Advertisement

ನನ್ನದು ಪ್ರತ್ಯೇಕ ಯಾತ್ರೆ ಅಲ್ಲ

08:13 AM Jan 04, 2018 | Team Udayavani |

ರಾಜ್ಯದಲ್ಲಿ ಈಗಾಗಲೇ ಚುನಾವಣೆ ಯಾತ್ರೆಗಳು ಆರಂಭವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಪಕ್ಷದ ವತಿಯಿಂದ ಕಾಂಗ್ರೆಸ್‌ ನಡಿಗೆ ಜಯದ ಕಡೆಗೆ ಯಾತ್ರೆ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ತಾವು ಪ್ರತ್ಯೇಕವಾಗಿ ನಡೆಸುತ್ತಿರುವ ಯಾತ್ರೆ, ಅಭ್ಯರ್ಥಿಗಳ ಆಯ್ಕೆ, ಬಿಜೆಪಿ ಹಿಂದುತ್ವ ತಂತ್ರಕ್ಕೆ ಕಾಂಗ್ರೆಸ್‌ಪ್ರತಿತಂತ್ರ ಹಾಗೂ ಇವಿಎಂ ದೋಷಗಳ ಕುರಿತು ಉದಯವಾಣಿಯೊಂದಿಗೆ ನೇರಾ ನೇರ ಮಾತನಾಡಿದ್ದಾರೆ.

Advertisement

ನಿಮ್ಮದೇ ಪ್ರತ್ಯೇಕ ಯಾತ್ರೆ ಆರಂಭಿಸಿದ್ದೀರಿ. ಜನರ ಪ್ರತಿಕ್ರಿಯೆ ಹೇಗಿದೆ ?
ನೋಡಿ ಇದು ನನ್ನದೇ ಆದ ಪ್ರತ್ಯೇಕ ಯಾತ್ರೆ ಅಲ್ಲ. ನಾವು ಎಲ್ಲೆಲ್ಲಿ ಸೋತಿದ್ದೇವೆ. ಅಲ್ಲಿ ನಮ್ಮದೇ ಆದ ರೀತಿಯಲ್ಲಿ ವಿಮರ್ಶೆ ಮಾಡಿ ಚುನಾವಣೆ ಸಿದ್ಧತೆ ನಡೆಸುತ್ತಿದ್ದೇವೆ. ನಾವು ಗೆಲ್ಲಲು ಏನೆಲ್ಲಾ ಸಾಧ್ಯತೆ ಇದೆಯೋ ಆ ಕ್ಷೇತ್ರಗಳಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ. ಇದು ಪಕ್ಷದ ಯಾತ್ರೆ ಪಕ್ಷದ ಎಲ್ಲ ಮುಖಂಡರೂ ಪಾಲ್ಗೊಳ್ಳುತ್ತಾರೆ.

ಇಬ್ಬರು ನಾಯಕರು ಪ್ರತ್ಯೇಕ ಯಾತ್ರೆ ಮಾಡಿದರೆ, ಕಾರ್ಯಕರ್ತರಿಗೆ ಗೊಂದಲ ಆಗುವುದಿಲ್ಲವೇ ?
ನಮಗೆ ಇದು ಯಾತ್ರೆ ಅಲ್ಲವೇ ಅಲ್ಲ. ಪ್ರತಿಯೊಂದು ಕ್ಷೇತ್ರ ಗೆಲ್ಲಲು ನಮ್ಮದೊಂದು ರಣ ನೀತಿ ಇದೆ. ಮುಖ್ಯಮಂತ್ರಿ ಹೋಗುತ್ತಿರುವುದು ಸರ್ಕಾರದ ಕಾರ್ಯಕ್ರಮಗಳಿಗೆ. ಅಲ್ಲಿ ಮುಖ್ಯಮಂತ್ರಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೇಳಿದರೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅಲ್ಲಿಯೂ ನಮ್ಮ ಕಾರ್ಯಕರ್ತರಿದ್ದಾರೆ. ನಾವು ಹೋಗುವ ಕ್ಷೇತ್ರಗಳಲ್ಲಿ ಅವರೂ ಹೋಗಬಹುದು. ನಾವೂ ಅವರು ಹೋದ ಕ್ಷೇತ್ರಗಳಿಗೆ ಹೋಗಬಹುದು. ಈ ಪ್ರವಾಸ ಮುಗಿದ ಮೇಲೆ ಪಕ್ಷದ ಎಲ್ಲ ನಾಯಕರೂ ಮತ್ತೂಂದು ಸುತ್ತು ಹೋಗುತ್ತೇವೆ. 

ಮುಖ್ಯಮಂತ್ರಿ ಸಂಭ್ರಮ ಯಾತ್ರೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ?
ಮುಖ್ಯಮಂತ್ರಿಯದು ಸಂಭ್ರಮ ಯಾತ್ರೆ ಅಲ್ಲ. ಯಾರೋ ಸಂಭ್ರಮ ಅಂದರೆ ಅದು ಸಂಭ್ರಮ ಆಗಲ್ಲ. ಅದಕ್ಕೆ ನಾವು ಯಾವುದೇ ಹೆಸರು ಕೊಟ್ಟಿಲ್ಲ. ಮುಖ್ಯಮಂತ್ರಿಯ ಪ್ರವಾಸವನ್ನು ರಾಜ್ಯ ಉಸ್ತುವಾರಿ ಮತ್ತು ನಾವೆಲ್ಲಾ ಸೇರಿಯೇ ತೀರ್ಮಾನ ಮಾಡಿದ್ದೇವೆ. ಬೇರೆಯವರು ಏನಾದರೂ ಅಂದುಕೊಳ್ಳಲಿ. ನಮ್ಮಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ.

ಚುನಾವಣೆ ಎದುರಿಸಲು ನಿಮ್ಮ ಅಜೆಂಡಾ ಏನು ?
ಕರ್ನಾಟಕದ ಜನ ಜಾತ್ಯತೀತರು, ಬಸವಣ್ಣ ಹುಟ್ಟಿದ ನಾಡು ಇದು. ಮೈಸೂರಿನ ಮಹಾರಾಜರು ಸಂವಿಧಾನದಲ್ಲಿ ಮೀಸ ಲಾತಿ ತರುವ ಮೊದಲೇ ಅವರು ಮೀಸಲಾತಿ ತಂದರು. ನಮ್ಮಲ್ಲಿ ಬಿಜೆಪಿಯ ಹಿಂದುತ್ವದ ಅಜಂಡಾ ಇಲ್ಲಿ ನಡೆಯುವು ದಿಲ್ಲ. ನಾವು ಅವರ ಹಿಂದುತ್ವ ನಡೆಯಲು ಬಿಡುವುದಿಲ್ಲ.

Advertisement

ರಾಹುಲ್‌ ಗಾಂಧಿ ಹಿಂದುತ್ವದ ವಿಷಯದಲ್ಲಿ ಮೃದು ಧೋರಣೆ ಅನುಸರಿಸುತ್ತಿದ್ದಾರೆ ಹೌದಾ ?
ನೋಡಿ, ರಾಹುಲ್‌ ಗಾಂಧಿ ದೇವಸ್ಥಾನಕ್ಕೆ ಹೋದರೆ, ಅಲ್ಪ ಸಂಖ್ಯಾ ತರನ್ನು ದೂರ ಇಟ್ಟಿದ್ದಾರೆ ಅಂತಲ್ಲಾ. ನಾವೂ ಹಿಂದುಗಳು ಈ ದೇಶದ ಸಂವಿಧಾನದ ಅಡಿಯಲ್ಲಿ ಎಲ್ಲರನ್ನೂ ಸಮಾನವಾಗಿ ಅನುಸರಿಸಿಕೊಂಡು ಹೋಗುತ್ತೇವೆ. ಯಾವ ಮುಸ್ಲಿಮರೂ ಹಿಂದೂಗಳ ದೇವಸ್ಥಾನಕ್ಕೆ ಹೋಗುವುದಕ್ಕೆ ವಿರೋಧಿಸುವುದಿಲ್ಲ. ನಾವು ಮುಸ್ಲಿಮರನ್ನು ನಮ್ಮವರು ಅಂದುಕೊಳ್ಳುತ್ತೇವೆ. ಬಿಜೆಪಿಯವರು ಅವರನ್ನು ಬೇರೆಯವರು ಅಂದುಕೊಳ್ಳುತ್ತಾರೆ. ಇಷ್ಟೆ ಅವರಿಗೂ ನಮಗೂ ಇರುವ ವ್ಯತ್ಯಾಸ.

ಅಮಿತ್‌ ಶಾ, ಮೋದಿ ಬಂದರೆ, ರಾಜ್ಯದ ಚಿತ್ರಣ ಬದಲಾಗುತ್ತೆ ಅಂತಾರೆ ಹೌದಾ ?
ಅಮಿತ್‌ ಶಾ ಈಗಾಗಲೇ ರಾಜ್ಯಕ್ಕೆ ನಾಲ್ಕೈದು ಬಾರಿ ಬಂದು ಹೋಗಿದ್ದಾರೆ. ನನಗೇನು ವ್ಯತ್ಯಾಸ ಕಾಣಲಿಲ್ಲ. ಅವರ ಪಕ್ಷದ ಮುಖಂಡರುಗಳಿಗೆ ಸಾಕಷ್ಟು ತಂತ್ರಗಳನ್ನು ಹೇಳಿಕೊಟ್ಟು ಹೋಗಿ ದ್ದಾರೆ. ಅದರಿಂದ ಮೇಲ್ನೋಟಕ್ಕೆ ಯಾವುದೇ ಬದಲಾ ವಣೆ ಆದಂತೆ ನಮಗೆ ಕಾಣುತ್ತಿಲ್ಲ. ಮೋದಿ ಬಂದರೂ ಅಷ್ಟೆ ಯಾವುದೇ ಬದಲಾವಣೆ ಆಗುವುದಿಲ್ಲ. ಬೇರೆ ರಾಜ್ಯಗಳಲ್ಲಿ ನಡೆಸಿದ ಮೋದಿ, ಅಮಿತ್‌ ಶಾ ಆಟ ಇಲ್ಲಿ ನಡೆಯೋದಿಲ್ಲ. 

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬರುವುದಿಲ್ಲ ಎಂಬ ವಾತಾವರಣ ಇದೆ ಅನ್ಸುತ್ತಾ ?
ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಸ್ವಂತ ಬಲದ ಮೇಲೆಯೇ ಅಧಿಕಾ ರಕ್ಕೆ ಬರುತ್ತದೆ. ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ನಮ್ಮ ಸರ್ಕಾರ ಕೆಲಸಗಳು ಎದ್ದು ಕಾಣುತ್ತಿವೆ. ಯಾವುದೇ ಸಮೀಕ್ಷೆ ಏನೇ ವರದಿ ಕೊಡಬಹುದು. ನಮಗೆ ವಿಶ್ವಾಸ ಇದೆ. ಸಮ್ಮಿಶ್ರ ಸರ್ಕಾರವಂತೂ ಬರುವುದಿಲ್ಲ. 

ಕರ್ನಾಟಕದಲ್ಲಿ ಹಿಂದೂ ವಿರೋಧಿ ಸರ್ಕಾರ ಇದೆ ಎಂಬ ಆರೋಪ ಆಗಾಗ ಕೇಳಿ ಬರುತ್ತಿದೆಯಲ್ಲಾ ?
ಆ ರೀತಿ ಆರೋಪ ಮಾಡುತ್ತಿರೋರು ಬಿಜೆಪಿಯವರು ಮಾತ್ರ. ಅದು ಬಿಜೆಪಿಯ ಅಜೆಂಡಾ. ಮೊದಲಿನಿಂದಲೂ ಅವರು ಅದನ್ನೇ ಮಾಡುತ್ತಾ ಬಂದಿದ್ದಾರೆ. ಕಾಂಗ್ರೆಸ್‌ಗೆ ಒಂದು ಲೇಬಲ್‌ ಹಚ್ಚಬೇಕು ಅಂತ ಬಯಸುತ್ತಿದ್ದಾರೆ. ಆದರೆ, ರಾಜ್ಯದ ಜನತೆ ಅಷ್ಟೊಂದು ದಡ್ಡರಲ್ಲಾ. ಇಲ್ಲಿ ಸಾಕಷ್ಟು ಬುದ್ಧಿವಂತರಿದ್ದಾರೆ.

ರಾಜ್ಯಕ್ಕೆ ರಾಹುಲ್‌ಗಾಂಧಿ ಬಂದರೆ ಪಕ್ಷಕ್ಕೆ ಅನುಕೂಲ ಆಗುತ್ತಾ?
ರಾಹುಲ್‌ ಗಾಂಧಿ ಎಐಸಿಸಿ ಅಧ್ಯಕ್ಷರು. ಅವರು ರಾಜ್ಯಕ್ಕೆ ಬರು ತ್ತಾರೆ ಅಂದರೆ, ನಮ್ಮ ಕಾರ್ಯಕರ್ತರಿಗೆ ಉತ್ಸಾಹ ಬರುತ್ತದೆ. ಅದರಿಂದ ಪಕ್ಷಕ್ಕೆ ಅನುಕೂಲವಾಗುತ್ತದೆ. ಬಿಜೆಪಿಯರಿಗೆ ಅಮಿತ್‌ ಶಾ ಬಂದರೆ ಅನುಕೂಲವಾಗುತ್ತದೆ ಎಂದರೆ ನಮ್ಮ ನಾಯಕರು ಬಂದರೆ ನಮಗೂ ಅನುಕೂಲ ಆಗುತ್ತದೆ. ಹಿಂದೆ ಸೋನಿಯಾ ಗಾಂಧಿ ಬರುತ್ತಿದ್ದರು. ಈಗ ರಾಹುಲ್‌ ಗಾಂಧಿ ಅಧ್ಯಕ್ಷರಾಗಿದ್ದಾರೆ. ಅವರು ಬರುತ್ತಿದ್ದಾರೆ.

ನೀವು ಅಧ್ಯಕ್ಷರಾಗಿ ಅಸಹಾಯಕ ಸ್ಥಿತಿಯಲ್ಲಿ ಇದ್ದೇನೆ ಅನಿಸಿದೆಯಾ ?
ನನಗೆ  ಆ ರೀತಿಯ ಯಾವುದೇ ಭಾವನೆ ಬಂದಿಲ್ಲ. ನಾನು ಎಐಸಿಸಿ  ಕೆಳಗೆ ಕೆಲಸ ಮಾಡುತ್ತಿದ್ದೇನೆ. ನಾನು ಪಕ್ಷ ಸಂಘಟನೆ ಮಾಡುವಾಗ ನನಗೆಲ್ಲಿಯೂ ಹಿನ್ನಡೆಯಾಗಿಲ್ಲ. ಪಕ್ಷ ಚುನಾವಣೆ ಎದುರಿಸುವ ಸಂದರ್ಭದಲ್ಲಿ ವೀಕ್‌ ಆಗಿದೆ ಅಂತ ಹೇಳಲು ಸಾಧ್ಯವಿಲ್ಲ. ನಮ್ಮಲ್ಲಿ ಪಕ್ಷವೇ ದೊಡ್ಡದು. ಅದೇ ರೀತಿಯೇ ನಡೆದುಕೊಂಡು ಬಂದಿದೆ. ಸರ್ಕಾರದ ಸಣ್ಣಪುಟ್ಟ ವಿಷಯಗಳಿಗೆ ತಲೆ ಹಾಕುವುದಿಲ್ಲ. ಕೆಲವು ನೀತಿ ಮಾಡುವಾಗ ಪಕ್ಷದ ಅಭಿಪ್ರಾಯವೂ ಮುಖ್ಯವಾಗಿದೆ.

ಬೇರೆ  ಬೇರೆ ಪಕ್ಷಗಳಿಂದ ಕಾಂಗ್ರೆಸ್‌ ಸೇರ್ತಾರಂತೆ ?
ಬಹಳಷ್ಟು ಜನರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ, ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಪಕ್ಷ ತೀರ್ಮಾನ ಮಾಡಬೇಕು. ಬೇರೆ ಪಕ್ಷದಿಂದ ಬಂದಾಗ ನಮ್ಮ ಪಕ್ಷದ ಕೇಡರ್‌ ಮೇಲೆ ಪರಿಣಾಮ ಬೀರುತ್ತಾ ನೋಡುತ್ತೇವೆ. ಬರುವವರನ್ನೆಲ್ಲಾ ಸೇರಿಸಿಕೊಳ್ಳುವುದಿಲ್ಲ. ನಾವು ಸೆಲೆಕ್ಟಿವ್‌ ಆಗಿ ಸೇರಿಸಿಕೊಳ್ಳು ತ್ತೇವೆ. ಹೀಗಾಗಿಯೇ ವಿಳಂಬವಾಗುತ್ತಿದೆ. ನಾಯಕರುಗಳು ಒಪ್ಪಬಹುದು ಕಾರ್ಯಕರ್ತರು ಒಪ್ಪಬೇಕು.

ಮುಂದಿನ ಚುನಾವಣೆಯಲ್ಲಿ  ನೀವು ಎಲ್ಲಿಂದ ಸ್ಪರ್ಧೆ ಮಾಡ್ತೀರಿ?
ಕ್ಷೇತ್ರ ಬದಲಾವಣೆ ಬಗ್ಗೆ ಯಾವುದೇ ಗೊಂದಲ ಇಲ್ಲ. ಈ ಬಗ್ಗೆ ಹೈಕಮಾಂಡ್‌ಗೂ ತಿಳಿಸಿದ್ದೇನೆ. ಉತ್ತರ ಕರ್ನಾಟಕದ ರಾಯ ಭಾಗ, ಮೂಡಿಗೆರೆ, ಬೆಂಗಳೂರಿನ ಮಹದೇವ ಪುರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕೇಳಿಕೊಂಡರು. ಆದರೆ, ನಮಗೆ ಒಂದು ನಿಯಮ ಇರಬೇಕು. ನಾನು ಬೇರೆಲ್ಲೂ ಹೋಗುವುದಿಲ್ಲ

ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಟಿಕೆಟ್‌ ಎನ್ನುವ ಬಗ್ಗೆ ನಿಮ್ಮ ಅಭಿಪ್ರಾಯ ಏನು ?
ನಾನು ಒಂದು ಕುಟುಂಬಕ್ಕೆ ಒಬ್ಬರಿಗೇ ಕೊಡಿ ಅಂತ ಎಲ್ಲೂ ಹೇಳಿಲ್ಲ. ಈ ಬಗ್ಗೆ ಹೈ ಕಮಾಂಡ್‌ ತೀರ್ಮಾನ ಮಾಡುತ್ತದೆ. ಚುನಾವಣೆ ಸಂದರ್ಭದಲ್ಲಿ ಹೈಕಮಾಂಡ್‌ ಕೆಲವು ನಿಯಮ ಗಳನ್ನು ಮಾಡುತ್ತದೆ. ಮೂರು ಸಾರಿ ಸೋತವರಿಗೆ ಟಿಕೆಟ್‌ ನಿರಾಕರಣೆ, ಹೆಚ್ಚು ಅಂತರದಿಂದ ಸೋತವರಿಗೆ ಟಿಕೆಟ್‌ ನೀಡದಿರುವುದು. ಕ್ರಿಮಿನಲ್‌ ಹಿನ್ನೆಲೆ ಉಳ್ಳವರಿಗೆ ಟಿಕೆಟ್‌ ನೀಡಬಾರದು ಅನ್ನುವ ನಿಯಮ ಮಾಡುತ್ತಾರೆ. ನನ್ನ ವೈಯಕ್ತಿಕ ಅಭಿಪ್ರಾಯ ಕೇಳಿದರೆ, ಹೈ ಕಮಾಂಡ್‌ ಮುಂದೆ ಹೇಳುತ್ತೇನೆ. 

ಅಭ್ಯರ್ಥಿಗಳ ಆಯ್ಕೆ ಯಾವಾಗ ಆಗುತ್ತೆ ?
ನಮಗೇ ಈಗಾಗಲೇ 122 ಕ್ಷೇತ್ರಗಳಲ್ಲಿ ಹಾಲಿ ಶಾಸಕರಿದ್ದಾರೆ. ಹೀಗಾಗಿ ಅರ್ಧ ಸಮಸ್ಯೆ ಬಗೆ ಹರಿದಂತೆ. ಒಂದು ವೇಳೆ ಕೆಲವು ಶಾಸಕರಿಗೆ ಟಿಕೆಟ್‌ ನಿರಾಕರಣೆ ಮಾಡಿದರೆ ಮಾತ್ರ ಬೇರೆ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ಉಳಿದ 102 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳ ಆಯ್ಕೆ ಮಾಡಬಹುದು. ಒಂದು ವಾರದಲ್ಲಿ ವೀಕ್ಷಕರು ಕ್ಷೇತ್ರಗಳಿಗೆ ತೆರಳಿ ಅಭ್ಯರ್ಥಿಗಳ ಪಟ್ಟಿ ತರುತ್ತಾರೆ. ಮಾರ್ಚ್‌ ವೇಳೆಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಇವಿಎಂಗಳ ಬಗ್ಗೆ ಅಭಿಪ್ರಾಯ ಏನು ?
ಇವಿಎಂಗಳಲ್ಲಿ ದೋಷ ಇದೆ ಅಂತ ಅಮೇರಿಕನ್‌ ಯುನಿವ ರ್ಸಿಟಿ ಪತ್ತೆ ಹಚ್ಚಿ ಪ್ರಾತ್ಯಕ್ಷಿಕೆ ಮಾಡಿದೆ. ಉತ್ತರ ಪ್ರದೇಶದ ಸ್ಥಳೀಯ ಚುನಾವಣೆಯಲ್ಲಿ ಯಾವುದೇ ಬಟನ್‌ ಒತ್ತಿದರೂ ಬಿಜೆಪಿಗೆ ಮತ ಹೋಗಿದೆ. ಗುಜರಾತ್‌ ಚುನಾವಣೆ ನಂತರ ಚುನಾವಣಾಧಿಕಾರಿ ಕೆಲವು ದೋಷಗಳಿವೆ ಅಂತ ಹೇಳಿದ್ದಾರೆ. ಹಾಗಿದ್ದ  ಮೇಲೆ ಗೊಂದಲ ಇರುವಾಗ ಇವಿಎಂ ಯಾಕೆ ಬಳಸಬೇಕು. ಅಲ್ಲಿವರೆಗೂ ಬ್ಯಾಲೆಟ್‌ ಪೇಪರ್‌ ಬಳಕೆ ಮಾಡಿ. 

ನಿಮಗೆ ಇವಿಎಂ ಬಗ್ಗೆ ಭಯನಾ ?
ಖಂಡಿತವಾಗಿಯೂ, ಯಾಕೆಂದರೆ ಬಿಜೆಪಿಯವರು ಇವಿಎಂ ಮ್ಯಾನುಪಲೇಟ್‌ ಮಾಡುತ್ತಾರೆ. ಅದೇ ತಾನೆ ನಮಗೆ ಭಯ ಇರೋದು. ಅದಕ್ಕೆ ಬಿಜೆಪಿಯವರು 150 ಸೀಟ್‌ ಫಿಕ್ಸ್‌ ಅಂತಿ ದ್ದಾರೆ. ಶಾ ಗೆಲ್ಲುವುದನ್ನು ನನಗೆ ಬಿಡಿ ಅಂತ ಹೇಳಿದ್ದಾರೆ. ಅದರ ಹಿಂದಿರುವ ಉದ್ದೇಶ ಏನು. ನಾವು ಚುನಾವಣಾ ಆಯೋಗಕ್ಕೆ ಮತ ಪತ್ರ ಬಳಸುವಂತೆ ಮನವಿ ಸಲ್ಲಿಸುತ್ತೇವೆ.

ದೇವೇಗೌಡರೇಕೆ ಕಾಂಗ್ರೆಸ್‌ ಮೇಲೆ ಕೆಂಡ ಕಾರುತ್ತಿದ್ದಾರೆ ?
ದೇವೇಗೌಡರು ಮಾಜಿ ಪ್ರಧಾನಿಗಳು. ಅವರ ಬಗ್ಗೆ ಅಪಾರ ಗೌರವ ಇದೆ. ಅವರು ಯಾವ ಕಾರಣಕ್ಕೆ ಸರ್ಕಾರವನ್ನು ಬೈತಿದಾರೆ ಅಂತ ಗೊತ್ತಿಲ್ಲ. ಹಿಂದೆಯಲ್ಲಾ ಸರ್ಕಾರ ಹಾಗೂ ಮುಖ್ಯಮಂತ್ರಿಯನ್ನ ಹೊಗಳಿದ್ದಾರೆ. ಈಗ ಯಾವ ಆಧಾರದಲ್ಲಿ ಬೈಯುತ್ತಿದ್ದಾರೊ ಗೊತ್ತಿಲ್ಲ. ದೇವೇಗೌಡರನ್ನು ಪ್ಲೀಜ್‌ ಮಾಡುವ ಅಗತ್ಯ ನಮಗಿಲ್ಲ. 

ತಲಾಖ್‌ ಬಗ್ಗೆ ಕಾಂಗ್ರೆಸ್‌ ನಿಲುವು  ಏನು ?
ನಮ್ಮಲ್ಲಿ ಇನ್ನೂ ಚರ್ಚೆ ನಡೆಯುತ್ತಿದೆ. ಅಂತಿಮವಾಗಿ ಎಐಸಿಸಿ ತೀರ್ಮಾನ ಮಾಡುತ್ತದೆ.  

ಪ್ರತ್ಯೇಕ ಧರ್ಮದ ವಿಚಾರದಲ್ಲಿ ಪಕ್ಷದ ನಿಲುವೇನು?
ಕಾಂಗ್ರೆಸ್‌ ಪಕ್ಷಕ್ಕೂ ಲಿಂಗಾಯತ ಹೋರಾಟಕ್ಕೂ ಸಂಬಂಧ ಇಲ್ಲ. ರಾಜಕೀಯ ಪಕ್ಷಗಳು ಧರ್ಮವನ್ನು ನಿರ್ಧಾರ ಮಾಡುವುದಿಲ್ಲ. ಸಚಿವರುಗಳು ಆ ಸಮುದಾಯಕ್ಕೆ ಸೇರಿರುವುದರಿಂದ ಧರ್ಮ ಹೋರಾಟಕ್ಕೆ ಹೋಗಿದ್ದಾರೆ. ಸಮಾಜ ಒಡೆಯುವ ಕೆಲಸವನ್ನು ಕಾಂಗ್ರೆಸ್‌ಮಾಡುತ್ತಿಲ್ಲ. 

ಸಂದರ್ಶನ: ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next