Advertisement

ಸೋಲಿನ ಭೀತಿ ನನಗಿಲ್ಲ : ಪ್ರಮೋದ್‌

03:29 AM Apr 14, 2019 | Team Udayavani |

ಮೂಡಿಗೆರೆ: ಯಡಿಯೂರಪ್ಪನವರು ಬಿಜೆಪಿ ಪಕ್ಷವನ್ನು ತೊರೆದು ಕೆಜೆಪಿ ಕಟ್ಟಿದಾಗ ಶೋಭಾ ಕರಂದ್ಲಾಜೆಯವರು ಕೂಡ ಬಿಜೆಪಿಗೆ ಡೈವೋರ್ಸ್‌ ನೀಡಿದ್ದರು. ಅನಂತರ ಕೆಜೆಪಿಯಿಂದ ರಾಜಾಜಿನಗರದಲ್ಲಿ ಸ್ಪರ್ಧಿಸಿ ಹೀನಾಯವಾಗಿ ಸೋಲು ಕಂಡಿರುವುದನ್ನು ಜನತೆ ಇನ್ನೂ ಮರೆತಿಲ್ಲ.
ದುರ್ಬಲರನ್ನು ಬಲಾಡ್ಯರನ್ನಾಗಿ ಮಾಡುವ ಮತ್ತು ಬಲಾಡ್ಯರನ್ನು ದುರ್ಬಲರನ್ನಾಗಿ ಮಾಡುವ ಶಕ್ತಿ ಜನತೆಗಿದೆ. ಆ ಬಲಾಡ್ಯ ಶಕ್ತಿಯೇ ನನಗೆ ದೃಢತೆ ನೀಡಿದೆ ಎಂದು ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ.

Advertisement

ಮೂಡಿಗೆರೆಯಲ್ಲಿ ಶನಿವಾರ ನಡೆದ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, ಹಾಲು ಜೇನಿನಂತೆ ಒಗ್ಗೂಡಿದ ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿಕೂಟದಿಂದ ಸ್ಪರ್ಧಿಸುವ ನನ್ನ ಬಗ್ಗೆ ಶೋಭಾ ಅವರಿಗೆ ಮಾತನಾಡುವ ಯಾವ ನೈತಿಕತೆಯೂ ಉಳಿದಿಲ್ಲ. ಕಳೆದ ಬಾರಿ ಮೋದಿ ಅಲೆಯಲ್ಲಿ ಗೆದ್ದವರು ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಜನರ ಸಮಸ್ಯೆಗೆ ಸ್ಪಂದಿಸದೆ ಜನತೆಗೆ ನಿರಾಸೆ ಮೂಡಿಸಿರುವಾಗ ಮೋದಿಗೆ ಮತ ನೀಡಿ ಎಂದು ಶೋಭಾ ಮತಯಾಚಿಸುತ್ತಿರುವುದು ಸೋಲಿನ ಭಯದಿಂದ ಅಲ್ಲವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಪಕ್ಷದ ಧೀಮಂತ ನಾಯಕಿ ಇಂದಿರಾ ಗಾಂಧಿಯವರು ದೇಶಕ್ಕೆ ಕೊಟ್ಟ ಕೊಡುಗೆಯನ್ನು ಜನತೆ ಇಂದೂ ನೆನಪಿಸಿಕೊಳ್ಳುತ್ತದೆ. ಆದರೆ ಮೈತ್ರಿ ಪಕ್ಷದ ಅಭ್ಯರ್ಥಿಗಳು ಇಂದಿರಾ ಗಾಂಧಿಗೆ ಮತ ನೀಡಿ ಎಂದು ಮತ ಯಾಚಿಸುವುದಿಲ್ಲ. ಪ್ರಧಾನಿ ಮೋದಿಯವರ ಆಡಳಿತ ಅವಧಿಯಲ್ಲಿ ದೇಶ ಕಂಡ ಆರ್ಥಿಕ ಸಂಕಷ್ಟ ಮತ್ತು ನಿರುದ್ಯೋಗ ಸಮಸ್ಯೆ ಉಲ್ಬಣಿಸಿರುವು ಹಾಗೂ ದೇಶದ ಗಡಿ ಭಾಗಗಳಲ್ಲಿ ಉಗ್ರಗಾಮಿಗಳ ನುಸುಳುವಿಕೆ, ಸೈನಿಕರ ಸಾವು ಮತ್ತು ವಿವಿಧ ಧರ್ಮೀಯರಲ್ಲಿ ನಡೆದ ಘರ್ಷಣೆಗಳು ನಡೆದಿರುವುದು ಬಲಿಷ್ಟ ಭಾರತದ ಸಂಕೇತವೇ ಎಂದು ಶೋಭಾ ಅವರು ಉತ್ತರಿಸಬೇಕಾಗಿದೆ ಎಂದು ಪ್ರಮೋದ್‌ ಹೇಳಿದರು.

ಆಯುಷ್ಮಾನ್‌ ಭಾರತ ಯೋಜನೆಯು ಶೇ. 40ರಷ್ಟು ರಾಜ್ಯದ ಅನುದಾನ ಹಾಗೂ ಶೇ.60ರಷ್ಟು ಕೇಂದ್ರದ ಅನುದಾನಗಳೊಂದಿಗೆ ಜಂಟಿ ಸಹಭಾಗಿತ್ವದಲ್ಲಿ ಪ್ರಾರಂಭಗೊಂಡಿದೆ. ಒಂದು ಕುಟುಂಬಕ್ಕೆ 5 ಲಕ್ಷ ರೂ. ವರೆಗಿನ ವೈದ್ಯಕೀಯ ವೆಚ್ಚ ಭರಿಸುವ ಅದ್ಭುತ ಯೋಜನೆ ಇದಾಗಿದ್ದು, ಕೋಟ್ಯಂತರ ಜನರು ಇದರ ಫ‌ಲಾನುಭವಿಗಳಾಗಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಆಯುಷ್ಮಾನ್‌ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ರಾಜ್ಯದ ಎಲ್ಲ ಬಿಪಿಎಲ್‌ ಕಾರ್ಡ್‌ ಹೊಂದಿದ ಕುಟಂಬದವರಿಗೆ 5 ಲಕ್ಷ ರೂ.ವರೆಗಿನ ವೈದ್ಯಕೀಯ ವೆಚ್ಚಗಳು ಉಚಿತ ಎಂದರು.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಶಾಸಕತ್ವದ ಅವಧಿಯಲ್ಲಿ ಸುಮಾರು 21,000 ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ಸಿಗುವಂತೆ ಮಾಡಿದ್ದೇನೆ. ಆರೋಗ್ಯ ಕರ್ನಾಟಕ ಯೋಜನೆಯ ಫ‌ಲಾನುಭವಿಗಳಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಮಾತ್ರ ಎಪಿಎಲ್‌ ಕಾರ್ಡ್‌ ಹೊಂದಿದವರಿಗೆ ಶೇ.30 ಆರೋಗ್ಯ ವೆಚ್ಚವನ್ನು ಸರಕಾರ ಭರಿಸುತ್ತದೆ. ಉಳಿದ ಶೇ.70 ವೆಚ್ಚವನ್ನು ಫ‌ಲಾನುಭವಿಗಳೇ ಭರಿಸಬೇಕಾಗುತ್ತದೆ. ದೇಶದ ಅಭಿವೃದ್ಧಿಗಾಗಿ ಮತ್ತು ಭದ್ರತೆಗಾಗಿ ಕಾಂಗ್ರೆಸ್‌ ನೀಡಿದ ಕೊಡುಗೆಯನ್ನು ಮರೆಮಾಚಲು ಅಸಾಧ್ಯ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next