Advertisement

ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ -ಭವಿಷ್ಯದ ಬಗ್ಗೆ ಏನನ್ನೂ ಹೇಳುವುದಿಲ್ಲ:C.T.ರವಿ

09:06 PM Jul 30, 2023 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಎನ್ನುವುದು ಒಂದು ಜವಾಬ್ದಾರಿ. ಅದನ್ನು ಕೇಳಿ ಪಡೆಯುವಂಥದ್ದಲ್ಲ. ಹೀಗಾಗಿ ನಾನದರ ಆಕಾಂಕ್ಷಿಯೂ ಅಲ್ಲ, ನಾನೊಬ್ಬ ಕಾರ್ಯಕರ್ತ ಅಷ್ಟೇ ಎಂದು ಸಿ.ಟಿ. ರವಿ ಹೇಳಿದರು.

Advertisement

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರವಿ ಅವರೇ ಬಿಜೆಪಿಯ ಮುಂದಿನ ರಾಜ್ಯಾಧ್ಯಕ್ಷರು ಎನ್ನುವ ಸುದ್ದಿ ಹರಿದಾಡುತ್ತಿರುವಾಗಲೇ ಈ ಸ್ಪಷ್ಟನೆ ನೀಡಿರುವ ಅವರು, ಊಹಾತ್ಮಕವಾದ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ. ಸದ್ಯಕ್ಕೆ ನಾನೀಗ ಮಾಜಿ ಪ್ರಧಾನ ಕಾರ್ಯದರ್ಶಿ ಎಂಬುದಷ್ಟೇ ವರ್ತಮಾನ. ಭವಿಷ್ಯದ ಬಗ್ಗೆ ಈಗಲೇ ಏನನ್ನೂ ಹೇಳುವುದಿಲ್ಲ ಎಂದರು.

ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಯುವವರೆಗೆ ಶಾಶ್ವತವಾದ ಜವಾಬ್ದಾರಿಗಳು ಯಾವೂ ಇಲ್ಲ. 1988ರಿಂದ ಪಕ್ಷದಲ್ಲಿದ್ದೇನೆ. ಬೂತ್‌ ಅಧ್ಯಕ್ಷನಿಂದ ಹಿಡಿದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿವರೆಗಿನ ಹುದ್ದೆಗಳನ್ನು ಪಕ್ಷ ನೀಡಿದೆ. 2 ವರ್ಷ 10 ತಿಂಗಳು ಈ ಹುದ್ದೆಯಲ್ಲಿ ಕೆಲಸ ಮಾಡಲು ಪಕ್ಷ ಅವಕಾಶ ಕೊಟ್ಟಿತ್ತು. ಪಕ್ಷದ ಯಾವುದೇ ಕೆಲಸವನ್ನು ನಾನು ಕಾರ್ಯಕರ್ತ ಎನ್ನುವ ಮನಸ್ಥಿತಿಯಲ್ಲೇ ಮಾಡುತ್ತೇನೆ. ಅದೊಂದೇ ಶಾಶ್ವತ ಎಂದರು.

ಬಿಎಸ್‌ವೈ ಭೇಟಿ, ಎಚ್‌ಡಿಡಿ ಹೇಳಿಕೆ ಸಹಜ
ಯಾರಿಗೆ ಯಾವಾಗ ಯಾವ ಜವಾಬ್ದಾರಿ ಕೊಡಬೇಕು ಎಂಬುದನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಸಂಸದೀಯ ಮಂಡಳಿ ತೀರ್ಮಾನಿಸುತ್ತದೆ. ಯಾವುದೇ ಜವಾಬ್ದಾರಿಯಾದರೂ ಕೇಳಿ ಪಡೆದುಕೊಳ್ಳುವಂಥದ್ದಲ್ಲ. 35 ವರ್ಷದಿಂದ ಪಕ್ಷದೊಂದಿಗೆ ಇದ್ದೇನೆ. ಅಂದಿನಿಂದಲೂ ಯಡಿಯೂರಪ್ಪ ಅವರ ಆಶೀರ್ವಾದ ಪಡೆದುಕೊಂಡೇ ಬಂದಿದ್ದೇನೆ. ಈಗ ಭೇಟಿ ಮಾಡಿದ್ದರಲ್ಲಿ ಹೊಸತೇನೂ ಇಲ್ಲ. ಇನ್ನು ಎಚ್‌.ಡಿ. ದೇವೇಗೌಡರು ಹಿರಿಯ ರಾಜಕಾರಣಿ. ನಮ್ಮ ದೇಶದ ಮಾಜಿ ಪ್ರಧಾನಿಗಳು. ಚಿಕ್ಕಮಗಳೂರಿನವರು ಬಿಜೆಪಿ ರಾಜ್ಯಾಧ್ಯಕ್ಷರಾಗುವ ಚರ್ಚೆ ನಡೆಯುತ್ತಿದೆ ಎಂದಿದ್ದರೆ ಹೊರತು, ನಿರ್ಣಯ ಆಗಿದೆ ಎಂದು ಹೇಳಿರಲಿಲ್ಲ. ಚರ್ಚೆಗಳೆಲ್ಲವೂ ನಿರ್ಣಯಗಳಾಗುವುದಿಲ್ಲ. ಪಕ್ಷ ಏನು ತೀರ್ಮಾನ ಮಾಡುತ್ತದೆ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ ಎಂದಷ್ಟೆ ಹೇಳಿದರು.

ರಾಜ್ಯ ರಾಜಕಾರಣದ ಚರ್ಚೆ
ವಿರೋಧ ಪಕ್ಷದ ನಾಯಕರ ಆಯ್ಕೆ ವಿಳಂಬದ ಕುರಿತು ಪ್ರತಿಕ್ರಿಯಿಸಿದ ಸಿ.ಟಿ. ರವಿ, ತಮಿಳುನಾಡಿನ ಪ್ರಭಾರಿ ಆಗಿದ್ದರಿಂದ ಅಲ್ಲಿ ನಡೆದ ನನ್ನ ಭೂಮಿ, ನನ್ನ ಜನ (ಎನ್‌ ಮಣ್‌ ಎನ್‌ ಮಕ್ಕಳ್‌) ಯಾತ್ರೆಯಲ್ಲಿ ನಾನೂ ಪಾಲ್ಗೊಂಡಿದ್ದೆ. ಒಳ್ಳೆಯ ಜನಸ್ಪಂದನೆ ದೊರೆತಿದೆ. ಈ ವೇಳೆ ಪಕ್ಷದ ರಾಷ್ಟ್ರೀಯ ನಾಯಕರೂ ಭಾಗಿಯಾಗಿದ್ದರು. ಸಹಜವಾಗಿ ಕರ್ನಾಟಕದ ರಾಜಕೀಯ ಬೆಳವಣಿಗೆ ಬಗ್ಗೆಯೂ ಚರ್ಚೆಯಾಗಿದೆ ಎಂದರು.

Advertisement

ಮನ್‌ ಕೀ ಬಾತ್‌ ಮೂಲಕ ಜನರೊಂದಿಗೆ ನಿರಂತರ ಸಂವಹನ
ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ಕುರುಬರಹಳ್ಳಿಯಲ್ಲಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕೀ ಬಾತ್‌ ಆಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿ.ಟಿ. ರವಿ, ಮನ್‌ ಕೀ ಬಾತ್‌ನಲ್ಲಿ ಪ್ರಧಾನಿಗಳು ಎಂದಿಗೂ ರಾಜಕಾರಣ ಮಾತನಾಡುವುದಿಲ್ಲ. ದೇಶ-ವಿದೇಶದಲ್ಲಿನ ಪ್ರಮುಖ ವಿದ್ಯಮಾನಗಳನ್ನು ಮಾತನಾಡುತ್ತಾರೆ. ಸಾಮೂಹಿಕವಾಗಿ ಇದನ್ನು ಕೇಳುವುದರಿಂದ ಕೇಳುಗರಲ್ಲಿ ಒಂದು ಸಂಸ್ಕಾರ ಬರುತ್ತದೆ. ಮಾಹಿತಿಯೊಂದಿಗೆ ಒಳ್ಳೆಯ ಕೆಲಸ ಮಾಡಲು ಸಾಮಾನ್ಯ ಜನರಿಗೆ ಪ್ರೇರಣೆ ಸಿಗುತ್ತದೆ ಎಂದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರಿಂದ ದೆಹಲಿಯಲ್ಲಿ ನನಗೆ ವಸತಿ ವ್ಯವಸ್ಥೆ ಮಾಡಿತ್ತು. ಅಲ್ಲೊಂದು ಕಚೇರಿಯೂ ಇತ್ತು. ಈಗ ಜವಾಬ್ದಾರಿ ಮುಗಿದಿದೆ. ನಾನು ದೆಹಲಿ ಕೇಂದ್ರಿತ ರಾಜಕಾರಣಿ ಅಲ್ಲದೇ ಇರುವುದರಿಂದ ಕಚೇರಿ ಖಾಲಿ ಮಾಡಬೇಕಿದೆ. ಪಕ್ಷ ನನಗೆ ಹಲವು ಜವಾಬ್ದಾರಿಗಳನ್ನು ಕೊಟ್ಟಿದ್ದರಿಂದಲೇ ಇಲ್ಲಿವರೆಗೆ ಬೆಳೆದಿದ್ದೇನೆ. ಅದಕ್ಕಾಗಿ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಸದ್ಯದಲ್ಲೇ ದೆಹಲಿಗೆ ಭೇಟಿ ನೀಡುತ್ತೇನೆ.
ಸಿ.ಟಿ. ರವಿ, ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next