Advertisement

ಮೊದಲ ದಿನದ ಪುಳಕ ಒಬ್ಬನೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನು

03:50 AM Jan 17, 2017 | |

ಅಂದು ಕಾಲೇಜಿಗೆ ಹೋಗುವ ಮೊದಲ ದಿನ. ಮನಸ್ಸಿನಲ್ಲಿ ಮೋಡ ಕವಿದ ವಾತಾವರಣ. ಎದೆಯಲ್ಲಿ ಢವಢವ. ಕತ್ತಲೆಯ ಪ್ರಪಂಚಕ್ಕೆ ಕಾಲಿಡುವ ಹಾಗೆ. ಅಲ್ಲಿ ನನ್ನವರು ಯಾರೂ ಇಲ್ಲ ಎಂಬ ಅನಾಥ ಪ್ರಜ್ಞೆ. ಇದು ನಾನು ಮೊದಲ ದಿನ ಸ್ನಾತಕೋತ್ತರ ಪದವಿಗೆ ಬರುವಾಗ ಇದ್ದ ಆತಂಕದ ಕ್ಷಣಗಳು.

Advertisement

ನಮ್ಮೂರಿಂದ ಸುಮಾರು 250 ಕಿಲೋ ಮೀಟರ್‌ ದೂರವಿರುವ ಕುವೆಂಪು ವಿಶ್ವವಿದ್ಯಾಲಯಕ್ಕೆ ಬರಬೇಕೆಂದರೆ ಸಾಮಾನ್ಯನಾ… ಅದೂ ಎಂದೂ ಅಪ್ಪ-ಅಮ್ಮನನ್ನು ಬಿಟ್ಟಿರದೆ ಇದ್ದ ಹುಡುಗನಿಗೆ. ದಿಕ್ಕು ತೋಚದಾಗಿತ್ತು. ಕಾಲೇಜಿಗೆ ಅಪ್ಲಿಕೇಷ‌ನ್‌ ಹಾಕಲು ಮತ್ತೆ ಪ್ರವೇಶ ಪರೀಕ್ಷೆ ಬರೆಯಲು ಬಂದಾಗ ಈ ತರಹದ ಯಾವ ಭಯವೂ ನನ್ನಲ್ಲಿರಲಿಲ್ಲ, ಏಕೆಂದರೆ ಹೊಸ ವಾತಾವರಣಕೆ ಕಾಲಿಡುವೆನೆಂಬ ಕುತೂಹಲವಿರಬೇಕು ನನಗೆ ಗೊತ್ತಿಲ್ಲ. ಆದರೆ ಸೀಟು ಸಿಕ್ಕಿ ನನ್ನ ಲಗೇಜ್‌ ತುಂಬಿಕೊಂಡು ಶಿವಮೊಗ್ಗದತ್ತ ತಿರುಗುವಾಗ ತವರು ಮನೆಯಿಂದ ಗಂಡನ ಮನೆಗೆ ಹೋಗುವ ಹೆಣ್ಣಿಗಾಗುವ ದುಃಖ ನನ್ನಲ್ಲಿ ಉಮ್ಮಳಿಸಿ ಬಂತು. ಒಂದು ಕಡೆ ಮೇಲ್ನೋಟಕ್ಕೆ ಮಂದಹಾಸ ಬೀರುತ್ತಾ, ಎದೆಯಲ್ಲಿ ದುಃಖದ ಮಡುವನ್ನೇ ತುಂಬಿಕೊಂಡು ಬೀಳ್ಕೊಟ್ಟ ಅಪ್ಪ, ತಡೆಯಲಾರದ ಸಂಕಟವನ್ನು ಮನದಲ್ಲೇ ಅಡಗಿಸಿಕೊಂಡು ಕಣ್ಣಲ್ಲಿ ಅಮೃತ ಬಿಂದುಗಳನ್ನು ಸುರಿಸುತ್ತ ನನ್ನ ಬೀಳ್ಕೊಟ್ಟ ಅಮ್ಮನನ್ನ ನೋಡಿದ ಆ ಕ್ಷಣ ತಿಳಿಯಿತು ಹೆತ್ತವರ ಪ್ರೀತಿ ಎಂತದ್ದೆಂದು.

ಟ್ರೆ„ನ್‌ ಹತ್ತಲು ರೈಲ್ವೇ ಸ್ಟೇಷನ್‌ಗೆ ಬಂದರೆ ಅಬ್ಟಾ…. ಅಲ್ಲಿ ಸುಮಾರು ಜನರಿರುತ್ತಾರಾ? ಇಲ್ಲ. ಆ ಜಾತ್ರೆಯನ್ನು ಕಂಡು ನನ್ನೆದೆಯ ಬಡಿತ ಪರರಿಗೆ ಕೇಳುವಂತಿತ್ತು. ಇದನ್ನು ಕಂಡ ನನಗೆ ಯಾವ ಓದು ಬೇಡ, ಯಾವ ಕಾಲೇಜು ಬೇಡ ಮನೆಗೆ ಹೋಗಿ ಅಪ್ಪ ಅಮ್ಮನ ಜೊತೆ ಇದ್ದು ಬಿಡೋಣ ಎನಿಸಿತು. ಆದರೆ ಒಂದು ಕ್ಷಣ ನನ್ನ ಮುಂದಿನ ಭವಿಷ್ಯವನ್ನು ನೆನೆದು ಸ್ಟೇಷನ್‌ನಲ್ಲೇ ಕುಳಿತೆ. 

ಅಲ್ಲಿಗೆ ಪುಸ್ತಕದ ಚೀಲವನ್ನು ನೇತಾಕಿಕೊಂಡು, ಕೈಯಲ್ಲಿ ಲಗೇಜು ಹಿಡಿದ ಒಂದು ಯುವಕರ ಗುಂಪು ಎಕ್ಸ್‌ಪ್ರೆಸ್‌ ಟ್ರೆ„ನ್‌ ರೀತಿ ಧಾವಿಸಿತು. ಇವರನ್ನು ಕಂಡ ನನಗೆ ಬಹುಶಃ ಇವರು ಯಾವುದೋ ಕಾಲೇಜಿನ ಹುಡುಗರು ಎಂದುಕೊಂಡು ಸುಮ್ಮನಾದೆ. ಆದರೆ ಮನಸ್ಸು ತಡೆಯಲಾರದೆ ನೀವು ಶಿವಮೊಗ್ಗಕ್ಕೆ ಹೋಗುತ್ತೀರಾ ಎಂದೆ. ಹೌದು ಎಂದರು. ಬೆಣ್ಣೆಯ ಕೊಡ ಕೈಗಿತ್ತಂತಾಯಿತು. ಅವರನ್ನು ನಾನು ಪರಿಚಯ ಮಾಡಿಕೊಂಡೆ. ಹೆಚ್ಚಾಗಿ ಮಾತನಾಡುವುದಕ್ಕೆ ಇವರ್ಯಾರೂ ನನಗೆ ಅಷ್ಟೇನೂ ಪರಿಚಯದವರಲ್ಲ, ಸುಮ್ಮನೆ ಕುಳಿತೆ. 

ನನ್ನ ದುಗುಡದ ಮುಖ ನೋಡಿದ ಆ ಗುಂಪಿನ ಒಬ್ಬ ಯುವಕ ಬಂದು ನನ್ನ ಮಾತನಾಡಿಸಿದ. ಹೀಗೆ ಆ ಗುಂಪು ನನಗೆ ಪರಿಚಯವಾಯಿತು. ಒಂದೇ ಟ್ರೆ„ನಿನಲ್ಲಿ ಬಂದು ಕಾಲೇಜು ಸೇರಿದೆವು. ಆದರೆ ಕಾಲೇಜಿಗೆ ಬಂದ ನಂತರ ಅವರೆಲ್ಲ ಬೇರೆ ಕಡೆ ಹೋದರು. ಮತ್ತೆ ದುಗುಡದ ವಾತಾವರಣ ನನ್ನಲ್ಲಿ ಮನೆ ಮಾಡಿತು. ನನ್ನವರಿಲ್ಲ ಎಂದೆನಿಸಿತು. ಧೈರ್ಯ ಮಾಡಿ ಹಾಸ್ಟೆಲಿನತ್ತ ಧಾವಿಸಿ ಹಾಸ್ಟೆಲ್‌ಗೆ ಪ್ರವೇಶ ಪಡೆದೆ. 

Advertisement

ಒಂದೆರಡು ದಿನ ಕಳೆಯಿತು. ನರಕಯಾತನೆ ಅನುಭವಿಸುತ್ತಿದ್ದ ನನಗೆ ಒಂದುಕ್ಷಣ ಸಂತೋಷಕ್ಕೆ ಪಾರೇ ಇಲ್ಲದಂತಾಯಿತು. ಏಕೆ ಗೊತ್ತಾ? ಟ್ರೆ„ನಿನಲ್ಲಿ ಬಂದವರು ನನ್ನೆದುರಿಗೆ ದಿಢೀರನೆ ಪ್ರತ್ಯಕ್ಷರಾದರು. ನನ್ನನ್ನು ನೋಡಿ ಹಾಯ್‌ ಮಗ ನೀನೇನೋ ಇಲ್ಲಿ ಎಂದು ಕೇಳಿದಾಗ ನನಗೆ ಹಸುವನ್ನು ಕಂಡು ಕರು ಕುಣಿದಾಡುವಂತೆ ಖುಷಿಪಟ್ಟೆ. ಅವರೆಲ್ಲರೂ ನನ್ನನ್ನು ಅವರ ಬಂಧುವಂತೆ ಸ್ವಾಗತಿಸಿ ತಮ್ಮ ಗುಂಪಿಗೆ ಸೇರಿಸಿಕೊಂಡರು. ನನ್ನಲ್ಲಿ ಭಯ, ಅನಾಥ ಪ್ರಜ್ಞೆ ದಿನಗಳೆದಂತೆ ಮಾಯವಾಯಿತು. 

ಈ ನನ್ನ ಗೆಳೆಯರು ಒಬ್ಬೊಬ್ಬರೂ ಒಂದೊಂದು ರೀತಿಯ ಟ್ಯಾಲೆಂಟೆಡ್‌ ಪರÕನ್‌ಗಳು. ಇವರ ಜೊತೆ ನಾನೊಬ್ಬ ಕಾಮಿಡಿ ಸ್ಟಾರ್‌ ಸೇರಿಕೊಂಡಾಗ ನಮ್ಮ ಹ್ಯಾಪಿಗೆ ಎಲ್ಲೆಯೇ ಇಲ್ಲದಂತಾಗಿದೆ. ಜರ್ನಲಿಸಂ ಓದುವ ನನ್ನನ್ನು ಪತ್ರಕರ್ತರೇ ಎಂದು ಬಾಯಿ ತುಂಬ ಕರೆಯುವಾಗ ನನಗಾಗುವ ಸಂತೋಷ ಅಷ್ಟಿಷ್ಟಲ್ಲ. 

– ಗಿರೀಶ ಜಿ ಆರ್‌
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಕುವೆಂಪು ವಿಶ್ವವಿದ್ಯಾನಿಲಯ.

Advertisement

Udayavani is now on Telegram. Click here to join our channel and stay updated with the latest news.

Next