Advertisement

ಐಎಂಎ ವಂಚನೆ: 30 ಸಾವಿರ ದಾಟಿದ ದೂರು

01:06 AM Jun 15, 2019 | Lakshmi GovindaRaj |

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ಚುರುಕುಗೊಳಿಸಿದೆ. ಮತ್ತೂಂದೆಡೆ ವಂಚನೆಗೊಳಗಾದವರ ಪಟ್ಟಿ ಬೆಳೆಯುತ್ತಿದ್ದು ಶುಕ್ರವಾರದ ಅಂತ್ಯಕ್ಕೆ ಐಎಂಎ ವಿರುದ್ಧ 30 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ.

Advertisement

ಐಎಎಂ ವಂಚನೆಗೊಳಗಾದವರ ಪಟ್ಟಿ ದೊಡ್ಡದಾಗುತ್ತಲೇ ಇದ್ದು ವಂಚನೆ ದೂರುಗಳು 30 ಸಾವಿರ ದಾಟಿವೆ. ಶುಕ್ರವಾರವೂ ಕೂಡ ವಂಚನೆಗೊಳದಾವರು ದೂರು ಕೌಂಟರ್‌ನಲ್ಲಿ ದೂರು ದಾಖಲಿಸಿದರು. ಸುಮಾರು 3200ಕ್ಕೂ ಅಧಿಕ ದೂರುಗಳು ಶುಕ್ರವಾರ ದಾಖಲಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಐಎಂಎ ಕಂಪನಿಯ ಏಳು ನಿರ್ದೇಶಕರನ್ನು ತೀವ್ರ ವಿಚಾರಣೆಗೊಳಪಡಿಸಿರುವ ಎಸ್‌ಐಟಿ ತನಿಖಾಧಿಕಾರಿಗಳು, ಐಎಂಎ ವಂಚನೆ ಕೇಸ್‌ನ ಮೂಲ ಬೇರಿಗೆ ಕೈ ಹಾಕಿದ್ದಾರೆ. ಏಳು ಮಂದಿ ಆರೋಪಿಗಳು ಕೂಡ ಮನ್ಸೂರ್‌ ಪರಾರಿ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಹೇಳುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ಹೂಡಿಕೆದಾರರಿಗೆ ಲಾಭಾಂಶ ಹಣ ಸಂದಾಯವಾಗಿಲ್ಲ ಎಂಬ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ ಎಂದು ಎಸ್‌ಐಟಿ ಉನ್ನತ ಮೂಲಗಳು ತಿಳಿಸಿವೆ.

ಲೆಕ್ಕ ಪರಿಶೋಧಕರ ವಿಚಾರಣೆ: ಐಎಂಎ ಕಂಪನಿ ರಿಜಿಸ್ಟ್ರೇಶನ್‌, ಹಣಕಾಸು ವಹಿವಾಟು ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಬೇಕಿದೆ. ಐಎಂಎ ಹೂಡಿಕೆದಾರರಿಗೆ ನೀಡುತ್ತಿದ್ದ ಲಾಭಾಂಶದ ಮೂಲ, ಹಣಕಾಸು ವಹಿವಾಟಿನ ಪಾರದರ್ಶಕತೆ ಬಗ್ಗೆಯೂ ಖಚಿತವಾಗಬೇಕಿದೆ. ಈ ನಿಟ್ಟಿನಲ್ಲಿ ದಾಖಲೆಗಳ ಪರಿಶೀಲನೆಯನ್ನು ಒಂದು ತಂಡ ನಡೆಸುತ್ತಿದೆ. ಈ ಸಂಬಂಧ ಐಎಂಎ ಲೆಕ್ಕಪರಿಶೋಧಕರನ್ನು ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೂರವಾಣಿ ವಿವರ: ಪ್ರಕರಣ ಪ್ರಮುಖ ಆರೋಪಿಯಾಗಿರುವ ಮನ್ಸೂರ್‌ ಹಾಗೂ ಆತನ ಕುಟುಂಬ ಸದಸ್ಯರ ದೂರವಾಣಿ ಕರೆಗಳ ವಿವರ ಕಲೆಹಾಕಲಾಗುತ್ತಿದೆ. ಜೂನ್‌ 8ರಂದು ಆತ ನಗರ ತೊರೆದಿರುವ ಸಾಧ್ಯತೆಯಿದೆ ಆತ ಮಾತನಾಡಿದ್ದಾನೆ ಎನ್ನಲಾದ ಎರಡೂ ಆಡಿಯೋ ಮುದ್ರಿಕೆಗಳನ್ನು ಸಂಗ್ರಹಿಸಲಾಗಿದ್ದು ಅವು ಆತನದ್ದೇ ಎಂಬುದು ಖಚಿತವಾಗಲು ಧ್ವನಿ ಪರೀಕ್ಷೆ ನಡೆಯಬೇಕಿದೆ. ಇಲ್ಲವೇ ಇತರೆ ಆರೋಪಿಗಳು ಖಚಿತ ಪಡಿಸಬೇಕು ಈ ನಿಟ್ಟಿನಲ್ಲಿಯೂ ತನಿಖೆ ಮುಂದುವರಿದಿದೆ ಎಂದು ಮೂಲಗಳು ಹೇಳಿವೆ.

Advertisement

ದುಬೈನಲ್ಲಿದ್ದಾನೆಯೇ ಮನ್ಸೂರ್‌?: ಜೂನ್‌ 4ರಂದು ಐಎಂಎ ಮಾಲೀಕ ಮನ್ಸೂರ್‌ ಕಚೇರಿಗೆ ತೆರಳಿದ್ದು ಇತರೆ ನಿರ್ದೇಶಕರನ್ನು ಭೇಟಿಯಾಗಿದ್ದ. ಜತೆಗೆ, ಸಿಬ್ಬಂದಿಗೆ ರಂಜಾನ್‌ ಶುಭಾಶಯ ಕೋರಿದ್ದು ಅಂದಿನಿಂದ ಐದು ದಿನಗಳವರೆಗೆ ರಜೆ ಘೋಷಿಸಲಾಗಿದೆ.

ಈ ಬೆಳವಣಿಗೆಗಳ ನಡುವೆಯೇ ಮನ್ಸೂರ್‌ ಜೂನ್‌ 8ರಂದು ನಗರ ಬಿಟ್ಟು ತೆರಳಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಮನ್ಸೂರ್‌ ದುಬೈ ಸೇರಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಮನ್ಸೂರ್‌ ದುಬೈ, ಸೇರಿ ಯಾವುದೇ ಹೊರದೇಶಗಳಿಗೆ ತೆರಳಿದ್ದರು ಕಾನೂನು ಪ್ರಕ್ರಿಯೆಗಳ ಮೂಲಕ ಸಿಐಡಿ ರೆಡ್‌ಕಾರ್ನ್ರ್‌ ನೋಟಿಸ್‌ ಹೊರಡಿಸುವ ಅಧಿಕಾರ ವ್ಯಾಪ್ತಿಹೊಂದಿದ್ದು. ಸಿಐಡಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ದೂರುದಾರರ ಅಳಲು!: ಮಗಳ ಮದುವೆ, ಉಳಿತಾಯದ ಹಣ, ನಿವೃತ್ತಿ ಬಳಿಕ ಬಂದ ಒಟ್ಟು ಮೊತ್ತ, ಕನಸಿನ ಸೂರು ಕಟ್ಟಿಕೊಳ್ಳಲು ಐಎಂಎನಲ್ಲಿ ಹಣ ಹೂಡಿಕೆ ಮಾಡಿದ್ದೆವು. ಆದರೆ, ಮನ್ಸೂರ್‌ ಒಂದೇ ಬಾರಿ ಬಾವಿಗೆ ತಳ್ಳಿಬಿಟ್ಟ ಎಂದು ವಂಚನೆಗೊಳಗಾದವರು ಆಳಲು ತೋಡಿಕೊಂಡರು.

“ಮೆಕ್ಯಾನಿಕ್‌ ಆಗಿ ಕೆಲಸ ಮಾಡಿಕೊಂಡು ದುಡಿಮೆಯ ಫ‌ಲವಾಗಿ 2.5 ಲಕ್ಷ ರೂ. ಉಳಿಕೆ ಮಾಡಿದ್ದೆ. ಮಕ್ಕಳ ವಿಧ್ಯಾಭ್ಯಾಸ, ಕಷ್ಟಕಾಲದಲ್ಲಿ ಸಹಾಯಕ್ಕೆ ಆಗಲಿದೆ ಎಂದು ನಂಬಿ ಪರಿಚಯಸ್ಥರೊಬ್ಬರ ಮಾತು ಕೇಳಿ ಐಎಂಎನಲ್ಲಿ ಹೂಡಿಕೆ ಮಾಡಿದ್ದೆ. ಐದಾರು ತಿಂಗಳು ಮಾತ್ರವೇ ಲಾಭಾಂಶ ಬಂದಿತು. ಇದೀಗ ಪೂರ್ತಿ ಹಣವೇ ಸಿಗದಂತೆ ಆಗೋಗಿದೆ. 2.50 ಲಕ್ಷ ರೂ. ಕೂಡಿಡಲು ಮತ್ತಿನ್ನೆಷ್ಟು ವರ್ಷ ದುಡಿಯಬೇಕು ಎಂದು ಎಂದು ಸೈಫ‌ುದ್ದೀನ್‌ ಎಂಬಾತ ನೋವು ತೋಡಿಕೊಂಡರು.

“ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಿಕೊಳ್ಳುವ ಕನಸಿತ್ತು. ಅದಕ್ಕಾಗಿ ಪತಿ ಹಾಗೂ ನನ್ನ ದುಡಿಮೆಯ ಉಳಿತಾಯದ ಹಣ 10 ಲಕ್ಷ ರೂ,ಗಳನ್ನು ಮೂರು ವರ್ಷಗಳ ಹಿಂದೆ ಹೂಡಿಕೆ ಮಾಡಿದ್ದೆವು. ಇದಾದ ಬಳಿಕ ವರ್ಷದ ಹಿಂದೆ ಐದು ಲಕ್ಷ ರೂ. ಹೂಡಿಕೆ ಮಾಡಿದ್ದೆವು.ಇದೀಗ ಹಣವೂ ಇಲ್ಲ, ಮನೆಯೂ ಇಲ್ಲ ಎಂಬಂತಾಗಿದೆ ಎಂದು ಸುನೈನಾ ಎಂಬುವವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next