Advertisement

ಎಸ್‌ಐಟಿಗೆ ಐಎಂಎ ಕೇಸು

03:39 AM Jun 12, 2019 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ತಲ್ಲಣ ಮೂಡಿಸಿರುವ ಹಾಗೂ ರಾಜಕೀಯವಾಗಿಯೂ ಮಹತ್ವ ಪಡೆದಿರುವ ಐಎಂಎಯ ಬಹುಕೋಟಿ ವಂಚನೆ ಪ್ರಕರಣವನ್ನು ಎಸ್‌ಐಟಿ (ವಿಶೇಷ ತನಿಖಾ ತಂಡ) ತನಿಖೆಗೆ ವಹಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.

Advertisement

ಮಂಗಳವಾರ ಬೆಳಗ್ಗೆ ಪ್ರಕರಣ ಸಿಸಿಬಿ ತನಿಖೆಗೆ ವಹಿಸಲು ತೀರ್ಮಾನಿಸಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಟ್ವೀಟ್ ಮಾಡಿದ್ದರಾದರೂ ಸಚಿವ ಜಮೀರ್‌ ಅಹಮದ್‌ ನೇತೃತ್ವದಲ್ಲಿ ಮುಸ್ಲಿಂ ಶಾಸಕರ ನಿಯೋಗ ಎಸ್‌ಐಟಿ ತನಿಖೆಗೆ ವಹಿಸಲು ಒತ್ತಾಯಿಸಿದ ಹಿನ್ನೆಲೆಯಲ್ಲಿ ಅಂತಿಮವಾಗಿ ಎಸ್‌ಐಟಿ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ.

ಕಾಂಗ್ರೆಸ್‌ನಲ್ಲಿ ಅಸಮಾಧಾನಿತ ಶಾಸಕ ಎಂದು ಗುರುತಿಸಿಕೊಂಡಿರುವ ರೋಷನ್‌ ಬೇಗ್‌ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ರಾಜಕೀಯ ಕುತೂಹಲ ಕೆರಳಿಸಿರುವ ಈ ಪ್ರಕರಣದಲ್ಲಿ ಸಚಿವ ಜಮೀರ್‌ ರಂಗಪ್ರವೇಶ ಮತ್ತಷ್ಟು ಜಿಜ್ಞಾಸೆಗೆ ಕಾರಣವಾಗಿದೆ. ಅತ್ತ ಜಮೀರ್‌ ಭೇಟಿ ಮಾಡಿದ ಬೆನ್ನಲ್ಲೇ, ಮತ್ತೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಪ್ರಕರಣದ ತೀವ್ರತೆ ಅರಿತು ಎಸ್‌ಐಟಿ ತನಿಖೆಗೆ ನೀಡಲು ತೀರ್ಮಾನಿಸಲಾಗಿದೆ. ಈ ಕುರಿತು ಡಿಜಿಪಿಯವರಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 8,000ಕ್ಕೂ ಅಧಿಕ ಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮುಸ್ಲಿಂ ಶಾಸಕರ ನಿಯೋಗ ಭೇಟಿ

ಐಎಂಎ ವಂಚನೆ ಕುರಿತು ಸಚಿವ ಜಮೀರ್‌ ಅಹಮದ್‌ ನೇತೃತ್ವದಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿದ ಮುಸ್ಲಿಂ ಶಾಸಕರ ನಿಯೋಗವು ಪ್ರಕರಣವನ್ನು ಎಸ್‌ಐಟಿ ತನಿಖೆಗೆ ನೀಡಬೇಕೆಂದು ಮನವಿ ಮಾಡಿತು. ಬಳಿಕ ಮಾತನಾಡಿದ ಜಮೀರ್‌ ಅಹಮದ್‌, ಐಪಿಎಸ್‌ ಅಧಿಕಾರಿ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ನಡೆಸಿ ಐಎಂಎ ಮಳಿಗೆಗಳ ಒಡವೆ, ಚಿನ್ನಾಭರಣ ತತ್‌ಕ್ಷಣ ಜಪ್ತಿ ಮಾಡಬೇಕು ಎಂದು ಆಗ್ರಹಿಸಿದರು.

Advertisement

ಮತ್ತೂಂದು ಆಡಿಯೋ ಬಹಿರಂಗ

ಐಎಂಎ ಸ್ಥಾಪಕ ಮನ್ಸೂರ್‌ ಖಾನ್‌ನದ್ದು ಎನ್ನಲಾದ ಮತ್ತೂಂದು ಆಡಿಯೋ ಮಂಗಳವಾರ ಬಿಡುಗಡೆಯಾಗಿದೆ. ಇದರಲ್ಲಿ ತಾನು ಬದುಕಿದ್ದು, ಜೂ.15ರ ಒಳಗೆ ಹೂಡಿಕೆದಾರರ ಹಣ ವಾಪಸ್‌ ನೀಡುವುದಾಗಿ ತಿಳಿಸಿದ್ದಾನೆ. ಅಲ್ಲದೆ ನಾನು ಎಲ್ಲೂ ಹೋಗಿಲ್ಲ, ಬೆಂಗಳೂರಿನಲ್ಲಿಯೇ ಇದ್ದೇನೆ ಎಂದಿದ್ದಾನೆ.

ಎಲ್ಲ ಇಲಾಖೆಗಳನ್ನು ಒಳಗೊಂಡ ಸಮಿತಿ

ಹಣಕಾಸು ಅಕ್ರಮಗಳನ್ನು ತಡೆಗಟ್ಟಲು ಕಂದಾಯ, ಸಹಕಾರ, ಕಂಪೆನಿ ನೋಂದಣಿ, ಗೃಹ, ಇಡಿ, ಆರ್‌ಬಿಐ ಸಹಿತ ಎಲ್ಲ ಇಲಾಖೆಗಳನ್ನು ಒಳಗೊಂಡ ಸಮಿತಿ ರಚಿಸಲು ಸರಕಾರ ನಿರ್ಧರಿಸಿದೆ. ಮುಖ್ಯ ಕಾರ್ಯದರ್ಶಿ ಇದರ ನೇತೃತ್ವ ವಹಿಸುವರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನಾಪತ್ತೆಯಾದ ಐಎಂಎ ಮುಖ್ಯಸ್ಥ ಮನ್ಸೂರ್‌ ಖಾನ್‌ ಪತ್ತೆಗೆ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ.
-ಎಂ.ಬಿ. ಪಾಟೀಲ್, ಗೃಹಸಚಿವರು
ಸಿಬಿಐ ತನಿಖೆಗೆ ಆಗ್ರಹ

ಐಎಂಎ ಮಾಲಕರ ಜತೆ ಬಹುತೇಕ ರಾಜಕಾರಣಿಗಳ ಫೋಟೋ ತೋರಿಸಲಾಗುತ್ತಿದೆ. ಯಾರು ಕರೆದರೂ ಕಾರ್ಯಕ್ರಮಕ್ಕೆ ನಾವು ಹೋಗುತ್ತೇವೆ. ಆದರೆ ಇಂತಹ ಪ್ರಕರಣ ನಡೆದಾಗ ಬೇರೆ ರೀತಿಯ ಸಂದೇಶ ಹೋಗುತ್ತದೆ. ಹೀಗಾಗಿ ಪ್ರಕರಣ ಸಿಬಿಐಗೆ ವಹಿಸಬೇಕು.
-ರಘು ಆಚಾರ್‌, ವಿಧಾನಪರಿಷತ್‌ ಸದಸ್ಯ
ಐಎಂಎ ಜುವೆಲರ್ ಮಾಲಕನ ವಂಚನೆಯಿಂದ ಜನರಿಗೆ ಅನ್ಯಾಯವಾಗಿದ್ದು, ಕೂಡಲೇ ಹಣ ವಾಪಸ್‌ ನೀಡಬೇಕು. ಶಾಸಕ ರೋಷನ್‌ ಬೇಗ್‌ ಇಲ್ಲವೇ ಮತ್ತೂಬ್ಬರ ಹೆಸರನ್ನು ಹೇಳಲು ಬಯಸುವುದಿಲ್ಲ.
– ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ಬಿಜೆಪಿ ರಾಜ್ಯಾಧ್ಯಕ್ಷ
ಪಿಎಫ್ಐ ಸಂಘಟನೆಗೆ ಐಎಂಎ ಜುವೆಲರ್ ಆರ್ಥಿಕ ನೆರವು ನೀಡಿದೆ ಎಂದು ಕೇರಳದ ವ್ಯಕ್ತಿಯೊಬ್ಬರು ಹೇಳಿದ್ದರು. ಮನ್ಸೂರ್‌ ಖಾನ್‌ಗೆ ಭಯೋತ್ಪಾದಕರೊಂದಿಗೆ ನಂಟಿರುವ ಶಂಕೆ ಇದ್ದು, ಇಷ್ಟು ಹಣ ಅವರ ಬಳಿ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಸಬೇಕು.
– ಶೋಭಾ ಕರಂದ್ಲಾಜೆ, ಸಂಸದೆ, ಉಡುಪಿ-ಚಿಕ್ಕಮಗಳೂರು
Advertisement

Udayavani is now on Telegram. Click here to join our channel and stay updated with the latest news.

Next