ಮಳವಳ್ಳಿ: ನಾನು ಜವಾಬ್ದಾರಿಯುತ ರಾಜಕಾರಣ ಮಾಡುವವನು. ಗುಲಾಮಗಿರಿ ರಾಜಕಾರಣ ಮಾಡೋನಲ್ಲ. ಯೋಗ್ಯತೆ ಇಲ್ಲದವರ ಬಗ್ಗೆ ನಾನು ಏನೂ ಮಾತನಾಡೋಲ್ಲ ಎಂದು ಶಾಸಕ ಡಾ.ಕೆ.ಅನ್ನದಾನಿ ವಿರುದ್ಧ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಿಡಿಕಾರಿದರು.
ಲೋಕಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಈ ಚುನಾವಣೆಯಲ್ಲಿ ನಿಖೀಲ್ ಪರ ಕೆಲಸ ಮಾಡಿಲ್ಲ ಎಂದು ಶಾಸಕರು ಮಾಡಿರುವ ಆರೋಪಕ್ಕೆ ಪಟ್ಟಣದಲ್ಲಿ ಪ್ರತಿಕ್ರಿಯಿಸಿದ ಅವರು, ಚುನಾವಣಾ ಸಮಯದಲ್ಲಿ ಯಾರು ಏನು ಮಾಡುತ್ತಿದ್ದಾರೆ ಅಂತ ಅಳತೆ ಮಾಡೋಕೆ ಅನ್ನದಾನಿ ಸ್ಕೇಲ್ ಇಟ್ಟುಕೊಂಡಿದ್ದಾರಾ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ನಾನು ಯಾರ ಪರವೂ ಕೆಲಸ ಮಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ನಾನು ನಮ್ಮ ಪಕ್ಷದ ನಾಯಕರಿಗೆ ತಟಸ್ಥವಾಗಿರುವ ಬಗ್ಗೆ ಸ್ಪಷ್ಟಪಡಿಸಿದ್ದೆ. ನನಗೆ ಹಿಡಿಸದ, ಉಸಿರುಗಟ್ಟುವ ವಾತಾವರಣದಲ್ಲಿ ನಾನು ಇರುವುದಿಲ್ಲವೆಂದು ಸಚಿವ ಡಿ.ಕೆ.ಶಿವಕುಮಾರ್ ಅವರಿಗೂ ಹೇಳಿದ್ದೆ. ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ಸಿಗರ ದನಿಯಾಗಿರಲು ಇಷ್ಟಪಡುತ್ತೇನೆಯೇ ಹೊರತು ಇನ್ನೊಂದು ಪಕ್ಷದ ದನಿಯಾಗುವುದಿಲ್ಲ ಎಂದು ತಿಳಿಸಿದ್ದೆ ಎಂದು ಹೇಳಿದರು.
ನಾನು ಸುಮಲತಾ ಪರ ಯಾವ ವೇದಿಕೆಯಲ್ಲೂ ಕಾಣಿಸಿಕೊಂಡಿಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ದವಾಗಿರದೇ ಇರೋದಕ್ಕೆ ಎಲ್ಲ ರೀತಿಯಲ್ಲೂ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೆ. ನಮಗೆ ಜೆಡಿಎಸ್ ಪರ ಚುನಾವಣೆ ಮಾಡಲು ಇಚ್ಚೆ ಇರಲಿಲ್ಲ. ಅದಕ್ಕಾಗಿ ದೂರ ಉಳಿದಿದ್ದೆವು ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
ಖಾಸಗಿ ವಿಚಾರ:
ಸುಮಲತಾ ಅಂಬರೀಶ್ ಜೊತೆಗಿನ ಔತಣಕೂಟದ ವಿಚಾರಕ್ಕೆ ಸಂಬಂಧಿಸಿದಂತೆ ಹುಟ್ಟುಹಬ್ಬದ ಸಮಾರಂಭವೊಂದಕ್ಕೆ ತೆರಳಿದ್ದಾಗ ನಾವು ಮತ್ತು ಸುಮಲತಾ ಮುಖಾಮುಖೀ ಆಗಿದ್ದೆವು. ಒಟ್ಟಿಗೆ ಕುಳಿತು ಊಟ ಮಾಡಿದ್ದೆವು. ಅದನ್ನೇ ಮಹಾಪರಾಧ ಎಂದು ಬಿಂಬಿಸುವುದು ಎಷ್ಟರಮಟ್ಟಿಗೆ ಸರಿ. ಅದು ಖಾಸಗಿ ವಿಚಾರ. ಅದಕ್ಕೆಲ್ಲಾ ಉತ್ತರ ನೀಡಲಾಗುವುದಿಲ್ಲ ಎಂದು ಹೇಳಿದರು.