Advertisement

ನಾನೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ

07:18 AM Feb 22, 2019 | |

ದಾವಣಗೆರೆ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ತಮಗೆ ಟಿಕೆಟ್‌ ನೀಡಬೇಕು ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ, ಹಿರಿಯ ಮುಖಂಡ ಕೆಂಗೋ ಹನುಮಂತಪ್ಪ ಮುಖಂಡರನ್ನು ಒತ್ತಾಯಿಸಿದ್ದಾರೆ.

Advertisement

1994ರಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ನಾನು ಬಯಲುಸೀಮೆ ಅಭಿವೃದ್ಧಿ ಮಂಡಳಿ ಜೊತೆಗೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಮಾಡುತ್ತಿರುವ ಸೇವೆ ಪರಿಗಣಿಸಿ ಈ ಬಾರಿ ಲೋಕಸಭಾ ಚುನಾವಣೆಗೆ ಟಿಕೆಟ್‌ ನೀಡಬೇಕು ಎಂದು ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಶಾಸಕಾಂಗ ಪಕ್ಷದ ಮುಖಂಡ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದು, ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿದಲ್ಲಿ ಕಾಂಗ್ರೆಸ್‌ಗೆ ಗೆಲುವು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅಂದ ಮಾತ್ರಕ್ಕೆ ಹಿಂದಿನ ಮೂರು ಚುನಾವಣೆಯಲ್ಲಿ ಸೋಲು ಕಂಡಿರುವ ಎಸ್‌. ಎಸ್‌. ಮಲ್ಲಿಕಾರ್ಜುನ್‌ ಸ್ಪರ್ಧಿಸಿದರೆ ಸೋಲುವರು ಎಂದರ್ಥವಲ್ಲ. ಜನರು ಮಾತನಾಡಿಕೊಳ್ಳುತ್ತಿರುವುದನ್ನು ನಾನು ಹೇಳುತ್ತಿದ್ದೇನೆ ಎಂದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ದಿ. ಚನ್ನಯ್ಯ ಒಡೆಯರ್‌ ನಂತರ ಅಹಿಂದ ವರ್ಗದವರಿಗೆ ಈವರೆಗೆ ಅವಕಾಶ ಕೊಟ್ಟಿಲ್ಲ. ಸದಾ ಕಾಂಗ್ರೆಸ್‌ ಬೆಂಬಲಿಸಿಕೊಂಡು ಬರುತ್ತಿರುವ ಶೇ. 75 ರಷ್ಟು ಮತದಾರರ ಹೊಂದಿರುವ ಅಹಿಂದ ಮುಖಂಡರಿಗೆ ಈ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಮುಂದಿನ ದಿನಗಳಲ್ಲಿ ಪಕ್ಷದ ಮುಖಂಡರ ಬಳಿ ನಿಯೋಗ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.

ಹಲವಾರು ಚುನಾವಣೆಯಲ್ಲಿ ಟಿಕೆಟ್‌ಗೆ ಪ್ರಯತ್ನ ಮಾಡಿದ್ದೇನೆ. ಸಿಕ್ಕಿಲ್ಲ. ಈ ಬಾರಿಯೂ ಟಿಕೆಟ್‌ ನೀಡುವಂತೆ ಮನವಿ ಮಾಡಿದ್ದೇನೆ. ಬೇರೆ ಕಡೆಯಿಂದ ಬಂದವರನ್ನು ಪರಿಚಯಿಸಬೇಕಾಗುತ್ತದೆ. ನಾನು ದಾವಣಗೆರೆ ಜಿಲ್ಲೆಯವನೇ ಆಗಿರುವುದರಿಂದ ಎಲ್ಲರಿಗೂ ಪರಿಚಿತನಿದ್ದೇನೆ. ನನಗೆ ಜಿಲ್ಲೆ, ಜನರ ನಾಡಿಮಿಡಿತ ಗೊತ್ತಿದೆ. ಹಾಗಾಗಿ ತಮಗೆ ಟಿಕೆಟ್‌ ಕೊಡಬೇಕು ಎಂದು ಕೇಳಿದ್ದೇನೆ. ಒಂದೊಮ್ಮೆ ಟಿಕೆಟ್‌ ನೀಡದೇ ಹೋದರೂ ಪಕ್ಷದ ಅಭ್ಯರ್ಥಿ ಯಾರೇ ಆಗಲಿ ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

Advertisement

ನಗರಸಭೆ ಮಾಜಿ ಸದಸ್ಯ ಜೆ.ಕೆ. ಕೊಟ್ರಬಸಪ್ಪ ಮಾತನಾಡಿ, ಕಳೆದ 50 ವರ್ಷದಿಂದ ರಾಜಕೀಯ ಕ್ಷೇತ್ರದಲ್ಲಿರುವ ಕೆಂಗೋ ಹನುಮಂತಪ್ಪ ಅವರಿಗೆ ಈ ಬಾರಿ ಟಿಕೆಟ್‌ ನೀಡಬೇಕು.

ಶೇ. 75 ರಷ್ಟಿರುವ ಅಹಿಂದ ವರ್ಗವನ್ನು ಎಲ್ಲಾ ಚುನಾವಣೆಯಲ್ಲಿ ಬಳಸಿಕೊಳ್ಳುತ್ತಿದ್ದಾರೆ ಹೊರತು ಅವಕಾಶ ನೀಡುತ್ತಿಲ್ಲ. ಜಿಲ್ಲಾ ಹೈಕಮಾಂಡ್‌ ಇಲ್ಲವೇ ಇಲ್ಲ, ಜಿಲ್ಲಾ ಹೈಕಮಾಂಡ್‌ ಕೆಲವರಿಗೆ ಮಾತ್ರ. ನಮಗೆ ಏನಿದ್ದರೂ ರಾಹುಲ್‌ಗಾಂಧಿ, ದಿನೇಶ್‌ ಗುಂಡೂರಾವ್‌ ಅವರೇ ಹೈಕಮಾಂಡ್‌. ಈ ಬಾರಿಗೆ ಅಹಿಂದ ವರ್ಗದವರಿಗೇ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಕುರುಬರ ಸಂಘದ ಮುಖಂಡರಾದ ಬಳ್ಳಾರಿ ಷಣ್ಮುಖಪ್ಪ, ಎನ್‌.ಜೆ. ನಿಂಗಪ್ಪ, ಬಿ.ಎಚ್‌. ಪರಶುರಾಮಪ್ಪ, ಲೋಕಿಕೆರೆ ಸಿದ್ದಪ್ಪ, ಕತ್ತಲಗೆರೆ ತಿಪ್ಪಣ್ಣ, ರಂಗನಾಥ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಪಕ್ಷದ ಜಿಲ್ಲಾಧ್ಯಕ್ಷರವರ್ತನೆಗೆ ಆಕ್ಷೇಪ
ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಪಕ್ಷದ ಅಭ್ಯರ್ಥಿ ಬದಲಾವಣೆ ಮಾಡುತ್ತಾರೆ ಎಂಬ ಕಾರಣಕ್ಕಾಗಿಯೇ ಈಚೆಗೆ ಸಭೆ ನಡೆಸಿ, ಮಲ್ಲಿಕಾರ್ಜುನ್‌ ಅವರೇ ನಿಲ್ಲಬೇಕು ಎಂದು ಒತ್ತಾಯಿಸಲಾಯಿತು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅಭಿಮಾನಿಗಳ ಸಂಘದ ಸಭೆಯಲ್ಲಿ ಭಾಗವಹಿಸಬೇಕಿತ್ತು. ಆದರೆ, ಆ ರೀತಿ ಮಾಡದೆ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅಭಿಮಾನಿಗಳ ಸಂಘದ ಜೊತೆ ಜಿಲ್ಲಾ ಕಾಂಗ್ರೆಸ್‌ ಸಮಿತಿಯನ್ನೂ ಸೇರಿಸಿಕೊಂಡು ಸಭೆ ನಡೆಸಿದ್ದು ಸರಿ ಅಲ್ಲ. ಪಕ್ಷದ ವತಿಯಿಂದಲೇ ನೇರವಾಗಿಯೇ
ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರಿಗೆ ಟಿಕೆಟ್‌ ಕೇಳುವುದು ತಪ್ಪಲ್ಲ. ಆದರೆ, ಪಕ್ಷದೊಂದಿಗೆ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅಭಿಮಾನಿಗಳ ಸಂಘವನ್ನು ಸೇರಿಸಿಕೊಳ್ಳಬಾರದಿತ್ತು ಎಂದು ಕೆಂಗೋ ಹನುಮಂತಪ್ಪ ಹೇಳಿದರು. ಜೆ.ಕೆ. ಕೊಟ್ರಬಸಪ್ಪ ಇತರರು ಧ್ವನಿಗೂಡಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next