Advertisement

“ಆತ್ಮಸಾಕ್ಷಿಯಾಗಿ ನಾನು ನಡೆಯುತ್ತಿರುವ ದಾರಿ ಸರಿಯಾಗಿದೆ’

03:45 AM Feb 15, 2017 | Harsha Rao |

ವಿಧಾನಸಭೆ: “ಒಂದು ಕೋಟಿ ಎಂಟು ಲಕ್ಷ ಕುಟುಂಬಗಳಿಗೆ ಅನ್ನಭಾಗ್ಯ, ಒಂದು ಕೋಟಿ ಎಂಟು ಲಕ್ಷ ಮಕ್ಕಳಿಗೆ ಕ್ಷೀರಭಾಗ್ಯ, ಹತ್ತೂವರೆ ಲಕ್ಷ ಬಡವರಿಗೆ ನೆತ್ತಿ ಮೇಲೆ ಸೂರು ಒದಗಿಸಿರುವ ನಮ್ಮ ಸರ್ಕಾರ ನೂರಕ್ಕೆ ನೂರರಷ್ಟು ಜನಪರ. ನಮ್ಮ ಸಾಧನೆ ನನಗೆ ಸಮಾಧಾನ ತಂದಿದೆ’ ಎಂದು ಸಿದ್ದರಾಮಯ್ಯ ಸರ್ಕಾರದ ಕಾರ್ಯ ವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ.

Advertisement

ಸದನದಲ್ಲಿ ಮಂಗಳವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಅವರು ಉತ್ತರ ನೀಡಿದರು. ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಅವರು ನಮ್ಮದು ಜಡತ್ವ ಸರ್ಕಾರ, ನಿಷ್ಕ್ರಿಯ ಸರ್ಕಾರ, ಕ್ರಿಯಾಶೀಲವಲ್ಲದ ಸರ್ಕಾರ ಎಂದು ಟೀಕಿಸಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷ ಚುನಾವಣೆಗೆ ಮುನ್ನ ನೀಡಿದ್ದ 165 ಆಶ್ವಾಸನೆಗಳ ಪೈಕಿ 3 ವರ್ಷ 9 ತಿಂಗಳಲ್ಲಿ 125 ಆಶ್ವಾಸನೆಗಳನ್ನು ಈಡೇರಿಸಿದೆ. ನೀರಾವರಿಗೆ 43 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ಎಸ್ಸಿ/ಎಸ್ಟಿ ಅಭಿವೃದ್ಧಿಗೆ ಜನಸಂಖ್ಯೆಗೆ ಅನುಗುಣವಾಗಿ 60 ಸಾವಿರ ಕೋಟಿ ರೂ.ಬಿಡುಗಡೆಗೊಳಿಸಿ 44 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ನಮ್ಮದು ನಿಷ್ಕ್ರಿಯ ಸರ್ಕಾರವೇ ಎಂದು ಪ್ರಶ್ನಿಸಿದರು.

ಇಲಾಖಾವಾರು ಸಾಧನೆಯ ಅಂಕಿ-ಅಂಶಗಳೊಂದಿಗೆ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿ, 1.08
ಕೋಟಿ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯ ಕೊಟ್ಟು, 1.08 ಲಕ್ಷ ಕೋಟಿ ಮಕ್ಕಳಿಗೆ ಹಾಲು ಮತ್ತು ಮಧ್ಯಾಹ್ನದ ಬಿಸಿಯೂಟ ಕೊಟ್ಟು, ಶಾಲೆಗೆ ಬರುವ ಹೆಣ್ಣು ಮಕ್ಕಳಿಗೆ ಎರಡು ರೂ.ಪ್ರೋತ್ಸಾಹಧನ ಕೊಡುತ್ತಿದ್ದೇವೆ. ಅಪೌಷ್ಠಿಕತೆ
ಮಕ್ಕಳ ಸಂಖ್ಯೆ ಕಡಿಮೆ ಮಾಡಿದ್ದೇವೆ. ಇದು ಸಾಧನೆಯಲ್ಲವಾ? ಎಂದರು.

ಸಾಲಮನ್ನಾ ವಿಚಾರದಲ್ಲಿ ಮುಕ್ತ: ಸಾಲಮನ್ನಾ ವಿಚಾರದಲ್ಲಿ ರಾಜ್ಯ ಸರ್ಕಾರ ಮುಕ್ತವಾಗಿದೆ. ರಾಜ್ಯದಲ್ಲಿ ಸಹಕಾರ ಸಂಘಗಳಿಂದ ರೈತರು ಮಾಡಿರುವ ಸಾಲ 10,500 ಸಾವಿರ ಕೋಟಿ ರೂ. ಆದರೆ, ವಾಣಿಜ್ಯ ಬ್ಯಾಂಕುಗಳಿಂದ ಪಡೆದಿರುವುದು 42 ಸಾವಿರ ಕೋಟಿ ರೂ. ಹೀಗಾಗಿ, ಕೇಂದ್ರ ಸರ್ಕಾರ ಅದರಲ್ಲಿ ಅರ್ಧ ಮೊತ್ತ ಮನ್ನಾ ಮಾಡಿದರೆ ರಾಜ್ಯ ಸರ್ಕಾರ ಅರ್ಧದಷ್ಟು ಮನ್ನಾ ಮಾಡಲಿದೆ. ಈ ಬಗ್ಗೆ ಮತ್ತೂಮ್ಮೆ ಪ್ರಧಾನಿಗೆ ಪತ್ರ ಬರೆಯುವುದಾಗಿ ಪುನರುಚ್ಚರಿಸಿದರು. ರಾಜ್ಯ ಸರ್ಕಾರ ಬರಗಾಲವನ್ನು ಸಮರ್ಪಕವಾಗಿ ನಿಭಾಯಿಸಿದ್ದು, ಬರ ಪರಿಹಾರ ಕಾಮಗಾರಿಗಳಿಗಾಗಿ ಇದುವರೆಗೂ 1,144 ಕೋಟಿ ರೂ.ವೆಚ್ಚ ಮಾಡಲಾಗಿದೆ. ಬೆಳೆ ಪರಿಹಾರವಾಗಿ ಕೇಂದ್ರ ಸರ್ಕಾರ ಕೊಟ್ಟಿರುವ ನೆರವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲು ಹೊಸ ಸಾಫ್ಟ್ವೇರ್‌ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

“ಸರ್ಕಾರದಲ್ಲಿ ದೂರುಗಳೇ ಇಲ್ಲ, ಎಲ್ಲವೂ ಸರಿಯಿದೆ ಎಂದು ನಾನು ಹೇಳುವುದಿಲ್ಲ. ಕೆಲವು ಲೋಪಗಳು ಇರಬಹುದು. ಆದರೂ ಜನರಿಗೆ ಕೊಟ್ಟ ಮಾತಿನಂತೆ ಉತ್ತಮ ಆಡಳಿತ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ’ ಎಂದು
ತಿಳಿಸಿದರು.”ನನ್ನನ್ನು ಆಹಿಂದ ಬ್ರ್ಯಾಂಡ್‌ ಮಾಡಲಾಗಿದೆ. ಆದರೆ, ಸರ್ಕಾರದ ಯೋಜನೆಗಳು ಎಲ್ಲ ವರ್ಗಕ್ಕೂ ತಲುಪುವುದಿಲ್ಲವೇ’ ಎಂದು ಪ್ರಶ್ನಿಸಿ, “ನಮ್ಮ ಸರ್ಕಾರ ಎಲ್ಲ ಸಮುದಾಯದ ಹಿತಾಸಕ್ತಿ ಬಯಸುತ್ತದೆ. ನಮ್ಮ ಸಾಧನೆಗಳೇ ನಮಗೆ ಶ್ರೀರಕ್ಷೆ. ಒಂದು ವರ್ಷದ ನಂತರ ಜನರ ಮುಂದೆ ಹೋಗುತ್ತೇವೆ, ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next