Advertisement

ಐಎಂಎ ಪ್ರಕರಣ: ಸಿಎಸ್‌ ನೇತೃತ್ವದಲ್ಲಿ ಸಮಿತಿ ರಚನೆ

11:15 PM Jun 11, 2019 | Lakshmi GovindaRaj |

ಬೆಂಗಳೂರು: ಹಣಕಾಸು ಅಕ್ರಮಗಳನ್ನು ತಡೆಗಟ್ಟಲು ಕಂದಾಯ, ಸಹಕಾರ, ಕಂಪನಿ ನೋಂದಣಿ, ಗೃಹ, ಇಡಿ, ಆರ್‌ಬಿಐ ಸೇರಿ ಎಲ್ಲ ಇಲಾಖೆಗಳ ಸಹಕಾರ ಅಗತ್ಯವಿದ್ದು, ಈ ಕುರಿತು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಎಲ್ಲ ಇಲಾಖೆಗಳನ್ನೊಳಗೊಂಡ ಸಮಿತಿ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

Advertisement

ಐಎಂಎ ಹಣಕಾಸು ಅಕ್ರಮದ ಕುರಿತು ಹಿರಿಯ ಪೊಲಿಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರು. ಐಎಂಎ ಹಣಕಾಸು ಅಕ್ರಮವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಾಪತ್ತೆಯಾಗಿರುವ ಐಎಂಎ ಮುಖ್ಯಸ್ಥ ಮನ್ಸೂರ್‌ ಖಾನ್‌ ಪತ್ತೆಗೆ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ. ಈಗಾಗಲೇ ಐಎಂಎ ಹೊಂದಿರುವ ಆಸ್ತಿಗಳನ್ನು ಸೀಜ್‌ ಮಾಡಲಾಗಿದೆ. ಸಂಸ್ಥೆಯಲ್ಲಿ ಬಂಡವಾಳ ಹೂಡಿಕೆ ಮಾಡಿರುವವರಿಂದ ಅರ್ಜಿ ಪಡೆಯಲಾಗುತ್ತಿದೆ ಎಂದರು.

ಇದುವರೆಗೂ 3,500 ಜನ ಹೂಡಿಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಎಲ್ಲ ವ್ಯವಹಾರವೂ ಬ್ಯಾಂಕ್‌ ಮೂಲಕ ನಡೆದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಎಸ್‌ಐಟಿ ರಚನೆ ಮಾಡಿದ್ದಾರೆ. ಎಲ್ಲವನ್ನೂ ತನಿಖೆ ನಡೆಸಿ, ಹೂಡಿಕೆದಾರರ ಹಣವನ್ನು ವಾಪಸ್‌ ಕೊಡಿಸುವ ಪ್ರಯತ್ನ ಮಾಡಲಾಗುತ್ತ¤ದೆ ಎಂದು ಹೇಳಿದರು.

ಇಸ್ಲಾಂ ಧರ್ಮದಲ್ಲಿ ಬಡ್ಡಿ ಪಡೆಯುವುದಕ್ಕೆ ಅವಕಾಶವಿಲ್ಲ. ಹೀಗಾಗಿ ಐಎಂಎ ಹಣ ಇಡುವವರನ್ನು ಹೂಡಿಕೆದಾರರನ್ನಾಗಿ ಪರಿವರ್ತಿಸಿ ಲಾಭದ ರೂಪದಲ್ಲಿ ಹಣ ನೀಡುವುದಾಗಿ ವಂಚನೆ ಮಾಡಿದ್ದಾರೆ. ಈ ರೀತಿಯ ಕಂಪನಿಗಳಿಗೆ ಅನುಮತಿ ನೀಡುವಾಗ ಪೊಲೀಸ್‌ ಇಲಾಖೆಗೆ ಯಾವುದೇ ಪಾತ್ರ ಇರುವುದಿಲ್ಲ. ಅಲ್ಲದೇ ಹಣದ ಅವ್ಯವಹಾರ ಪ್ರಕರಣದಲ್ಲಿ ಆಸ್ತಿ ಜೋಡನೆಗೂ ಪೊಲೀಸರಿಗೆ ಅಧಿಕಾರವಿಲ್ಲ. ತಮಿಳುನಾಡಿನಲ್ಲಿ ಇಂತ ಪ್ರಕರಣಗಳಲ್ಲಿ ಆಸ್ತಿ ಜೋಡನೆಗೆ ಪೊಲೀಸರಿಗೆ ಅಧಿಕಾರ ಇದೆ. ಇಂತಹ ಪ್ರಕರಣಗಳನ್ನು ತಡೆಗಟ್ಟಲು ಪೊಲೀಸ್‌ ಇಲಾಖೆಯ ಕಾಯ್ದೆಗಳಿಗೆ ತಿದ್ದುಪಡಿ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಹಣಕಾಸು ಅಕ್ರಮಗಳ 24 ಪ್ರಕರಣಗಳ ತನಿಖೆ ನಡೆಯುತ್ತಿವೆ. 7 ಪ್ರಕರಣಗಳು ಸಿಸಿಬಿ ತನಿಖೆ ನಡೆಸುತ್ತಿದ್ದು, 17 ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸುತ್ತಿದೆ. ಕೆಲವು ಪ್ರಕರಣಗಳಲ್ಲಿ ಪೊಲೀಸರು ಶೇ.50 ಆಸ್ತಿ ವಶಪಡಿಸಿಕೊಂಡಿದ್ದಾರೆ. ಆದರೆ, ಕೆಲವು ಪ್ರಕರಣಗಳಲ್ಲಿ ಕಂದಾಯ ಇಲಾಖೆ, ಸಹಕಾರಗಳ ವ್ಯಾಪ್ತಿಯಲ್ಲಿ ಬರುವುದರಿಂದ ತಕ್ಷಣ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.

Advertisement

ಕೆಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲು ಏರಿರುವುದರಿಂದ ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ಕೊಡಿಸಲು ವಿಳಂಬವಾಗುತ್ತಿದೆ. ಈ ಕುರಿತಂತೆ ಶೀಘ್ರವೇ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ, ಇಂತಹ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸಲು ಮನವಿ ಮಾಡಲಾಗುವುದು ಎಂದು ಹೇಳಿದರು.

ಈಗಾಗಲೇ ಬಹಿರಂಗಗೊಂಡಿರುವ ಆಡಿಯೋದಲ್ಲಿರುವ ಧ್ವನಿ ಮನ್ಸೂರ್‌ ಖಾನ್‌ದೆ ಎಂದು ನಂಬಲಾಗಿದೆ. ಆದರೆ, ಈ ಬಗ್ಗೆ ಸೂಕ್ತ ತನಿಖೆ ನಡೆದ ನಂತರವೇ ಸ್ಪಷ್ಟವಾಗಿ ತಿಳಿಯಲಿದೆ. ಅವರು ಆರೋಪ ಮಾಡಿರುವ ರಾಜಕಾರಣಿಗಳ ಬಗ್ಗೆಯೂ ಈಗಲೇ ಅನಗತ್ಯವಾಗಿ ಸಂಶಯ ಪಡಲು ಬರುವುದಿಲ್ಲ. ಆದರೆ, ತನಿಖೆಯ ನಂತರ ಈ ಪ್ರಕರಣದಲ್ಲಿ ಯಾವುದೇ ರಾಜಕಾರಣಿ ಇದ್ದರೂ, ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next