Advertisement

ಐಎಂಎ ವಂಚನೆ ಪ್ರಕರಣ: ಹೈಕೋರ್ಟ್‌ ಅಂಗಳಕ್ಕೆ

01:17 AM Jun 14, 2019 | Team Udayavani |

ಬೆಂಗಳೂರು: ಬಹುಚರ್ಚಿತ ಐಎಂಎ ವಂಚನೆ ಪ್ರಕರಣ ಇದೀಗ ನ್ಯಾಯಾಲಯದ ಅಂಗಳಕ್ಕೆ ಬಂದಿದ್ದು, ಹೂಡಿಕೆದಾರರಿಗೆ ನ್ಯಾಯ ಕೊಡಿಸುವಂತೆ ಕೋರಿ ವಕೀಲರೊಬ್ಬರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಈ ಕುರಿತಂತೆ ಬೆಂಗಳೂರಿನ ಗಂಗಾನಗರದ ನಿವಾಸಿ ವಕೀಲ ಮೊಹಮ್ಮದ್‌ ತಾಹಿರ್‌ ಹೈಕೋರ್ಟ್‌ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಆ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗಳ ಹಣ ಹೂಡಿಕೆ ಮಾಡಿರುವ ಹೂಡಿಕೆದಾರರ ಹಿತರಕ್ಷಣಾ ಕಾಯ್ದೆ-2004ರ’ ಪ್ರಕಾರ ವಂಚಕ ಸಂಸ್ಥೆ ವಿರುದ್ಧ ಹೈಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಬೇಕು. ಐಎಂಎ ಸಮೂಹ ಸಂಸ್ಥೆಗಳಿಗೆ ಸೇರಿದ ಚರಾಸ್ತಿ ಹಾಗೂ ಸ್ಥಿರಾಸ್ತಿಗಳನ್ನು ತಕ್ಷಣ ಮುಟ್ಟುಗೋಲು ಹಾಕಿಕೊಳ್ಳಬೇಕು. ಹಾಗೂ ಈ ಮುಟ್ಟುಗೋಲು ಹಾಕಿಕೊಳ್ಳುವ ಸಂಪೂರ್ಣ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣ ಮಾಡುವಂತೆ ಸಹಾಯಕ ಆಯಯಕ್ತರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಉ.ಕ.ಜನರಿಗೂ ಟೋಪಿ
ರಾಯಚೂರು: ಐಎಂಎ ಜ್ಯುವೆಲ್ಲರ್ ಕಂಪನಿ ಅಕ್ರಮ ಜಾಲಕ್ಕೆ ಜಿಲ್ಲೆಯ ಗ್ರಾಹಕರು ಬಲಿಯಾಗಿರುವ ಸಂಗತಿ ಬಯಲಾಗಿದೆ. ಸಿಂಧನೂರು, ರಾಯಚೂರು, ಮಾನ್ವಿಯ ಕೆಲವು ಜನ ಹಣ ಹೂಡಿಕೆ ಮಾಡಿದ್ದು, ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಕಂಗಾಲಾಗಿದ್ದಾರೆ. ಸಿಂಧನೂರಿನ ಟೇಲರ್‌ ಒಬ್ಬರು ಲಕ್ಷಾಂತರ ರೂ. ಹಣ ಹೂಡಿದ್ದರೆ, ಮಾನ್ವಿಯಲ್ಲಿ ಸುಮಾರು 15ಕ್ಕೂ ಹೆಚ್ಚು ಜನ 30 ಲಕ್ಷಕ್ಕೂ ಅಧಿಕ ಹಣ ಹೂಡಿದ್ದಾರೆ ಎನ್ನಲಾಗಿದೆ. ಕಂಪನಿಯಿಂದ ಬಾಂಡ್‌, ರಶೀದಿ, ಪಾಸ್‌ಬುಕ್‌ ಪಡೆದಿದ್ದು, ಆರಂಭದಲ್ಲಿ ಒಂದೆರಡು ತಿಂಗಳು ಲಾಭದ ಹಣವನ್ನೂ ಸ್ವೀಕರಿಸಿದ್ದಾರೆ. ಜತೆಗೆ ಕಂಪನಿ ಹೂಡಿಕೆದಾರರಿಗೆ ನೀಡಿರುವ ಗಿಫ್ಟ್‌ ಕೂಪನ್‌ಗಳನ್ನು ಪಡೆದಿದ್ದಾರೆ. ಕೆಲ ಜನರಿಗೆ ಆರಂಭದಲ್ಲಿ ಉತ್ತಮ ಲಾಭ ನೀಡಿದ್ದರಿಂದ ಸಾಕಷ್ಟು ಜನ ಅದಕ್ಕೆ ಪ್ರೇರಿತರಾಗಿ ಹೂಡಿಕೆ ಮಾಡಿದ್ದಾರೆ. ಅದರಲ್ಲಿ ಕೆಲವರಿಗೆ ಲಾಭದ ಹಣ ಸಿಕ್ಕಿದ್ದು, ಅನೇಕರಿಗೆ ಸ್ವಲ್ಪ ದಿನ ಕಾಯಿರಿ ಎಂದಷ್ಟೇ ಹೇಳಿದ್ದಾರೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next