ಮೈಸೂರು/ಚಿಕ್ಕಮಗಳೂರು: ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಸಕ್ರಿಯ ರಾಜಕಾರಣದಲ್ಲಿದ್ದು ಹೊಸಬರಿಗೆ ಮಾರ್ಗದರ್ಶನ ಮಾಡುತ್ತೇನೆ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲ್ಲ ಎಂದಿದ್ದೇನೆ ಅಷ್ಟೆ. ಬೇರೆ ಕ್ಷೇತ್ರದಿಂದ ಸ್ಪರ್ಧಿಸಲ್ಲ ಎಂದು ಎಲ್ಲಿ ಹೇಳಿದ್ದೇನೆ ಎನ್ನುವ ಮೂಲಕ ಸ್ಪರ್ಧೆ ಇಂಗಿತ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಿಲ್ಲಲ್ಲ ಅಂತ ಹೇಳಿದ್ದೆ. ಬೇರೆ ಕಡೆ ನಿಲ್ಲೋದಿಲ್ಲ ಅಂತ ಹೇಳಿದ್ದೀನಾ?. ನನಗೆ ಚಾಮುಂಡೇಶ್ವರಿ ಕ್ಷೇತ್ರದ ಋಣ ಮುಗಿದಿದೆ. ವಿಧಾನಸಭೆ ಚುನಾವಣೆಗೆ ಇನ್ನೂ 4 ವರ್ಷ ಇದೆ. ಮುಂದೆ ಏನಾಗುತ್ತದೋ ಕಾದು ನೋಡೋಣ ಬಿಡಿ’ ಎಂದರು.
“ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು, ಜಿ.ಟಿ.ದೇವೇಗೌಡ ಒಟ್ಟಾಗಿ ಪ್ರವಾಸ ಮಾಡಿ ಪ್ರಚಾರ ನಡೆಸಿದ ನಂತರ ವಾತಾವರಣ ಬದಲಾಗಿದೆ. ಜನರು ಈಗ ಮೈತ್ರಿ ಅಭ್ಯರ್ಥಿ ಕಡೆ ಒಲವು ತೋರುತ್ತಿದ್ದಾರೆ. ಹೀಗಾಗಿ, ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಗೆಲುವು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ, ಚಿಕ್ಕಮಗಳೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಗೌರವ ಇರುವ ಯಾರೂ ಸಹ ಬಿಜೆಪಿಗೆ ಮತ ನೀಡುವುದಿಲ್ಲ. ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ಅನಂತಕುಮಾರ್ ಹೆಗಡೆ ತಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎನ್ನುತ್ತಾರೆ.
ಆರ್.ಎಸ್.ಎಸ್. ಮುಖಂಡರು ಮೀಸಲಾತಿ ಏಕೆ ಕೊಡಬೇಕು ಎಂದು ಪ್ರಶ್ನಿಸುತ್ತಾರೆ. ಬಿಜೆಪಿ ಮತ್ತು ಆರ್.ಎಸ್.ಎಸ್. ಎಂದಿಗೂ ಸಂವಿಧಾನವನ್ನಾಗಲಿ, ಸಂವಿಧಾನ ಶಿಲ್ಪಿ ಡಾ|ಬಿ.ಆರ್.ಅಂಬೇಡ್ಕರ್ ಅವರನ್ನು ಒಪ್ಪಲಿಲ್ಲ. ಇಂತಹ ಪಕ್ಷವನ್ನು ಪುನ: ಅಧಿಕಾರಕ್ಕೆ ತರಬೇಕೆ ಎಂದು ಪ್ರಶ್ನಿಸಿದರು.