Advertisement

ಐಎಂಎ ವಂಚನೆ: ಉಪ ವಿಭಾಗಾಧಿಕಾರಿ ಬಂಧನ

06:45 AM Jul 06, 2019 | Team Udayavani |

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಆಳಕ್ಕಿಳಿಯುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಬೆಂಗಳೂರು ಉತ್ತರ ಉಪವಿಭಾಗಧಿಕಾರಿ ಹಾಗೂ ಗ್ರಾಮಲೆಕ್ಕಿಗ ಮಂಜುನಾಥ್‌ ಎಂಬಾತನನ್ನು ಬಂಧಿಸಿದೆ.

Advertisement

ಐಎಂಎ ಕಂಪನಿ ವ್ಯವಹಾರದ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಈ ಹಿಂದೆ ಉಪವಿಭಾಗಾಧಿಕಾರಿ ಎ.ಸಿ.ನಾಗರಾಜ್‌ ಅವರನ್ನು ಸಕ್ಷಮ ಪ್ರಾಧಿಕಾರಿಯನ್ನಾಗಿ ನೇಮಿಸಿತ್ತು. ಆದರೆ, ನಾಗರಾಜು ಅವರು ಸೂಕ್ತ ತನಿಖೆ ನಡೆಸದೆ ಐಎಂಎ ಅಕ್ರಮ ವ್ಯವಹಾರವನ್ನು ಮುಚ್ಚಿಟ್ಟು ಕಂಪನಿ ಪರವಾಗಿ ವರದಿ ನೀಡಲು ಐಎಂಎ ಮಾಲೀಕ ಮನ್ಸೂರ್‌ ಖಾನ್‌ ಕಡೆಯಿಂದ ಲಂಚದ ರೂಪದಲ್ಲಿ 4.5 ಕೋಟಿ ರೂ. ಪಡೆದಿದ್ದರು.

ಪ್ರಕರಣದ ತನಿಖೆ ವೇಳೆ ಈ ವಿಷಯ ಬಹಿರಂಗವಾಗಿದೆ. ಹೀಗಾಗಿ ಎಸಿ ನಾಗರಾಜ್‌ ಹಾಗೂ ಈ ಅಕ್ರಮಕ್ಕೆ ಸಹಕರಿಸಿ ಗ್ರಾಮಲೆಕ್ಕಿಗ ಮಂಜುನಾಥ್‌ನನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿಸಿದ್ದು ಎಲ್‌.ಸಿ ನಾಗರಾಜ್‌ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ ಮಂಜುನಾಥ್‌ನನ್ನು ನ್ಯಾಯಾಲಯದ ಅನುಮತಿ ಮೇರೆಗೆ 9 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

1.20 ಕೋಟಿ ಮೌಲ್ಯದ ಫಾರ್ಮಾ ವಸ್ತು ಜಪ್ತಿ: ಮತ್ತೂಂದೆಡೆ ಐಎಂಎ ಒಡೆತನದ ನಗರದ ವಿವಿಧ ಭಾಗಗಳಲ್ಲಿರುವ ಫ್ರಂಟ್‌ ಲೈನ್‌ ಫಾರ್ಮಾ ಮಳಿಗೆಗಳಲ್ಲಿ ಶುಕ್ರವಾರ ಶೋಧ ಕಾರ್ಯಾಚರಣೆ ನಡೆಸಿರುವ ಎಸ್‌ಐಟಿ ಅಧಿಕಾರಿಗಳು, 1.20 ಕೋಟಿ ರೂ. ಮೌಲ್ಯದ ಫಾರ್ಮಸಿ, ಎಲೆಕ್ಟ್ರಾನಿಕ್‌ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಶಾಂತಿನಗರ, ಬಿಟಿಎಂ ಲೇಔಟ್‌ ಹಾಗೂ ಜಯನಗರದ ಎರಡು ಫ್ರಂಟ್‌ ಲೈನ್‌ ಫಾರ್ಮಾ ಮಳಿಗೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಐಎಂಎ ಮಾಲೀಕತ್ವ ಹೊಂದಿರುವ ಇತರೆ ಕಂಪನಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next