Advertisement

ನಾನು ನೆಲ ಒರೆಸೋ ಬಟ್ಟೆ ಅಲ್ಲ 

11:18 AM Feb 16, 2018 | |

“ಆಗ ನಾನು ಬ್ಲ್ಯಾಂಕ್‌ ಪೇಪರ್‌ ಆಗಿದ್ದೆ. ಈಗ ಆ ಪೇಪರ್‌ ಕಾಲ್‌ಭಾಗ ತುಂಬಿದೆ ….’ – ಹೀಗೆ ಹೇಳಿ ಒಂದು ಕ್ಷಣ ಮೌನವಾದರು ಯೋಗೇಶ್‌. “ದುನಿಯಾ’ ಚಿತ್ರದ ಲೂಸ್‌ಮಾದ ಪಾತ್ರದ ಮೂಲಕ ತಮ್ಮ ಪ್ರತಿಭೆ ತೋರಿಸಿ ನಂತರ ಹೀರೋ ಆದ ಯೋಗಿ ಚಿತ್ರರಂಗಕ್ಕೆ ಬಂದು ಫೆಬ್ರವರಿ 23ಕ್ಕೆ 11 ವರ್ಷ. ಈ 11 ವರ್ಷದಲ್ಲಿ ಯೋಗಿ ಸಾಕಷ್ಟು ಯಶಸ್ಸನ್ನು ಕಂಡಿದ್ದಾರೆ. ಜೊತೆಗೆ ಅಷ್ಟೇ ಸೋಲು, ನೋವನ್ನೂ ಅನುಭವಿಸಿದ್ದಾರೆ.

Advertisement

ಇತ್ತೀಚೆಗೆ ಮೂರ್‍ನಾಲ್ಕು ವರ್ಷಗಳಿಂದ ಯೋಗಿ ಚಿತ್ರರಂಗದಲ್ಲಿ ಹೆಚ್ಚು ತೊಡಗಿಸಿಕೊಳ್ಳದೇ ತಮ್ಮ ಪಾಡಿಗೆ ಇದ್ದಾರೆ. ಬಿಡುಗಡೆಯಾದ ಚಿತ್ರಗಳು ಕೂಡಾ ನಿರೀಕ್ಷಿತ ಮಟ್ಟಕ್ಕೆ ಗೆಲುವು ಕಾಣಲಿಲ್ಲ. ಇದರಿಂದ ಯೋಗಿ ಸಾಕಷ್ಟು ಬೇಸರಗೊಂಡಿದ್ದು ಸುಳ್ಳಲ್ಲ. “ನಾನು ಚಿತ್ರರಂಗಕ್ಕೆ ಬ್ಲ್ಯಾಂಕ್‌ ಪೇಪರ್‌ ಆಗಿ ಬಂದೆ. ಏನೂ ಗೊತ್ತಿರಲಿಲ್ಲ. ಈಗ ಆ ಪೇಪರ್‌ ಕಾಲು ಭಾಗ ತುಂಬಿದೆ. ಒಂದಷ್ಟು ಮೆಚ್ಯುರಿಟಿ ಬಂದಿದೆ.

ಅದು ನನಗೂ ಗೊತ್ತಾಗುತ್ತಿದೆ, ನನ್ನ ಜೊತೆ ಮಾತನಾಡುವ ಬೇರೆಯವರಿಗೂ ಗೊತ್ತಾಗುತ್ತಿದೆ. ನಾನು ಚಿತ್ರರಂಗಕ್ಕೆ ಏನೂ ಗೊತ್ತಿಲ್ಲದೇ ಬಂದವನು. ಆ ವಯಸ್ಸಲ್ಲಿ ಸ್ಟಾರ್‌ಪಟ್ಟ ಎಂದರೆ ಏನೆಂದು ಗೊತ್ತಿರಲಿಲ್ಲ. ನನಗೆ ಆರಂಭದಲ್ಲೇ ಬ್ಯಾಕ್‌ ಟು ಬ್ಯಾಕ್‌ ಯಶಸ್ಸು ಸಿಕ್ಕಿತು. ಆ ಖುಷಿಯಲ್ಲಿ ಇನ್ನಷ್ಟು ಸಿನಿಮಾ ಒಪ್ಪಿಕೊಂಡೆ’ ಎಂದು ತಮ್ಮ ಆರಂಭದ ದಿನಗಳನ್ನು ಮೆಲುಕು ಹಾಕುತ್ತಾರೆ. 

ಯೋಗಿ ತಪ್ಪು ಹೆಜ್ಜೆ ಇಡಲು ಆರಂಭದಲ್ಲಿ ಸಿಕ್ಕ ಯಶಸ್ಸು ಕೂಡಾ ಒಂದು ಕಾರಣ ಎನ್ನುವುದನ್ನು ಅವರು ಒಪ್ಪಿಕೊಳ್ಳುತ್ತಾರೆ. “ನಾನು ಹೊಸಬರ ಸಿನಿಮಾಗಳನ್ನು ಒಪ್ಪಿಕೊಂಡು, ಆ ಸಿನಿಮಾ ಮೂಲಕ ಯಶಸ್ಸು ಕಂಡವ. ಹಾಗಾಗಿ, ಮತ್ತಷ್ಟು ಹೊಸಬರ ಸಿನಿಮಾಗಳನ್ನೇ ಒಪ್ಪಿಕೊಂಡೆ. ಆದರೆ, ಸಿನಿಮಾಗಳು ಅಂದುಕೊಂಡಂತೆ ಹೋಗಲಿಲ್ಲ’ ಎನ್ನುವುದು ಯೋಗಿ ಮಾತು. 

ಇತ್ತೀಚಿನ ಮೂರ್‍ನಾಲ್ಕು ವರ್ಷಗಳಿಂದ ಯೋಗಿ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಸೈಲೆಂಟ್‌ ಆಗಿದ್ದರು. ಯಾಕೆ ಎಂಬ ಪ್ರಶ್ನೆ ಬರುತ್ತದೆ. ಒಂದಥರ್ದದಲ್ಲಿ ಅದು ಯೋಗಿಯ ಜ್ಞಾನೋದಯದ ಸಮಯ ಎನ್ನಬಹುದು. “ನಿಜ ಹೇಳಬೇಕೆಂದರೆ “ಡಾರ್ಲಿಂಗ್‌’ ಚಿತ್ರದ ನಂತರ ನಾನು ತುಂಬಾ ಡಿಸ್ಟರ್ಬ್ ಆದೆ. ಜನ ಸೋತಾಗ ಮತ್ತು ಗೆದ್ದಾಗ ಹೇಗೆ ನೋಡುತ್ತಾರೆಂಬುದು ತಿಳಿಯಿತು. ತುಂಬಾ ಫೀಲ್‌ ಆಯ್ತು.

Advertisement

ಒಂದು ಕಡೆ ಚಿತ್ರರಂಗ ಬೆಳೀತಾ ಇದೆ. ಇನ್ನೊಂದು ಕಡೆ ನಾನು ಒಬ್ಬನೇ ಇದ್ದೇನೆ ಎಂಬ ಬೇಸರ ಕಾಡಿತು. ಈ ಬಗ್ಗೆ ಕೂತು ಯೋಚಿಸಿದೆ. ಚಿತ್ರರಂಗದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಬಗ್ಗೆ ತಿಳಿದುಕೊಂಡೆ. ಚಿತ್ರರಂಗದ ಮಂದಿ ನನಗೆ ಮಾರ್ಕೆಟ್‌ ಇಲ್ಲ ಎಂದು ಮಾತನಾಡಲಾರಂಭಿಸಿದರು. ಒಂದಂತೂ ಸ್ಪಷ್ಟ. ಯಾವುದೇ ನಟನ ಮಾರ್ಕೆಟ್‌ ಅನ್ನು ಜನ ಡೌನ್‌ ಮಾಡೋದಿಲ್ಲ. ನಾನು ಇವತ್ತಿಗೆ ನಡೆದುಕೊಂಡು ಹೋದರು, ಜನ ಹಿಂದೆ ಹೇಗೆ ನನ್ನನ್ನು ಟ್ರೀಟ್‌ ಮಾಡುತ್ತಿದ್ದರೋ ಅದೇ ರೀತಿ ಇವತ್ತಿಗೂ ನಡೆದುಕೊಳ್ಳುತ್ತಿದ್ದಾರೆ.

ಚಿತ್ರರಂಗದ ಮಂದಿ ಮಾರ್ಕೆಟ್‌ ಇಲ್ಲ ಅಂದರು. ಆದರೆ, ಯಾಕೆ ಮಾರ್ಕೆಟ್‌ ಇಲ್ಲ ಎಂದು ಯೋಚಿಸಲಿಲ್ಲ. ಒಳ್ಳೆಯ ಕಥೆ, ನಿರ್ದೇಶಕರೊಂದಿಗೆ ಸಿನಿಮಾ ಮಾಡಬೇಕೆಂದು ಯಾರೂ ಯೋಚಿಸಲಿಲ್ಲ’ ಎನ್ನುವುದು ಯೋಗಿ ಮಾತು. ಈ ನಾಲ್ಕು ವರ್ಷಗಳಲ್ಲಿ ಯೋಗಿ 400 ರಿಂದ 700 ಕತೆಗಳನ್ನು ಕೇಳಿದ್ದಾರಂತೆ. ಆದರೆ, ಅದೇ ಸ್ಲಂ ಹುಡುಗ, ಚಪ್ಪರ್‌ ಕಥೆಗಳು ಬಂದಿದ್ದರಿಂದ ಯೋಗಿ ಒಪ್ಪಲಿಲ್ಲ. “ನೆಲ ಒರೆಸೋಕೆ ಒಂದು ಬಟ್ಟೆ ಇದ್ದಂಗೆ, ನನ್ನನ್ನು ಕೂಡಾ ಮೆಟಿರಿಯಲ್‌ ತರಹ ಬಳಸುತ್ತಿದ್ದಾರೆ ಎನಿಸಿತು. ಹಾಗಾಗಿ ಬಿಟ್ಟೆ’ ಎನ್ನುವುದು ಯೋಗಿ ಮಾತು. 

ಯೋಗಿ ಈಗ ಬದಲಾಗಿದ್ದಾರೆ. “ಒಂದಷ್ಟು ಒಳ್ಳೆಯ ಕಥೆಗಳನ್ನು ಒಪ್ಪಿಕೊಂಡಿದ್ದಾರಂತೆ. “ಮುಂದೆ ಸುನಿ, ಅರ್ಜುನ್‌, ಚೇತನ್‌ ಹಾಗೂ ವಿಜಯಪ್ರಸಾದ್‌ ಅವರ ಸಿನಿಮಾಗಳಲ್ಲಿ ನಟಿಸಲಿದ್ದೇನೆ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ಸಿನಿಮಾಗಳು ಹಿಟ್‌ ಆಗದೇ ಹೋದರೂ ಯೋಗಿ ವಾಪಾಸ್‌ ಬಂದ ಗುರು ಎನ್ನುವ ಜೊತೆಗೆ ಯೋಗಿ ಕಥೆ ಮುಗೀತು ಎನ್ನುತ್ತಿದ್ದವರ ಬಾಯಿಗೆ ಬೀಗ ಬೀಳಲಿದೆ’ ಎಂದು ಧೈರ್ಯವಾಗಿ ಹೇಳುತ್ತಾರೆ ಯೋಗಿ.

* ರವಿಪ್ರಕಾಶ್ ರೈ

Advertisement

Udayavani is now on Telegram. Click here to join our channel and stay updated with the latest news.

Next