“ನಾನೆಂದೂ ಅಧಿಕಾರಕ್ಕೆ ಆಸೆಪಟ್ಟವನಲ್ಲ. ಹಾಗೇನಾದರೂ ಆಸೆಪಟ್ಟಿದ್ದರೆ, ಇಂದು ಏನೇನೆಲ್ಲಾ ಆಗಬಹುದಿತ್ತು…’ ಹೀಗೆ ಹೇಳಿದ್ದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು. ಮಂಡಳಿಯ ಅಧ್ಯಕ್ಷ ಹಾಗು ಇತರೆ ಸ್ಥಾನಗಳಿಗೆ ಮಂಗಳವಾರ (ಇಂದು) ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ “ಉದಯವಾಣಿ’ ನಡೆಸಿದ ಕಿರು ಸಂದರ್ಶನದಲ್ಲಿ “ನಾನೆಂದೂ ಅಧಿಕಾರಕ್ಕೆ ಆಸೆಪಟ್ಟವನಲ್ಲ’ ಎನ್ನುತ್ತಲೇ ತಮ್ಮ ಅಧಿಕಾರವಧಿಯಲ್ಲಿ ಚಿತ್ರರಂಗದ ಅನೇಕ ಸಮಸ್ಯೆ ಬಗೆಹರಿಸಿದ ತೃಪ್ತಿ ನನಗಿದೆ’ ಎಂದರು.
“ನಾನು ಎರಡು ಅವಧಿಗೆ ಅಧ್ಯಕ್ಷನಾಗಿದ್ದಕ್ಕೆ ಕಾರಣವಿದೆ. ನಾನು ಒಂದು ವರ್ಷ ಅವಧಿ ಮುಗಿಯುತ್ತಿದ್ದಂತೆಯೇ, ಗುರುರಾಜ ಕಲ್ಯಾಣ ಮಂಟಪದಲ್ಲಿ ಚುನಾವಣೆಗೆ ಸಮಯ ನಿಗದಿಪಡಿಸಿದ್ದೆ. ಆದರೆ, ಮಂಡಳಿಯ ಸರ್ವ ಸದಸ್ಯ ಸಭೆಯಲ್ಲಿ ಒಕ್ಕೊರಲಿನಿಂದ ಇನ್ನೊಂದು ಅವಧಿಗೆ ಮುಂದುವರೆಯಲೇಬೇಕೆಂಬ ಒತ್ತಾಯ ಬಂತು. ಹಾಗಾಗಿ ಎಲ್ಲರ ಪ್ರೀತಿಗೆ ಒಪ್ಪಿ ಇನ್ನೊಂದು ಅವಧಿಗೆ ಅಧ್ಯಕ್ಷನಾದೆ. ಆದರೆ, ನನಗೆ ಚುನಾವಣೆ ನಡೆಸಬಾರದು ಎಂಬ ಯಾವುದೇ ಉದ್ದೇಶ ಇರಲಿಲ್ಲ.
ಒಳ್ಳೆಯ ಕೆಲಸ ನಡೆಯಬೇಕಿದ್ದರಿಂದ ಎಲ್ಲರೂ ಇನ್ನೊಂದು ಅವಧಿಗೆ ನೀವೇ ಇದ್ದು, ಚಿತ್ರರಂಗದಲ್ಲಿರುವ ಕೆಲ ಸಮಸ್ಯೆಗಳಿಗೆ ಪರಿಹಾರ ಕೊಡಿಸಬೇಕು. ನಿಮ್ಮೊಂದಿಗೆ ನಾವಿರುತ್ತೇವೆ ಎಂಬ ನಂಬಿಕೆ ಕೊಟ್ಟಿದ್ದರಿಂದ ನಾನು ಅಧ್ಯಕ್ಷನಾಗಿ ಮುಂದುವರೆದೆ. ನನ್ನ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಿದ ತೃಪ್ತಿ ಇದೆ. ನನ್ನ ಅವಧಿಯಲ್ಲಿ ಯಾವುದೇ ಅಪಚಾರವಾಗಿಲ್ಲ. ಹಾಗೊಂದು ವೇಳೆ ಇದ್ದರೆ, ಯಾರು ಬೇಕಾದರೂ ನೇರವಾಗಿ ಪ್ರಶ್ನಿಸಬಹುದು.
ನಾನು ಯಾರೋ ಒಬ್ಬಿಬ್ಬರಿಗೆ ಉತ್ತರ ಕೊಡಲ್ಲ. ನಾನು ಎರಡು ಸಾವಿರ ಸದಸ್ಯರುಗಳಿಗೆ ಗೌರವ ಕೊಡ್ತೀನಿ. ನಾನು ಅಂದುಕೊಂಡ ಕೆಲಸಗಳನ್ನು ಮುಗಿಸಿದ್ದೇನೆ. ಇನ್ನೂ ಒಂದಷ್ಟು ಚಿತ್ರರಂಗಕ್ಕೆ ಕೆಲಸಗಳು ನಡೆಯಬೇಕಿದೆ. ಮಂಗಳವಾರ ನಡೆಯುವ ಚುನಾವಣೆಯಲ್ಲಿ ನಮ್ಮ ಕಡೆಯವರು ಆಯ್ಕೆಯಾಗುತ್ತಾರೆ ಎಂಬ ವಿಶ್ವಾಸವಿದೆ. ಅವರ ಮೂಲಕ ಉಳಿದ ಕೆಲಸಗಳನ್ನು ಮಾಡಿಸುತ್ತೇನೆ.
ನಮ್ಮವರು ಯಾರೇ ಆಯ್ಕೆಯಾದರೂ, ಅವರೊಂದಿಗೆ ನಾನಿದ್ದು ಚಿತ್ರರಂಗಕ್ಕೆ ಆಗಬೇಕಾದ ಕೆಲಸ ಕಾರ್ಯ ನೆರವೇರಿಸುತ್ತೇನೆ. ನನ್ನ ಇದುವರೆಗಿನ ಕೆಲಸ ತೃಪ್ತಿ ತಂದಿದೆ. ಇನ್ನೊಮ್ಮೆ ಪುನರುತ್ಛರಿಸುತ್ತೇನೆ. ನಾನು ಯಾವತ್ತೂ ಅಧಿಕಾರಕ್ಕೆ ಆಸೆಪಟ್ಟಿಲ್ಲ. ನನ್ನ ಮಂಡಳಿ ಸರ್ವಸದಸ್ಯರು ನೀವೇ ಇರಬೇಕು ಅಂತ ಹೇಳಿದ್ದರಿಂದಲೇ ಅವರ ನಂಬಿಕೆಗೆ ಕೆಲಸ ಮಾಡಿದ್ದೇನೆ. ಹಿಂದಿನ ನನ್ನ ಅವಧಿಯಲ್ಲಿ ನಡೆದ ಕೆಲಸ ನೋಡಿ, ನಮ್ಮ ಜೊತೆ ಇರುವವರನ್ನು ಸದಸ್ಯರು ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ನನ್ನದು.
ಯಾರು ಏನೇ ಅಂದುಕೊಂಡಿದ್ದರೂ, ಕೆಲಸ ನಮ್ಮ ಕಣ್ಣ ಮುಂದಿದೆ. ಸದಸ್ಯರು ಅದನ್ನು ಅರ್ಥಮಾಡಿಕೊಂಡಿದ್ದಾರೆ. ಅದರ ಆಧಾರದ ಮೇಲೆ ಆಯ್ಕೆ ಮಾಡುತ್ತಾರೆ. ಕೆಲವರು ಇಲ್ಲಸಲ್ಲದ ಮಾತುಗಳನ್ನು ಹೇಳಿಕೊಂಡಿದ್ದಾರೆ. ಅವರ ಯಾವ ಮಾತುಗಳೂ ಈ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳುತ್ತಾರೆ ಸಾ.ರಾ.ಗೋವಿಂದು.