ಬೆಂಗಳೂರು:ರಾಜಧಾನಿಯಲ್ಲಿ ತಲ್ಲಣ ಮೂಡಿಸಿರುವ ಶಿವಾಜಿನಗರದಲ್ಲಿರುವ ಐಎಂಎ ಜ್ಯುವೆಲರ್ಸ್ ಸಂಸ್ಥೆಯನ್ನು ಗುರುವಾರ ಎಸ್ ಐಟಿ ಅಧಿಕಾರಿಗಳು ಜಪ್ತಿ ಮಾಡಿ, ಸೀಲ್ ಮಾಡಿದ್ದಾರೆ. ಸಾವಿರಾರು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ಐಎಂಎ ಜ್ಯುವೆಲರ್ಸ್ ನ ಮನ್ಸೂರ್ ಖಾನ್ ವಿದೇಶಕ್ಕೆ ಪರಾರಿಯಾಗಿರಬೇಕೆಂದು ಶಂಕಿಸಲಾಗಿದೆ.
ಏತನ್ಮಧ್ಯೆ ಎಸ್ ಐಟಿ ಮುಖ್ಯಸ್ಥ ರವಿಕಾಂತೇಗೌಡ ನೇತೃತ್ವದಲ್ಲಿ ಏಳು ಮಂದಿ ಆರೋಪಿಗಳ ವಿಚಾರಣೆ ಆರಂಭಿಸಲಾಗಿದೆ ಎಂದು ವರದಿ ತಿಳಿಸಿದೆ. ಐಎಂಎ ಜ್ಯುವೆಲರ್ಸ್ ನ ಏಳು ನಿರ್ದೇಶಕರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಎಸ್ ಐಟಿಗೆ ಹಸ್ತಾಂತರಿಸಿದ್ದಾರೆ.
ಕೆಐಎಎಲ್ ನಲ್ಲಿ ರೇಂಜ್ ರೋವರ್ ಕಾರು ಬಿಟ್ಟು ವಿದೇಶಕ್ಕೆ ಪರಾರಿ?
ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ವಿಮಾನ ನಿಲ್ದಾಣದ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ರೇಂಜ್ ರೋವರ್ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿ ತಿಳಿಸಿದೆ. ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ಕಾರನ್ನು ಕೆಐಎಎಲ್ ನಲ್ಲಿ ಪಾರ್ಕ್ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. ಮತ್ತೊಂದೆಡೆ ಮನ್ಸೂರ್ ಗೆ ಸೇರಿದ್ದ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿ ಹೇಳಿದೆ.
ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮೂರು ಕೌಂಟರ್ ಗಳನ್ನು ತೆರೆಯಲಾಗಿದ್ದು, ಅಂದಾಜು 25ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ಬೇರೆ ರಾಜ್ಯಗಳಿಂದ, ಊರುಗಳಿಂದಲೂ ಆಗಮಿಸಿ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಾರೆ.