Advertisement

ಚುನಾವಣೆಯಲ್ಲಿ ಗೆಲ್ಲುವುದು ನಾನೇ: ಹುಕ್ಕೇರಿ

05:19 PM Apr 04, 2019 | pallavi |

ಚಿಕ್ಕೋಡಿ: ಕಳೆದ ಐದು ವರ್ಷದಲ್ಲಿ ಕಾಂಗ್ರೆಸ್‌ ಪಕ್ಷ ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದ ಜನ ನನ್ನನ್ನು
ಮತ್ತೆ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ಇದ್ದು, ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂದು ಪ್ರಚಾರ ಮಾಡಿದರೂ ಗೆಲ್ಲುವುದು ನಾನೇ ಎಂದು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಎದೆ ತಟ್ಟಿ ಹೇಳಿದರು.

Advertisement

ನಗರದ ಪರಟಿ ನಾಗಲಿಂಗೇಶ್ವರ ಸಮುದಾಯ ಭವನದಲ್ಲಿ ಬುಧವಾರ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಗಣೇಶ ಹುಕ್ಕೇರಿಯನ್ನು ಸೊಲಿಸಲು ಇಲ್ಲಿಯ ಬಿಜೆಪಿ ನಾಯಕರು ನರೇಂದ್ರ ಮೋದಿಯನ್ನು ಕರೆಸಿ ಪ್ರಚಾರ ಮಾಡಿಸಿದರೂ ಬಿಜೆಪಿಗೆ ಹಿನ್ನಡೆಯಾಗಿದೆ ಎಂಬುದು ಬಿಜೆಪಿ ನಾಯಕರಿಗೆ ಗೊತ್ತಿರುವ ವಿಷಯ. ಆದರೂ ಇಲ್ಲಿಯ ಬಿಜೆಪಿ ನಾಯಕರು ಮತ್ತೆ ಮೋದಿ ಅವರನ್ನು ಕರೆಸುತ್ತಿದ್ದಾರೆ. ಇದರಿಂದ ಬಿಜೆಪಿಗೆ ಮತ್ತೆ ಹಿನ್ನಡೆಯಾಗಿ ನನಗೆ ಜಯ ಸಿಗಲಿದೆ ಎಂದರು.

ಕಳೆದ ಐದು ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸುಮಾರು 800 ಕೋಟಿ ರೂ. ಅನುದಾನ ತಂದು ಎಲ್ಲ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಕೆಲ ಹಳ್ಳಿಗಳಿಗೆ ಹೋಗಿಲ್ಲ ಎಂದು ಕಾರ್ಯರ್ತರಲ್ಲಿ ಅಸಮಾಧಾನ ಮೂಡಿದೆ. ಅದನ್ನು ನಾನು ಸರಿ ಮಾಡಿಕೊಂಡು ಮುಂಬರುವ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ.

ಗಡಿ ಭಾಗದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೇರು ಮಟ್ಟದಿಂದ ಬೆಳೆಸಿ ಅಭಿವೃದ್ಧಿ ಮಾಡುವುದು ನನ್ನ ಗುರಿ ಎಂದರು.

ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಮಾತನಾಡಿ, ಇಡೀ ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಮಾಡಿದಷ್ಟು ಅಭಿವೃದ್ಧಿ ಬಿಜೆಪಿ ಮಾಡಿಲ್ಲ, ಜನರಿಗೆ ಸುಳ್ಳು ಹೇಳುವ ಮೂಲಕ ಅನವಶ್ಯಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಮಾಡುತ್ತಿರುವ ಪ್ರಕಾಶ ಹುಕ್ಕೇರಿ ಅವರನ್ನು ಮತ್ತೆ ಎರಡನೆ ಬಾರಿಗೆ ಲೋಕಸಭೆಗೆ ಕಳಿಸುವುದರಿಂದ ಕಾಂಗ್ರೆಸ್‌ ಪಕ್ಷದ ಬಲ ಹೆಚ್ಚುತ್ತದೆ.

Advertisement

ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಅನುಕೂಲವಾಗುತ್ತದೆ. ಬೆಳಗಾವಿ ಸಂಸದ ಸುರೇಶ ಅಂಗಡಿ ಮೂರು ಬಾರಿ ಸಂಸದರಾಗಿ ಆಯ್ಕೆಯಾದರೂ ಯಾವುದೇ ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ, ಅವರು ಸಂಸದರ ಆದರ್ಶ ಗ್ರಾಮವನ್ನು ತಿರುಗಿ ನೊಡಿಲ್ಲ, ನಾನು ಆ ಗ್ರಾಮಕ್ಕೆ 3 ಕೋಟಿ ರೂ. ಅನುದಾನ ಖರ್ಚು ಮಾಡಿದ್ದೇನೆ ಎಂದರು.

ಅಥಣಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಅಥಣಿ ವಿಧಾನಸಭೆ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬ ಮತ್ತು ಸಂಸದ ಪ್ರಕಾಶ ಹುಕ್ಕೇರಿ ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದ ನಾನು ಜಯಗಳಿಸಿದ್ದೇನೆ. ಈ ಬಾರಿ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ಕೊಡುವ ಮೂಲಕ ಪ್ರಕಾಶ ಹುಕ್ಕೇರಿಗೆ ಸಂಪೂರ್ಣ ಬೆಂಬಲ ನೀಡಲಾಗುತ್ತದೆ ಎಂದರು.

ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ, ನಿಪ್ಪಾಣಿ ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಕುಡಚಿ ಮಾಜಿ ಶಾಸಕ ಎಸ್‌.ಬಿ.ಘಾಟಗೆ, ವೀರಕುಮಾರ ಪಾಟೀಲ, ಹುಕ್ಕೇರಿ ಮಾಜಿ ಶಾಸಕ ಎ.ಬಿ.ಪಾಟೀಲ ಮಾತನಾಡಿದರು.

ವೇದಿಕೆಯ ಮೇಲೆ ಶಾಸಕ ಗಣೇಶ ಹುಕ್ಕೇರಿ, ಜಿ.ಪಂ ಅಧ್ಯಕ್ಷ ಆಶಾ ಐಹೊಳೆ, ಕಿರಣ ಪಾಟೀಲ, ಈರಗೌಡ ಪಾಟೀಲ, ಸುಭಾಸಗೌಡ ಪಾಟೀಲ, ಮಹಾವೀರ ಮೋಹಿತೆ, ಮಲ್ಲಿಕಾರ್ಜುನ ಪಾಟೀಲ, ತಾಪಂ ಸದಸ್ಯ ವಿರೇಂದ್ರ ಪಾಟೀಲ, ಸತೀಶ ಕಲಕರ್ಣಿ, ಪ್ರಭಾಕರ ಈ. ಕೋರೆ, ಅನೀಲ ಪಾಟೀಲ, ಸಾಭೀರ ಜಮಾದಾರ, ಸತೀಶ ಪಾಟೀಲ, ಮುದ್ದಸರ ಜಮಾದಾರ, ಸುರೇಶ ಬಾಡಕರ, ಸುರೇಶ ಕೋರೆ, ಶಾಮ ರೇವಡೆ, ಎಂ.ಆರ್‌.ಮುನ್ನೋಳ್ಳಿಕರ, ಮಲಗೌಡ ನೇರ್ಲಿ, ಸಿದ್ದಪ್ಪ ಮರ್ಯಾಯಿ,  .ಎಚ್‌.ಪಟೇಲ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಮೋದಿ ಅಲೆ ಇಲ್ಲ
ರಾಜ್ಯದಲ್ಲಿ ಪ್ರಧಾನಿ ಮೋದಿ ಅಲೆ ನಡೆಯುವುದಿಲ್ಲ, ಹೀಗಾಗಿ ಅಭಿವೃದ್ಧಿ ಮಾಡಿರುವ ಮೈತ್ರಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಕೂಡಾ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಗಳಿಸುವುದು ನಿಶ್ಚಿತವಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿ ಹಳ್ಳಿಗಳಿಗೆ ತೆರಳಿ ಸರ್ಕಾರದ ಸಾಧನೆ ಮತ್ತು ಪ್ರಕಾಶ ಹುಕ್ಕೇರಿ ಮಾಡಿರುವ ಸಾಧನೆ ತಿಳಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ಕೊಡಲು ಮುಂದಾಗಬೇಕು. ಮುಖಂಡರು ಕೂಡಾ ಮೈಮರೆಯದೇ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು.
ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವರು ಬೆಳಗಾವಿ

Advertisement

Udayavani is now on Telegram. Click here to join our channel and stay updated with the latest news.

Next