಯದ 17 ಆಸ್ತಿ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು. 23 ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಿ 18 ಬ್ಯಾಂಕ್‌ ಖಾತೆ ಗಳಲ್ಲಿದ್ದ 2,85,19,335 ರೂ. ಹಾಗೂ 8,86,52,000 ರೂ. ಮೊತ್ತದ ಡಿಡಿ  ಗಳನ್ನು ಜಪ್ತಿ ಮಾಡಲಾಗಿದೆ ಎಂದರು.

ಏನೇನು ಜಪ್ತಿ?
91.57 ಲಕ್ಷ ರೂ. ಮೌಲ್ಯದ 2 ಕೆ.ಜಿ. 324 ಗ್ರಾಂ ಬಂಗಾರ, 300 ಬೆಳ್ಳಿ ನಾಣ್ಯಗಳು, 6 ಕೆ.ಜಿ. 608 ಗ್ರಾಂ ಬೆಳ್ಳಿ ಆಭರಣ, 37 ಕೆ.ಜಿ. 189 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಸಂಸ್ಥೆಗೆ ಸೇರಿದ 59 ಲಕ್ಷ ರೂ. ಮೌಲ್ಯದ ಐದು ವಾಹನ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.

ಜಪ್ತಿ ಮಾಡಿರುವ ವಸ್ತುಗಳಲ್ಲಿ 303 ಕೆ.ಜಿ. ತೂಕದ 5,880 ನಕಲಿ ಬಿಸ್ಕೆಟ್‌ಗಳೂ ಸೇರಿವೆ. ಅದರ ಮೇಲೆ ಐಎಂಎ ಕಂಪೆನಿ ಮುದ್ರೆ, ಹಾಲ್‌ ಮಾರ್ಕ್‌ ಮುದ್ರೆ ಸಹ ಹಾಕಲಾಗಿದೆ ಎಂದು ತಿಳಿಸಿದರು.

ಸಾಕ್ಷ್ಯ ನಾಶಕ್ಕೆ ಯತ್ನ?
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯ ಎಂದು ಪರಿಗಣಿಸಲಾಗಿದ್ದ ಹಾರ್ಡ್‌ಡಿಸ್ಕ್ವೊಂದ ರಲ್ಲಿನ ಕೆಲವು ಮಾಹಿತಿ ಅಳಿಸಿ ಹಾಕಿ ಸಾಕ್ಷ್ಯನಾಶಕ್ಕೆ ಯತ್ನಿಸ ಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಐಎಂಎ ಮನ್ಸೂರ್‌ ಖಾನ್‌ ಅವರ ನಾಲ್ಕನೇ ಪತ್ನಿ ಮನೆಯಿಂದ ಜಪ್ತಿ ಮಾಡಲಾಗಿದ್ದ ಹಾರ್ಡ್‌ ಡಿಸ್ಕ್ನ ಮಾಹಿತಿ ಅಳಿಸಲಾಗಿದೆ ಎನ್ನಲಾಗಿದೆ.

Advertisement

ಎಸ್‌ಐಟಿ ಅಧಿಕಾರಿಗಳ ವಿಚಾರಣೆ?
ಐಎಂಎ ಕಚೇರಿಯಲ್ಲಿಯೂ ಕೂಡ ಜಪ್ತಿಗೂ ಮುನ್ನ ಹಾರ್ಡ್‌ ಡಿಸ್ಕ್ಗಳು ಕೆಲವು ದಿನಗಳ ಮಟ್ಟಿಗೆ ಇದ್ದವು. ಜತೆಗೆ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ವಶದಲ್ಲಿಯೂ ಹಲವು ಸಮಯ ಹಾರ್ಡ್‌ ಡಿಸ್ಕ್ ಗಳಿದ್ದವು. ಹೀಗಾಗಿ ಎಲ್ಲಿ ಸಾಕ್ಷ್ಯನಾಶ ಪಡಿಸಲಾಗಿದೆ ಎಂದು ಸಿಬಿಐ ತನಿಖೆ ನಡೆಸುತ್ತಿದ್ದು, ಸದ್ಯದಲ್ಲಿಯೇ ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳನ್ನು ಪ್ರಶ್ನಿಸಿ ಮಾಹಿತಿ ಪಡೆದುಕೊಳ್ಳಲು ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.

ಮನ್ಸೂರ್‌ಖಾನ್‌ ಹಾರ್ಡ್‌ಡಿಸ್ಕ್ಗಳಲ್ಲಿ ತಾನು ಹಣ ಸಂದಾಯ ಮಾಡಿದ್ದ ರಾಜಕಾರಣಿಗಳು, ಅಧಿಕಾರಿಗಳು ಸೇರಿ ಗಣ್ಯರ ವಿವರಗಳನ್ನು ನಮೂದಿಸಿ ಮಾಹಿತಿ ಇಟ್ಟಿದ್ದ. ಹೀಗಾಗಿ ತನಿಖೆಯ ಮೇಲೆ ಪ್ರಭಾವ ಬೀರಿರುವ ರಾಜಕಾರಣಿಗಳು, ಅಧಿಕಾರಿಗಳು ಸಾಕ್ಷ್ಯಾನಾಶಕ್ಕೆ ಯತ್ನಿ ಸಿರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next