Advertisement
ನಾನು ನಿಮ್ಮ ಸೀತಮ್ಮ, ಸೀತೆ, ಸೀತಾದೇವಿ. ನನ್ನ ಹುಟ್ಟೊಂದು ವಿಚಿತ್ರ. ಬೆಳವಣಿಗೆಯೂ ವಿಚಿತ್ರ. ಒಟ್ಟಿನಲ್ಲಿ ನಾನು ಮಣ್ಣಿನ ಮಗಳು ಎಂಬುದು ಜನಜನಿತ. ನನ್ನ ಹುಟ್ಟು- ಬೆಳವಣಿಗೆಯ ಭೌತಿಕಾಭೌತಿಕ, ಇಲ್ಲವೆ ದೈವಿಕತೆಯನ್ನು ಹೇಳುವುದು ನನ್ನ ಉದ್ದೇಶವಲ್ಲ. ಬದುಕನ್ನು ನಾನು ಹೇಗೆ ಸ್ವೀಕರಿಸಿದೆ, ಏಕೆ ಹಾಗೆಯೇ ಸ್ವೀಕರಿಸಿದೆ ಎಂಬುದನ್ನು ವಿವರಿಸುತ್ತಿದ್ದೇನಷ್ಟೆ. ನಾನು ನಿಮಗೆ ಎಷ್ಟು ಪ್ರಸ್ತುತಳ್ಳೋ ಗೊತ್ತಿಲ್ಲ. ಆದರೂ ನಿಮ್ಮೆದುರು ನನ್ನನ್ನು ತೆರೆದುಕೊಳ್ಳಬೇಕೆನಿಸುತ್ತಿದೆ.
Related Articles
Advertisement
ಆರಾಧನೆ ತಪ್ಪಲ್ಲ, ಏನನ್ನು ಆರಾಧಿಸಬೇಕೆಂಬುದು ಮುಖ್ಯ. ಯಾರೂ ಅಂತರಂಗಕ್ಕಿಳಿದು ನೋಡುವುದಿಲ್ಲ, ತಣ್ತೀಚಿಂತನೆ ಕೇಳಲೇಬೇಡಿ. ಎಲ್ಲ ಕಡೆ ಗುಣಗಳ ಆರಾಧನೆಯಾಗಬೇಕು. ಶ್ರೇಷ್ಠತೆಯ ಆರಾಧನೆಯಾಗಬೇಕು. ಅದು ಯಾರಲ್ಲೇ ಇರಲಿ. ಪೂರ್ವದೃಷ್ಟಿಯಿಂದ ನೋಡದೇ ಆರಾಧಿಸಿದರೆ ಅದು ಸತ್ಯಾರಾಧನೆಯಾದೀತು. ಏಕೆಂದರೆ ಸತ್ಯ ಒಂದೇ. ಅದು ಬದಲಾಗದ್ದು. ಸತ್ಯವೇ ದೇವರು.ಇದೇ ಹಿನ್ನೆಲೆಯಲ್ಲಿಯೇ ನಾನು ಶ್ರೀರಾಮನೆಂಬ ನನ್ನ ಪಾಲಿನ ಸತ್ಯವನ್ನು ನಂಬಿದೆ. ಆ ಸತ್ಯ ನನ್ನನ್ನು ಎಲ್ಲೆಲ್ಲಿಗೆ ಕರೆದೊಯ್ಯಿತೋ ಅಲ್ಲೆಲ್ಲಾ ಹೋದೆ. ನಾನು ನಂಬಿದ ದೈವವೇ ನನ್ನನ್ನು ಹತ್ತು ಹಲವು ಪರೀಕ್ಷೆಗೆ ಒಡ್ಡಿತು. ಪರೀಕ್ಷೆಗಳು ಬರುವುದೇ ನಮ್ಮ ಶಕ್ತಿ – ಸಹನೆಗಳನ್ನು ಪರೀಕ್ಷಿಸುವುದಕ್ಕೆ. ಪ್ರಾಮಾಣಿಕವಾಗಿ ಪರೀಕ್ಷೆಗಳನ್ನು ಎದುರಿಸಿ ಅನುತ್ತೀರ್ಣರಾದರೂ ಅದು ಸೋಲಲ್ಲ, ಅವಮಾನವಲ್ಲ ಎಂದು ಭಾವಿಸಿರುವವಳು ನಾನು. ಪಾಲಿಗೆ ಬಂದದ್ದೇ ಪಂಚಾಮೃತ ಎಂದುಕೊಂಡೆ. ಹಾಗೆ ಪರೀಕ್ಷೆಗೆ ಒಡ್ಡಿಕೊಳ್ಳುವ ಪ್ರಸಂಗ ಬಂದಾಗಲೆಲ್ಲಾ ನನ್ನವರನ್ನು ದೂಷಿಸಲಿಲ್ಲ. ದೂಷಣೆಗೆ ಕಾರಣರಾದವರನ್ನೂ ದೂಷಿಸಲಿಲ್ಲ. ನನ್ನ ಅದೃಷ್ಟವೇ ಇದಕ್ಕೆ ಕಾರಣವೆಂದು ಭಾವಿಸಿ ಸಮಾಧಾನಪಟ್ಟೆ. ಹಿಂದೆ ಹೇಳಿದಂತೆ ಭಗವತಿಯ ಅಪರಾವತಾರವೆಂದು ನಾನೆಂದೂ ಭಾವಿಸಿದ್ದಿಲ್ಲ. ಅಂತೆಯೇ ನನ್ನವರೂ ತಮ್ಮನ್ನು ಅವತಾರಪುರುಷರೆಂದು ಹೇಳಿಕೊಂಡ ನೆನಪೂ ಇಲ್ಲ. “ಆತ್ಮಾನಂ ಮಾನುಷಂ ಮನ್ಯೆà’ ಎಂದೇ ಹೇಳುತ್ತಿದ್ದರು. ನಮ್ಮ, ಅಂದರೆ ಅಯೋಧ್ಯೆಯ ಸಮಸ್ತ ಹಿಂದು- ಮುಂದನ್ನು ಚಿತ್ರಿಸಿದ ನನಗೆ ಪಿತೃಸ್ವರೂಪರಾಗಿದ್ದ ವಾಲ್ಮೀಕಿಗಳೂ ಕೂಡ ಜಗತ್ತಿಗೆ ಮಾದರಿಯಾದ ಒಬ್ಬ ಪುರುಷನ ಕಥೆಯನ್ನೇ ಹೇಳಿದ್ದೆಂದು ನಾನೂ ಭಾವಿಸಿದ್ದೇನೆ. ಮಗಳೇ, ನಾನು ಬರೆದದ್ದು ರಾಮನ ಕಥೆಯೂ ಹೌದು, ನಿನ್ನ ಕಥೆಯೂ ಹೌದು ಎಂದು ಅವರು ಒಮ್ಮೆ ಹೇಳಿದ ನೆನಪು. ಸೀತಾಯಾಶ್ಚರಿತಂ ಮಹತ್ ಎಂದು ನೇರವಾಗಿ ಹೇಳಿದ್ದಿದೆ. ಆಗೆಲ್ಲ ನನಗೆ ಬಹಳ ಮುಜುಗುರವಾಗುತ್ತಿತ್ತು. ನನ್ನ ಪಾಡಿಗೆ ನಾನು ಇರುತ್ತಿದ್ದೆ, ಯಾಕಪ್ಪ ಈ ತಾತ ನನ್ನನ್ನು ಹೊರಜಗತ್ತಿನೆದುರು ನಿಲ್ಲಿಸುತ್ತಿದ್ದಾರಪ್ಪ ಎನ್ನಿಸದಿರಲಿಲ್ಲ. ನನಗೆ ಚಿಕ್ಕಂದಿನಿಂದಲೂ ಹೊರ ಜಗತ್ತಿಗಿಂತಲೂ ಒಳ ಜಗತ್ತಿನಲ್ಲಿ ವಿಹರಿಸುವುದೇ ಬಹಳ ಇಷ್ಟವಾಗಿತ್ತು. ಇದು ಒತ್ತಟ್ಟಿಗಿರಲಿ, ಪುರುಷನೊಬ್ಬ ಹೇಗೆ ಸ್ವಶಕ್ತಿಯಿಂದ ಪುರುಷೋತ್ತಮನಾಗಿ ಬೆಳೆಯಬಲ್ಲ ಎಂಬುದಕ್ಕೆ ಜ್ವಲಂತ ಉದಾಹರಣೆಯನ್ನು ಕೊಡುವುದೇ ತಾತನ ಮಹಾಕಾವ್ಯದ ತಾತ್ಪರ್ಯವೆಂದು ನನ್ನ ಗ್ರಹಿಕೆ. ನನ್ನ ಗ್ರಹಿಕೆಯೇ ಅಂತಿಮವೆಂದೇನೂ ಅಲ್ಲ. ಅಂತಿಮವಾಗಬೇಕಾಗಿಯೂ ಇಲ್ಲ. ಅವರವರ ದೃಷ್ಟಿ ಅವರವರಿಗೆ. ದೃಷ್ಟಿಯಂತೆ ಸೃಷ್ಟಿ. ಇಷ್ಟೆಲ್ಲಾ ಹೇಳುವುದಕ್ಕೆ ಮುಖ್ಯ ಕಾರಣ, ನಾನೂ ನಿಮ್ಮಂತೆಯೇ ಒಬ್ಬ ಸಾಮಾನ್ಯ ಸ್ತ್ರೀ ಎಂಬುದನ್ನು ತಿಳಿಸುವ ಉದ್ದೇಶವಷ್ಟೇ. ಆದರೆ, ಬದುಕಿನಲ್ಲಿ ಅಷ್ಟೇ ಅಸಾಮಾನ್ಯ ಸಂದರ್ಭಗಳನ್ನು ಎದುರಿಸಬೇಕಾಯಿತೆಂಬುದೂ ಸತ್ಯ. ಅವುಗಳೆಲ್ಲ ನನ್ನನ್ನು ಮತ್ತಷ್ಟು ಗಟ್ಟಿಗೊಳಿಸಿದವು. ನನ್ನನ್ನು ಪರಿಪಕ್ವತೆಯ ಕಡೆಗೊಯ್ದವು. ನಾನು ನಿಜವಾಗಿಯೂ ಮನುಷ್ಯಳಾಗಲು ಪ್ರೇರೇಪಣೆ ನೀಡಿದವು. ನನ್ನಂತೆ ವಿಭಿನ್ನ ಸ್ವರೂಪದ ಅನಿರೀಕ್ಷಿತ ಅಸಾಮಾನ್ಯ ಘಟನೆಗಳಿಗೆ ಸಾಕ್ಷಿಗಳಾದ ಬೇಕಾದಷ್ಟು ಮಂದಿ ಇರಬಹುದು. ಆದರೆ, ನನ್ನ ಬಗ್ಗೆ ಅದೇಕೋ ಎಲ್ಲರಿಗೂ ಹೆಚ್ಚು ಪ್ರೀತಿ, ಅನುಕಂಪ, ಅನಿರ್ವಚನೀಯ ಆತ್ಮೀಯತೆ. ಬಹುಶಃ ನಾನು ವ್ಯಕ್ತಳಾದೆ. ಅವರು ಅವ್ಯಕ್ತರಾಗಿ ಉಳಿದರು. ನನ್ನ ಹುಟ್ಟೂ ದುರಂತದ್ದು. ಅಂತ್ಯವೂ ದುರಂತದ್ದು. ಹುಟ್ಟು- ಸಾವುಗಳ ಮಧ್ಯೆ ಅಪ್ಪಿದ ಕಷ್ಟಕಾರ್ಪಣ್ಯಗಳೆಷ್ಟೋ? ಆದರೆ, ನಾವು ಹುಟ್ಟುವುದೇ ಕಷ್ಟಪಡುವುದಕ್ಕೆ ಅಂತ ಯೋಚಿಸಬಾರದು. ಕೊರಗುತ್ತಾ ಕೂರಬಾರದು. ಹಾಗೆ ಯೋಚಿಸಿದರೆ ಬದುಕನ್ನು ಅವಮಾನಿಸಿದಂತೆ. ಬಂದಿದ್ದನ್ನು ಬಂದಂತೆಯೇ ಸ್ವೀಕರಿಸುತ್ತಾ ಸಾಗಬೇಕು. ಇದು ನಾನು ಜೀವನದಲ್ಲಿ ಕಲಿತ ಪಾಠ. ನನಗೆ ಈ ಧೀಶಕ್ತಿ ಎಲ್ಲಿಂದ ಬಂತೆಂದು ವಿಸ್ಮಯವಾದದ್ದಿದೆ. ಆಗೆಲ್ಲ ನನಗೆ ನೆನಪಾಗುತ್ತಿದ್ದದ್ದು ನನ್ನಪ್ಪ ಜನಕ ಮಹಾರಾಜ. ಅವರು ನನಗೆ ಬಾಲ್ಯದಲ್ಲಿ ಉತ್ತಮ ಸಂಸ್ಕಾರ, ತದನಂತರ ಒಳ್ಳೆಯ ಶಿಕ್ಷಣ, ಎಷ್ಟೇ ಕಷ್ಟ ಬಂದರೂ ಧರ್ಮದ ದಾರಿಯನ್ನು ಎಂದೂ ಬಿಡಬಾರದೆಂದು ಉಪದೇಶಿಸಿದ್ದು, ನೈತಿಕ ನೆಲೆಗಟ್ಟಿನಲ್ಲಿಯೇ ಬದುಕಬೇಕೆಂದು ಆದೇಶಿಸಿದ್ದು ಬಾಳಿನುದ್ದಕ್ಕೂ ಬುತ್ತಿಯಾಯಿತು. ಅವರು ಕೊಟ್ಟ ಒಂದೊಂದು ಮಾತೂ ನನಗೆ ಉಪದೇಶವೂ ಹೌದು, ಆದೇಶವೂ ಹೌದು. ಈ ಪೂರ್ವಪೀಠಿಕೆಯ ತಳಹದಿಯ ಮೇಲೆ ಸಂಕ್ಷಿಪ್ತವಾಗಿ ನನ್ನ ಬದುಕನ್ನು ತೆರೆದಿಡುವ ಪ್ರಯತ್ನ ನನ್ನದು… (ಮುಂದುವರಿಯುತ್ತದೆ) * ಸಿ.ಎ. ಭಾಸ್ಕರ ಭಟ್ಟ