Advertisement

ಉಪನ್ಯಾಸಕಿಯಲ್ಲ , ಕೃಷಿಕ ಮಹಿಳೆ ಎನ್ನಲು ಅಭಿಮಾನ ನನಗೆ!

10:20 AM Feb 29, 2020 | mahesh |

ನಾನೊಬ್ಬಳು ಗೃಹಿಣಿ ಮತ್ತು ಕೃಷಿಕ ಮಹಿಳೆ. ನನ್ನ ಹೆಚ್ಚಿನ ಸಮಯ ಮನೆ, ತೋಟ, ಹಟ್ಟಿ – ಇವಿಷ್ಟೇ ವರ್ತುಲದೊಳಗೆ ಸುತ್ತು ಬಂದು ಕಳೆದು ಹೋಗುತ್ತದೆ. ಅಪರೂಪಕ್ಕೆ ಸುತ್ತಮುತ್ತಲಿನ ಒಂದಷ್ಟು ಮದುವೆ, ನಾಮಕರಣ ಬಿಟ್ಟರೆ ನನ್ನಂತಹ ಅನೇಕ ಕೃಷಿಕ ಮಹಿಳೆಯರಿಗೆ ಹೊರಗೆ ಹೋಗುವಂತಹ ಅವಕಾಶಗಳು ತೀರಾ ಕಡಿಮೆ ಅಥವಾ ನಮ್ಮನ್ನು ನಾವೇ ಈ ಕಟ್ಟುಪಾಡಿನೊಳಗೆ ಬಂಧಿಸಿಕೊಳ್ಳುತ್ತೇವೆಯೋ ಏನೋ. ಕಾರಣ ಇಷ್ಟೆ, ಆರಕ್ಕೇರದ ಮೂರಕ್ಕಿಳಿಯದ ಕೃಷಿ ಬದುಕಿನ ನಡುವಿನ ಉಯ್ನಾಲೆಯಲ್ಲಿ ಸಮಸ್ಥಿತಿಯನ್ನು ಕಾಯ್ದುಕೊಳ್ಳುವ ಅನಿವಾರ್ಯತೆ ನಮಗೆ. ಹಾಗಾಗಿ, ಬೆಳಗ್ಗಿನ ಹಟ್ಟಿ ಕೆಲಸ, ಮನೆಕೆಲಸ ಮುಗಿಸಿ ಲಗುಬಗೆಯಲ್ಲಿ ಹೊರಟು ಹೋದರೆ ಸಂಜೆ ನಿರ್ದಿಷ್ಟ ಸಮಯಕ್ಕೆ ಮನೆ ತಲುಪಲೇ ಬೇಕು. ಕಟ್ಟಿ ಹಾಕಿದ ದನ, ಕರು, ನಾಯಿಗಳಿಗೆ ನಾವು ಬಂದು ಹಾಕಿದರಷ್ಟೇ ಊಟ. ಇಂತಹ ಸಂದರ್ಭದಲ್ಲಿ ಮಹಿಳೆಯರು ಹೊರ ಪ್ರಪಂಚಕ್ಕೆ ತೆರೆದುಕೊಳ್ಳುವ ಅವಕಾಶ ಸಿಗುವುದಿಲ್ಲ.

Advertisement

ನನ್ನೂರಿನ ಹೆಚ್ಚಿನ ಮಹಿಳೆಯರಂತೆ ಮನೆಯಲ್ಲೇ ಇರುವ ನಾನು ಕೆಲವೊಮ್ಮೆ ದೂರದೂರಿಗೆ ಪ್ರಯಾಣ ಬೆಳೆಸಿ ಬಂದಾಗ ಅಕ್ಕಪಕ್ಕದವರು ವಿಚಾರಿಸುವುದಿದೆ. “ಹೇಗೆ ಹೋದೆ ಅಲ್ಲಿಗೆ ನೀನು? ಎಷ್ಟು ಖರ್ಚಾಯಿತು ನಿನಗೆ?’ ಅಂತ. ನಾನೋ, “ನಯಾಪೈಸೆ ಖರ್ಚಿಲ್ಲದೆ ಅಲ್ಲಿಗೆ ಹೋಗಿ ಬಂದೆ, ಅಕ್ಕಪಕ್ಕದ ಒಂದಷ್ಟು ಸ್ಥಳ ಕೂಡ ಸುತ್ತಾಡಿಬಂದೆ, ಹಿರಿಯ ಬರಹಗಾರರನ್ನು ಭೇಟಿ ಆದೆ’ ಅಂದಾಗ ನಿಜಕ್ಕೂ ಅವರು ಸುಸ್ತಾಗಿಬಿಡುತ್ತಾರೆ.

ಅಕ್ಷರದ ಅಕ್ಕರೆ ಎಷ್ಟೊಂದು ಅಚ್ಚರಿಗಳನ್ನ, ಸಂತಸವನ್ನ ನನ್ನ ಮುಂದೆ ತಂದಿಡುತ್ತದೆಯಲ್ಲ ? ಸಾಹಿತ್ಯದ ಪ್ರೀತಿಯೊಂದು ಹಳ್ಳಿ ಮೂಲೆಯಲ್ಲಿದ್ದ ನನ್ನನ್ನು ಲೋಕಪರ್ಯಟನೆಗೆ ಕರೆದೊಯ್ಯುತ್ತದೆಯಲ್ಲ? ಅಂತ.

ಕೃಷಿಕ ಮಹಿಳೆಯರ ಕೆಲಸದ ರಗಳೆಗಳು ಮುಗಿಯುವುದೇ ಇಲ್ಲ. ಆ ಕೆಲಸ ಆಗಿಲ್ಲ, ಈ ಕೆಲಸ ಆಗಿಲ್ಲ, ಹಟ್ಟಿಗೆ ಸೊಪ್ಪು ಹಾಕಬೇಕು, ಗೊಬ್ಬರ ಗುಂಡಿಯಿಂದ ಗೊಬ್ಬರ ಹೊರಬೇಕು, ಅಡಿಕೆ ತೆಗೆದು ಆಗಲಿಲ್ಲ- ಹೀಗೆ ನೂರೆಂಟು ತಾಪತ್ರಯಗಳು ತೊಡರಿಕೊಂಡೇ ಇರುತ್ತವೆ. ಇಂತಹ ಸಮಸ್ಯೆಗಳು ಎಲ್ಲರಿಗೂ ಇದ್ದದ್ದೇ. ಇದೇ ಚಿಂತೆಯಲ್ಲಿ ನಮಗೆ ಯಾವ ಹೊಸ ಆಲೋಚನೆಗಳು ಕೂಡ ಹುಟ್ಟದೆ ನಮ್ಮ ಕ್ರಿಯಾಶೀಲತೆಯನ್ನು ಕುಂಠಿತಗೊಳಿಸಿಬಿಡುತ್ತದೆ. ಹಾಗಾಗಿ ತೋಟ, ಅಡುಗೆ ಜವಾಬ್ದಾರಿಯನ್ನು ಹೊರತುಪಡಿಸಿ ಹೊರಗಿನ ಆಗುಹೋಗುಗಳಿಗೆ ಸ್ಪಂದಿಸಲು ಸಾಧ್ಯವಾಗುವುದೇ ಇಲ್ಲ. ಹೆಚ್ಚಿನ ಕೃಷಿಕ ಮಹಿಳೆ ಗೆಳತಿಯರಿಗೆ ಓದಲು ಬರೆಯಲು ನಾನು ಪ್ರೇರೇಪಿಸುತ್ತೇನೆ. ಈಗ ಕೃಷಿಕ ಮಹಿಳೆಯರು ಕಡಿಮೆ ಓದಿದವರಲ್ಲ. ಹೆಚ್ಚಿನವರೆಲ್ಲಾ ಪದವೀಧರರೇ. ನಾನು “ಬರೆಯಿರಿ’ ಅಂತ ಜಿದ್ದಿಗೆ ಬಿದ್ದರೆ “ಅವೆಲ್ಲಾ ನಮಗೆ ಸಿದ್ಧಿಸುವುದಿಲ್ಲ’ ಅಂತ ನುಣುಚಿಕೊಳ್ಳಲು ಯತ್ನಿಸುತ್ತಾರೆ ಅಥವಾ “ಏನು ಬರೆಯೋದು ಅಂತ ಗೊತ್ತೇ ಆಗುವುದಿಲ್ಲ’ ಅನ್ನುತ್ತಾರೆ. ನಾನೋ ಪಟ್ಟು ಬಿಡದೆ “ಅಡುಗೆ ಲೇಖನವಾದರೂ ಬರೆಯಿರಿ’ ಅಂತ ಹೇಳಿ ಪತ್ರಿಕೆ ವಿಳಾಸ ಕೊಟ್ಟು, ಹೀಗೆ ಸಣ್ಣಪುಟ್ಟ ಬರಹ ಬರೆಯಲು ಹೇಳಿ ಈಗ ಅವರಿಗೂ ಆಸಕ್ತಿ ಹುಟ್ಟಿ ನಮ್ಮ ಪ್ರಪಂಚವೇ ಈಗ ಬೇರೆ ಆಗಿದೆ. “ತುಂಬಾ ಓದಬೇಕು, ಏನೆಲ್ಲಾ ಬರೀಬೇಕು ಅನ್ನಿಸುತ್ತದೆ’ ಅಂತ ಖುಷಿಯಿಂದ ಹೇಳುತ್ತಾರೆ. ಒಮ್ಮೆ ನಾವು ಅಕ್ಷರದ ಮೋಹಕ್ಕೆ ಬಿದ್ದೆವೆಂದರೆ ಅದರಿಂದ ಹೊರಬರುವುದು ಕಷ್ಟ.

ಯಾವುದೋ ಒಂದು ಗಳಿಗೆಯಲ್ಲಿ ನನ್ನ ಏಕಾಂತವನ್ನು ಮೀರಲಿಕ್ಕೆ ನಾನು ಕಲಿತದ್ದೇ ಸಾಹಿತ್ಯದಿಂದ. ನಮ್ಮನ್ನು ನಾವು ನಿರಾಳಗೊಳಿಸೋದಕ್ಕೆ ಗೀಚಿದ ನಾಲ್ಕು ಸಾಲುಗಳು ಪತ್ರಿಕೆಯಲ್ಲಿ ಪ್ರಕಟವಾಗಿ ಜನರು ನಮ್ಮನ್ನು ವಿಶೇಷವಾಗಿ ಗೌರಾವಾದರಗಳಿಂದ ನೋಡುವಾಗ “ಬರವಣಿಗೆಗೆ ಇಷ್ಟೊಂದು ಶಕ್ತಿಯಿದೆಯಲ್ಲ’ ಅಂತ ಅಚ್ಚರಿಯಾಗುತ್ತದೆ. ತದನಂತರ ಊರಿನಲ್ಲಾಗುವ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ವೇದಿಕೆಯಲ್ಲಿ ನಮಗೂ ಸ್ಥಾನ ಕೊಡುವಾಗ ಮುಜುಗರ ಆಗುತ್ತದೆ. ಹೀಗೆ ಕಾರ್ಯ ಕ್ರಮಗಳಿಗೆ ನಮ್ಮನ್ನು ಆಹ್ವಾನಿಸುವಾಗ, “ನಾನು ಬರುವುದಿಲ್ಲ, ಬರಹಗಾರರು ಬರೆಯಬೇಕೆ ಹೊರತು ವೇದಿಕೆ ಹತ್ತಬಾರದು’ ಅಂತ ಎಷ್ಟೇ ಸಮಜಾಯಿಷಿ ಕೊಟ್ಟರೂ ಎಳೆದುತಂದು ವೇದಿಕೆಯಲ್ಲಿ ಕೂರಿಸುತ್ತಾರೆ. ಸಾಹಿತ್ಯದ ಸಾಹಚರ್ಯ ಒದಗಿಸಿ ಕೊಡುವ ದೊಡ್ಡ ಹೊಣೆ ಇದು. ಒತ್ತಾಯಪೂರ್ವಕವಾಗಿ ಹೊರಗೆ ಹೋಗಲೇಬೇಕಾದ ಸಂದರ್ಭವನ್ನು ಅದು ಒದಗಿಸಿಕೊಡುತ್ತದೆ. ಕೆಲಸದ ನೆಪ ಒಡ್ಡಿದರೂ ಹಟ್ಟಿ ಕೆಲಸ, ತೋಟದ ಕೆಲಸ ಯಾರೂ ಮಾಡಬಹುದು, ಆದರೆ ಈ ಕೆಲಸ ಎಲ್ಲರೂ ಮಾಡಲು ಸಾಧ್ಯವಿಲ್ಲ ಅಂತ ಆತ್ಮವಿಶ್ವಾಸವನ್ನು ನಮ್ಮಲ್ಲಿ ತುಂಬಿ ಹೊಸ ಹೊಸ ಅವಕಾಶಗಳನ್ನು ಕಲ್ಪಿಸಿಕೊಡುತ್ತಾರೆ. ಈ ಕ್ಷಣಗಳೇ ನಮ್ಮೊಳಗೊಂದು ವಿನಯವಂತಿಕೆಯನ್ನು ಮತ್ತು ಗುರುತರವಾದ ಜವಾಬ್ದಾರಿಯನ್ನು ಹೆಚ್ಚಿಸುವಂತೆ ಮಾಡುತ್ತದೆ. ನಾನು, ನನ್ನೂರು, ಅಲ್ಲಿಯ ಸುತ್ತಮುತ್ತ, ಹೆಚ್ಚೆಂದರೆ ನನ್ನ ಜಿಲ್ಲೆಯನ್ನು ಬಿಟ್ಟು ನಾನು ಹೊರಗೆ ಹೋದವಳಲ್ಲ. ಅಂತಹುದರಲ್ಲಿ ಇವತ್ತು ರಾಜ್ಯದಿಂದ ಹೊರರಾಜ್ಯದವರೆಗೂ ಒಂದು ಕವಿತೆಯ ನೆಪ ಇಟ್ಟುಕೊಂಡು ಹೋಗುತ್ತೇನೆ ಅಂದರೆ ನನ್ನನ್ನು ನಾನೇ ಕೆಲವೊಮ್ಮೆ ಚಿವುಟಿಕೊಳ್ಳುವಂತಾಗುತ್ತದೆ. ನನ್ನೂರಿನ ಪಯಸ್ವಿನಿಯ ಬದಿಯಲ್ಲಷ್ಟೇ ಓಡಾಡಿಕೊಂಡಿದ್ದವಳನ್ನು ಅರಬ್ಬೀ ಕಡಲು, ಜೂಹು ಬೀಚಿನವರೆಗೂ ಕವಿತೆ ಕರೆದುಕೊಂಡು ಹೋಗಿದೆ. ಅದೆಷ್ಟೋ ಸಹೃದಯರು, ಸಾಧಕರು ಪರಿಚಯ ಆಗುತ್ತಾರೆ. ಒಬ್ಬ ಸಾಮಾನ್ಯ ಕೃಷಿಕ ಮಹಿಳೆಯಾಗಿಯೇ ಇರುತ್ತಿದ್ದರೆ ಇಂತಹದೊಂದು ಪ್ರಪಂಚವಾದರೂ ಇರಬಹುದು ಅಂತ

Advertisement

ನನಗೆ ಅನ್ನಿಸಿರಬಹುದೇ? “ನೀನು ಹೇಳಿದಂತೆ ಬರೆಯಲು ಶುರು ಮಾಡಿದ್ದರೆ ನಾನೂ ನಿನ್ನಂತೆ ಗುರುತಿಸಿಕೊಳ್ಳಬಹುದಿತ್ತು’ ಅಂತ ಗೆಳತಿಯೊಬ್ಬಳು ಆಗಾಗ್ಗೆ ಹೇಳುತ್ತಿರುತ್ತಾಳೆ. ಪಟಗಳಲ್ಲಷ್ಟೇ ನೋಡಿ ತೃಪ್ತಿಪಟ್ಟು ಕೊಳ್ಳಬಹುದಾಗಿದ್ದ ಹಿರಿಯ ಕವಿಗಳನ್ನು, ಸಾಹಿತಿಗಳನ್ನು ಭೇಟಿ ಯಾಗುವ ಧನ್ಯತೆಯ ಕ್ಷಣಗಳನ್ನು ಕವಿತೆ ಒದಗಿಸಿ ಕೊಟ್ಟಿದೆ. ಬರಹ ಕಟ್ಟಿಕೊಡುವ ಸುಖ ಎಷ್ಟು ಚೆಂದ ಅಲ್ಲವಾ? ದಿನದ ಎಲ್ಲ ಒತ್ತಡದ ಕೆಲಸಗಳ ನಡುವೆಯೂ ಕವಿತೆಯನ್ನು ಬಗಲಿನಲ್ಲಿ ಕಟ್ಟಿಕೊಂಡೇ ಓಡಾಡುವಾಗ ಎಷ್ಟೊಂದು ಹಗುರತನದ ಭಾವ. ಕವಿತೆಯ ಧ್ಯಾನಕ್ಕೆ ಬಿದ್ದರೆ ಉಳಿದ ಯಾವ ಸಂಗತಿಗಳೂ ದೊಡ್ಡದು ಅಂತ ಅನ್ನಿಸುವುದೇ ಇಲ್ಲ.

ಮೊನ್ನೆ ಹೀಗೆ ಒಂದು ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಏನೋ ಎರಡು ಮಾತಾಡಿದ್ದೆ. ಕೇಳಿಸಿಕೊಂಡ ಮಹನೀಯರೊಬ್ಬರು, “ನೀವು ಉಪನ್ಯಾಸಕಿಯಾ? ಎಂದು ಕೇಳಿದರು. “ಇಲ್ಲ ಕೃಷಿಕ ಮಹಿಳೆ’ ಅಂದೆ. “ಮತ್ತೆ ಹೇಗೆ ವೇದಿಕೆಯಲ್ಲಿ ಮಾತಾಡಿದ್ರಿ’ ಅಂತ ತುಸು ಅನುಮಾನದಿಂದಲೂ, ತುಸು ಆಶ್ಚರ್ಯದಿಂದಲೂ ಕೇಳಿದರು. “ನನಗೂ ಗೊತ್ತಿಲ್ಲ’ ಅಂತ ನಕ್ಕೆ. “ನಮ್ಮೂರಿಗೂ ಬನ್ನಿ ಕಾರ್ಯಕ್ರಮಕ್ಕೆ ಕರೆಸುತ್ತೇವೆ’ ಅಂದರು. ಗಾಬರಿಯಾಗಿ, “ದಮ್ಮಯ್ಯ! ಹಟ್ಟಿಯಲ್ಲಿ ದನಗಳಿವೆ’ ಅಂದೆ. ಅಕ್ಷರದ ಪ್ರೀತಿಯೊಂದು ಊರಿಂದ ಊರಿಗೆ ಕೈ ಹಿಡಿದು ಕರೆದು ಕೊಂಡು ಹೋಗುತ್ತಿದೆಯಲ್ಲ? ಎಷ್ಟೊಂದು ನಿಷ್ಕಪಟ ಸ್ನೇಹಗಳು ಲಭಿಸಿವೆಯಲ್ಲ? ಎಂದು ಮೂಕಳಾಗುತ್ತೇನೆ.

ಸ್ಮಿತಾ ಅಮೃತರಾಜ್‌

Advertisement

Udayavani is now on Telegram. Click here to join our channel and stay updated with the latest news.

Next