Advertisement

ವರದಕ್ಷಿಣಿ ಕಿರುಕುಳದಿಂದ ಸಾವಿಗೆ ಶರಣಾಗುತ್ತಿದ್ದೇನೆ!

11:41 AM Jan 12, 2018 | |

ಬೆಂಗಳೂರು: ಅತ್ತೆ, ಮಾವ ನೀಡುತ್ತಿದ್ದ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಗೃಹಿಣಿಯೊಬ್ಬರು, ಮದುವೆಯಾದ ಒಂದು ವರ್ಷ ಎರಡು ತಿಂಗಳಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ನಿರ್ಮಲಾ (25) ಆತ್ಮಹತ್ಯೆ ಮಾಡಿಕೊಂಡವರು. ರಾಜರಾಜೇಶ್ವರಿ ನಗರದ ಟೆಂಪಲ್‌ ಬೆಲ್ಸ್‌ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ಒಂದರಲ್ಲಿ ಪತಿ ವಿಶ್ವನಾಥ್‌ ಹಾಗೂ ಅತ್ತೆ, ಮಾವನ ಜತೆ ನಿರ್ಮಲಾ ವಾಸವಿದ್ದರು. ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿರುವ ಪತಿ ವಿಶ್ವನಾಥ್‌, ಕೆಲ ದಿನಗಳ ಹಿಂದೆ ಕಚೇರಿ ಕೆಲಸದ ನಿಮಿತ್ತ ಜಪಾನ್‌ಗೆ ತೆರಳಿದ್ದರು.

ಈ ನಡುವೆ ನಿರ್ಮಾಲಾ ಹಾಗೂ ಅತ್ತೆ, ಮಾವನ ನಡುವೆ ಬುಧವಾರ ಜಗಳ ನಡೆದಿದೆ ಎನ್ನಲಾಗಿದ್ದು, ತ್ತೆ ಹಾಗೂ ಮಾವ ನಿರ್ಮಲಾರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಬೇಸರಗೊಂಡಿದ್ದ ನಿರ್ಮಲಾ, ಸಂಜೆ 7.30ರ ಸುಮಾರಿಗೆ ತನ್ನ ಕೊಠಡಿಗೆ ತೆರಳಿ ಡೆತ್‌ನೋಟ್‌ ಬರೆದಿಟ್ಟು ಫ್ಯಾಜ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೊಸೆ ನಿರ್ಮಲಾ ಅವರು ಕೊಠಡಿಯಿಂದ ಎಷ್ಟೊತ್ತಾದರೂ ಹೊರಗಡೆ ಬರದಿರುವುದರಿಂದ ಅತ್ತೆ ಪ್ರೇಮಾ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ವಿಚಾರ ಅಕ್ಕ-ಪಕ್ಕದ ನಿವಾಸಿಗಳಿಗೂ ಗೊತ್ತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತ ಗೃಹಿಣಿಯ ತಂದೆ ನೀಡಿದ ದೂರಿನನ್ವಯ ವರದಕ್ಷಿಣೆ ಕಿರುಕುಳ ಆರೋಪದಡಿ ರಾಜರಾಜೇಶ್ವರಿ ನಗರ  ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅತ್ತೆ ಪ್ರೇಮಾ ಹಾಗೂ ಮಾವ ನಾಗರಾಜುರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೆ ನಿರ್ಮಲಾ ಅವರ ಪತಿ ವಿಶ್ವನಾಥ್‌ಗೂ ಮಾಹಿತಿ ನೀಡಿದ್ದು, ಜಪಾನ್‌ನಿಂದ ವಾಪಾಸ್‌ ಬರುತ್ತಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

ಡೆತ್‌ನೋಟ್‌ ಹರಿದ ಅತ್ತೆ-ಮಾವ!: ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿ ಭಯಭೀತರಾದ ಅತ್ತೆ ಪ್ರೇಮಾ ಹಾಗೂ ಮಾವ ನಾಗರಾಜು, ನಿರ್ಮಲಾ ಅವರು ಬರೆದಿಟ್ಟಿದ್ದ ಡೆತ್‌ನೋಟ್‌ ಅನ್ನು ಚಿಕ್ಕಚಿಕ್ಕದಾಗಿ ಹರಿದು ಕಸದ ಬುಟ್ಟಿಗೆ ಎಸೆದಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸುವಾಗಲೂ ಉತ್ತರಿಸಲು ಅವರಿಬ್ಬರೂ ತಡವರಿಸಿದ್ದಾರೆ.

ಅನುಮಾನದ ಮೇರೆಗೆ ಕೊಠಡಿ ಪರಿಶೀಲಿಸಿದಾಗ ಕಸದ ಬುಟ್ಟಿಯಲ್ಲಿ ಕಾಗದದ ಚೂರುಗಳು ಕಂಡು ಬಂದಿದ್ದು, ಅವುಗಳನ್ನು ಜೋಡಿಸಿದಾಗ, ಡೆತ್‌ ನೋಟ್‌ನಲ್ಲಿ, “ಅತ್ತೆ , ಮಾವ, ಪತಿಯ ವರದಕ್ಷಿಣಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂಬುದಾಗಿ ಬರೆಯಲಾಗಿತ್ತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

20 ಲಕ್ಷ ತರುವಂತೆ ಪೀಡಿಸುತ್ತಿದ್ದರು: ಮೈಸೂರಿನ ಕೆಎಸ್‌ಆರ್‌ಟಿಸಿ ನಿವೃತ್ತ ಚಾಲಕ ಪರಮೇಶ್ವರ ಶೆಟ್ಟಿ ದಂಪತಿಯ ಮಗಳು ನಿರ್ಮಲಾ, ಬಿ.ಇಡಿ ಪದವೀಧರೆ. 2016ರ ಅಕ್ಟೋಬರ್‌ನಲ್ಲಿ ವಿಶ್ವನಾಥ್‌ ಜತೆ ನಿರ್ಮಲಾ ವಿವಾಹವಾಗಿತ್ತು. ಮದುವೆ ವೇಳೆ 250 ಗ್ರಾಂ ಚಿನ್ನಾಭರಣ ಹಾಗೂ ಲಕ್ಷಾಂತರ ರೂ. ವರದಕ್ಷಿಣೆಯನ್ನೂ ನೀಡಲಾಗಿತ್ತು.

ಆದರೆ, “ಮದುವೆಯಾದ ಎರಡೇ ತಿಂಗಳಿಗೆ, ಅತ್ತೆ, ಮಾವನಿಂದ ವರದಕ್ಷಿಣೆ ಕಿರುಕುಳ ಶುರುವಾಗಿತ್ತು. 20 ಲಕ್ಷ ರೂ. ತಂದುಕೊಡು ಎಂದು ಅವರು ನಿರಂತರವಾಗಿ ಕಿರುಕುಳ ನೀಡಿದ್ದರು. ಈ ಬಗ್ಗೆ ಮಗಳು ಹಲವು ಬಾರಿ ನಮ್ಮ ಬಳಿ ಹೇಳಿಕೊಂಡಿದ್ದಳು. ಹೀಗಾಗಿ ಮಗಳ ಸಾವಿಗೆ ಆಕೆಯ ಅತ್ತೆ-ಮಾವ ಹಾಗೂ ಆಕೆಯ ಪತಿ ಕಾರಣ ಎಂದು ಆರೋಪಿಸಿ, ನಿರ್ಮಲಾ ಅವರ ತಂದೆ ಪರಮೇಶ್ವರ ಶೆಟ್ಟಿ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next