ಕನ್ನಡದಲ್ಲಿ ಬಹುತೇಕ ಹೀರೋಗಳು ತಮ್ಮದೇ ರೀತಿಯಲ್ಲಿ ಬಡವರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಲೇ ಇದ್ದಾರೆ. ಬಹುಶಃ ಇಷ್ಟು ದೊಡ್ಡ ಮಟ್ಟದಲ್ಲಿ ಯಾರೂ ಕೈಹಾಕಿರಲಿಲ್ಲ. ಅಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ ಯಶ್. ಕಳೆದ ವರ್ಷ ಯಶ್ ಸಹ ಯಶೋಮಾರ್ಗ ಫೌಂಡೇಶನ್ ಎಂಬ ಸಂಸ್ಥೆ ಹುಟ್ಟುಹಾಕಿ, ಅದರ ಮೂಲಕ ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳಲ್ಲಿ ಕುಡಿಯುವ ನೀರು ಕೊಡುವ ಕೆಲಸ ಮಾಡಿದರು. ಈ ವರ್ಷ ಒಂದ ಹೆಜ್ಜೆ ಮುಂದಕ್ಕೆ ಹೋಗಿ ಅವರು ಕುಷ್ಟಗಿಯ ಬಳಿಯ ತಳ್ಳೂರಿನಲ್ಲಿ ಒಂದು ಕೆರೆಯ ಹೂಳು ತೆಗೆಸುತ್ತಿದ್ದಾರೆ. ಈಗಾಗಲೇ ಈ ಕೆಲಸ ಶುರುವಾಗಿರುವುದಷ್ಟೇ ಅಲ್ಲ, ಈಗಾಗಲೇ ಎಂಟು ಅಡಿ ಹೂಳೆತ್ತಲಾಗಿದೆ. ಅಲ್ಲಿಗೆ ಯಶ್ ಕೈಗೊಂಡಿರುವ ಕೆಲಸಕ್ಕೆ ಸ್ವಲ್ಪವಾದರೂ ಫಲ ಸಿಕ್ಕಿದಂತಾಗುತ್ತಿದೆ.
“ಕಳೆದ ವರ್ಷ ಮಳೆ ಬಂದಾಗ, ನೀರಿನ ಸಮಸ್ಯೆ ಬಗೆಯರಿಯಬಹುದು ಎಂದುಕೊಂಡಿದ್ದೆ. ಆದರೆ, ಹಾಗಾಗಲಿಲ್ಲ. ಈಗಲೂ ಮಳೆ ಬಂದರೆ ಕೆರೆ ತುಂಬುತ್ತದೆ ಅಂತ ಹೇಳಲ್ಲ. ಮಳೆ ಬರುವಾಗ, ಕೆರೆ ತಯಾರಾಗಿದ್ದರೆ ಅನುಕೂಲವಾಗುತ್ತದೆ ಅಷ್ಟೇ. ಈಗಾಗಲೇ ಸುಮಾರು ಎಂಟು ಅಡಿ ಹೂಳೆತ್ತಿದ್ದಾರೆ. ಸೆಲೆ ಬಂದಿದೆ. ಕೊನೆಯ ಪಕ್ಷ ಪ್ರಾಣಿಗಳಿಗಾದರೂ ನೀರು ಕುಡಿಯುವಂತಹ ಪರಿಸ್ಥಿತಿ ಬಂದಿದೆ. ಇದೊಂದು ಪಾಸಿಟಿವ್ ಸೈನ್ ಅಷ್ಟೇ. ಹಾಗಂತ ತುಂಬಾ ಖುಷಿಪಡುವಂತದ್ದೇನೂ ಇಲ್ಲ. ಒಂದು ಸಮಾಧಾನ ಎಂದರೆ, ಜರಿಗೆ ಇದರ ಮಹತ್ವ ಅರ್ಥವಾಗೋಕೆ ಶುರುವಾಗಿದೆ. ಕೆರೆ ಕೆಲಸ ಮಾಡೋಕೆ ದುಡ್ಡಿರಲೇಬೇಕು ಅಂತಿಲ್ಲ. ಹಿಂದಿನ ಕಾಲದಲ್ಲಿ ಮನೆಗೊಬ್ಬರು ಅಂತ ಬಂದು ಕೆರೆ ಕೆಲಸ ಮಾಡೋರು. ಈಗಲೂ ಅಷ್ಟೇ. ಜನ ಅವರವರೇ ಮುಂದೆ ಬಂದು ಇಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಬರೀ ಯಶೋಮಾರ್ಗ ಮಾಡಲಿ ಅಥವಾ ಸರ್ಕಾರ ಮಾಡಲಿ ಅಂತ ಸುಮ್ಮನಿದ್ದರೆ ಆಗಲ್ಲ’ ಎನ್ನತ್ತಾರೆ ಯಶ್.
ಯಶೋಮಾರ್ಗದಿಂದ ಮುಂದೆ ಇನ್ನೂ ಹಲವು ಯೋಜನೆಗಳನ್ನು ಅವರು ರೂಪಿಸಿದ್ದಾರೆ. ಆದರೆ ಇದನ್ನು ಮಾಡಿ ಮುಂದುವರೆಯೋಣ ಅಂತ ಸುಮ್ಮನಿದ್ದೀನಿ ಎನ್ನುತ್ತಾರೆ ಯಶ್. “ಈಗಲೇ ಎಲ್ಲವನ್ನ ಹೇಳಿಬಿಡೋದು ಸರಿಯಲ್ಲ. ನನಗೆ ಈಗಾಗಲೇ ತುಂಬಾ ಮಾತಾಡುತ್ತಿದ್ದೀನಿ ಅಂತ ಅನಿಸೋಕೆ ಶುರುವಾಗಿದೆ. ಹಾಗಾಗಿ ಇದು ಮುಗೀಲಿ ಅಂತ ಸುಮ್ಮನೆ ಇದ್ದೀನಿ. ನನಗೆ ಸುಮ್ಮನೆ ನುಗ್ಗೊàಕೆ ಇಷ್ಟ ಇಲ್ಲ. ಮಾಡಿದರೆ ಸರಿಯಾಗಿರಬೇಕು. ಸದ್ಯಕ್ಕೆ ಇದು ಪೈಲಟ್ ಪ್ರಾಜೆಕ್ಟ್ ತರಹ ಅಷ್ಟೇ. ಇದು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಜನರ ಸಹಾಯ ಪಡೆದು ಇನ್ನಷ್ಟು ಕೆಲಸ ಮಾಡಬೇಕೆಂಬ ಉದ್ದೇಶವಿದೆ. ನಾನೊಬ್ಬನೇ ಎಲ್ಲಾ ಕಡೆ ನುಗ್ಗುವುದು ಕಷ್ಟ. ನನ್ನ ಕೈಲಿ ಎಷ್ಟು ಆಗುತ್ತದೋ ಅಷ್ಟು ಮಾಡಬಹುದು. ನನ್ನ ಹತ್ತಿರ ಕೋಟ್ಯಂತರ ರೂಪಾಯಿ ಕೊಳೆಯುತ್ತಿಲ್ಲ. ಸಾಮಾನ್ಯ ಫ್ಯಾಮಿಲಿಯಿಂದ ಬಂದವನು ನಾನು. ನನಗೆ ಎಷ್ಟು ಆಗುತ್ತೋ ಅಷ್ಟೇ ಮಾಡಬೇಕು. ನಮ್ಮಲ್ಲಿ ಒಂದು ಸಮಸ್ಯೆ ಅಂದರೆ, ಎಷ್ಟೋ ಸ್ಕೀಮ್‌ಗಳಿವೆ. ಆದರೆ, ಯಾವುದೂ ಸರಿಯಾಗಿ ಮುಗಿಯುವುದಿಲ್ಲ. ಇನ್ನು ಜನರೂ ಅಷ್ಟೇ. ಎಲ್ಲಿಯವರೆಗೂ ದುಡ್ಡು ಪಡೆದು ವೋಟ್ ಹಾಕುತ್ತಾರೋ, ಎಲ್ಲಿಯವರೆಗೂ ಜಾತಿ ರಾಜಕಾರಣ ಮಾಡುತ್ತಾರೋ, ಅಲ್ಲಿಯವರೆಗೂ ಪರಿಸ್ಥಿತಿ ಸರಿ ಹೋಗುವುದಿಲ್ಲ. ಹೀಗೆಲ್ಲಾ ಆದರೆ, ಎಲ್ಲರೂ ಡಿವೈಡ್ ಆಗಿರ್ತಾರೆ. ಒಂದ ಹಳ್ಳಿàಲಿ ನಾಲ್ಕು ಪಂಗಡ ಆಗತ್ತೆ. ಒಳರಾಜಕೀಯ ಇರುತ್ತದೆ. ಇಷ್ಟೆಲ್ಲಾ ಸಮಸ್ಯೆಗೆ ನಾವೇ ಕಾರಣ. ಸರ್ಕಾರ ಮಾಡಲಿ ಅಂತ, ನಮ್ಮ ಕೆಲಸ ನಾವು ಬಿಡುವುದು ಸರಿಯಲ್ಲ. ರಾಜಕಾರಣಿಗಳನ್ನ ದೂರೋದಲ್ಲ. ನಾವು ಸರಿ ಹೋಗಬೇಕು. ನಾನು ಯಾವ ಸರ್ಕಾರವನ್ನೂ ದೂರಲ್ಲ. ಅಧಿಕಾರಿಗಳನ್ನೂ ಬ್ಲೇಮ್ ಮಾಡಲ್ಲ. ನಾವೇನು ಮಾಡಬಹುದು ಅದನ್ನು ಮಾಡ್ತೀನಿ’ ಎನ್ನುತ್ತಾರೆ ಯಶ್.
ಇನ್ನು ಈ ತರಹದ ಕೆಲಸಗಳ ಸೋಲು-ಗೆಲವುಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲವಂತೆ ಯಶ್. “ನಾನು ಸೋಲು, ಗೆಲುವು ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈ ತರಹದ್ದೊಂದು ಕೆಲಸ ಮಾಡುತ್ತಿದ್ದೀನಿ ಅಂತ ಖುಷಿ ಇದೆ. ಈ ಕೆಲಸಕ್ಕೆ ಕ್ರೆಡಿಟ್ ತಗೆದುಕೊಳ್ಳುವುದಕ್ಕೂ ಇಷ್ಟವಿಲ್ಲ. ಇದೊಂದು ಸಾಧನೇನೂ ಅಲ್ಲ. ಇದೊಂದು ಹೆಜ್ಜೆ ಅಷ್ಟೇ. ಇದರಿಂದ ಒಂದಿಷ್ಟು ಜನರಿಗೆ ಬದುಕು ಸಿಕ್ಕರೆ ಅಷ್ಟೇ ಸಾಕು. ನಾನು ಸಂಪೂರ್ಣವಾಗಿ ಇದರ ಬಗ್ಗೆಯೇ ತಲೆ ಕೆಡಿಸಿಕೊಳ್ಳೋಕೆ ಆಗಲ್ಲ. ಹಾಗೆ ಮಾಡೋಕೆ ಹೋದರೆ, ನನ್ನ ಪೂರ್ತಿ ಲೈಫ್ನ ಡೆಡಿಕೇಟ್ ಮಾಡಬೇಕಾಗತ್ತೆ. ನನಗೆ ನನ್ನದೇ ಲೈಫ್ ಇದೆ, ಸಿನಿಮಾಗಳಿವೆ. ಇದು ಒಂದು ಭಾಗವೇ ಹೊರತು, ಇದೇ ನನ್ನ ಜೀವನ ಅಲ್ಲ. ಒಬ್ಬ ಸಾಮಾನ್ಯ ಮನುಷ್ಯನಾಗಿ ನಾನು ಜವಾಬ್ದಾರಿ ತೆಗೆದುಕೊಂಡೆ ಅಷ್ಟೇ. ಒಬ್ಬ ನಟನಾಗಿ ನನ್ನ ಜವಾಬ್ದಾರಿ ಕೂಡಾ. ಸಾವಿರಾರು ಹಳ್ಳಿಗಳು ನೀರಿಲ್ಲದೆ ಒದ್ದಾಡುತ್ತಿವೆ. ಸರ್ಕಾರ ಒಂದು ಕಡೆ ಪ್ರಯತ್ನ ಮಾಡ್ತಿದೆ. ಇನ್ನೊಂದು ಕಡೆ ಜನ ಸಹ ಮಾಡಬೇಕು. ಪ್ರತಿಯೂರಲ್ಲೂ ಸ್ಥಿತಿವಂತರು ಇರುತ್ತಾರೆ. ಅವರೆಲ್ಲಾ ಸ್ವಲ್ಪ ಜನರಿಗೂ ಕೊಡಬೇಕು. ಒಂದು ಹಳ್ಳಿಗೆ ನೀರು ಕೊಡೋದು ಕಷ್ಟವಾಗುವುದಿಲ್ಲ.ಸಮಸ್ಯೆ ಬರೀ ಉತ್ತರ ಕರ್ನಾಟಕದಲ್ಲಷ್ಟೇ ಅಲ್ಲ, ಕೋಲಾರ, ಮಂಡ್ಯದಲ್ಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಐದಾರು ವರ್ಷ ಆದರೆ, ಕಾವೇರಿ ನೀರು ಬೆಂಗಳೂರಿಗೆ ಸಿಗೋದು ಕಷ್ಟ. ಈಗಿಂದಲೇ ಇವೆಲ್ಲಕ್ಕೂ ಪರಿಹಾರ ಹುಡುಕಬೇಕು. ಈಗ ಸದ್ಯಕ್ಕೆ ರಾಜ್ಯ ರಾಜ್ಯ ಮಧ್ಯೆ ಜಗಳ ನಡೀತಿದೆ. ನಾಳೆ ನೀರಿನ ವಿಷಯವಾಗಿ ಹಳ್ಳಿಹಳ್ಳಿಗಳ ಮಧ್ಯೆ ಜಗಳ ನಡೆದರೆ ಆಶ್ಚರ್ಯವಿಲ್ಲ. ಇದು ಒಂಥರಾ ಸರ್ವೈವಲ್ ಪ್ರಶ್ನೆ. ಮೊದಲು ಎಚ್ಚೆತ್ತುಕೊಂಡು, ಜಾಗೃತಿ ಮೂಡಿಸೋದು ಮುಖ್ಯ. ಖುಷಿಯೇನೆಂದರೆ, ಈಗ ಜನ ಮಾತಾಡುವ ಹಂತಕ್ಕೆ ಬಂದಿದ್ದಾರೆ’ ಎನ್ನುತ್ತಾರೆ ಅವರು.
ಇನ್ನು ತಮ್ಮನ್ನು ಹೊಗಳಿ ಅಟ್ಟಕ್ಕೇರಿಸುತ್ತಿರುವ ಬಗ್ಗೆ ಯಶ್‌ಗೆ ಸಿಕ್ಕಾಪಟ್ಟೆ ಮುಜುಗರವಿದೆಯಂತೆ. “ಯಾರೂ ಮಾಡದ ಕೆಲಸವನ್ನ, ಯಶ್ ಮಾಡುತ್ತಿದ್ದಾರೆ ಅಂತೆಲ್ಲಾ ಕೇಳಿದ್ದೀನಿ. ಅದು ತಪ್ಪು. ಮಾಡಲೇಬೇಕು ಎನ್ನುವ ಅನಿವಾರ್ಯತೆ ಯಾರಿಗೂ ಇಲ್ಲ. ಯಾರನ್ನೋ ದೂರುವುದು ಸರಿಯಲ್ಲ. ಯಶ್ ಒಬ್ಬ ದೇವತಾ ಮನುಷ್ಯ ಅಂತೆಲ್ಲಾ ಪ್ರೊಜೆಕ್ಟ್ ಮಾಡೋದು ವಿಚಿತ್ರ ಅನಿಸುತ್ತದೆ. ಯಾರೂ ಮಾಡದ್ದನ್ನ ನಾನೇನೂ ಮಾಡುತ್ತಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ನನಗೂ ಬೇರೆ ಆಸೆಗಳಿವೆ. ಅದರ ಜೊತೆಗೆ ಈ ತರಹದ ಕೆಲಸಗಳನ್ನೂ ಮಾಡುತ್ತೀನಿ. ನಾನು ಮಾಡುತ್ತಿರುವುದು ಒಂದು ಪುಟ್ಟ ಕೆಲಸ ಅಷ್ಟೇ. ನನಗಿಂತ ತುಂಬಾ ಕೆಲಸ ಮಾಡಿದ್ದಾರೆ. ಅವರನ್ನೂ ಗೌರವಿಸಿ. ಇದು ನನ್ನ ಸಂತೋಷಕ್ಕೆ ಮಾಡಿಕೊಳ್ಳುತ್ತಿರುವುದೇ ಹೊರತು, ಯಾರಿಗೋ ಏನೋ ಪೂ›ವ್ ಮಾಡುವುದಕ್ಕೆ ಖಂಡಿತಾ ಮಾಡುತ್ತಿಲ್ಲ. ನನ್ನ ಕೆಲಸ ಸಿನಿಮಾ ಮಾಡೋದು, ಮನರಂಜನೆ ಕೊಡೋದು ಮತ್ತು ಜನರನ್ನ ಖುಷಿಯಾಗಿಡೋಡು. ನನ್ನ ಖುಷಿಗೆ ನಾನು ಇದನ್ನು ಮಾಡುತ್ತಿದ್ದೀನಿ ಅಷ್ಟೇ. ನಿಮಗೂ ಸಾಧ್ಯವಾದರೆ ಮಾಡಿ’ ಎನ್ನುತ್ತಾರೆ ಯಶ್.
ಚೇತನ್ ನಾಡಿಗೇರ್