ಚನ್ನರಾಯಪಟ್ಟಣ: ಶ್ರವಣಬೆಳಗೊಳದಲ್ಲಿ ಶನಿವಾರದಿಂದ ಭಗವಾನ್ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ಆರಂಭವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ವಿಂಧ್ಯಗಿರಿಯನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ಜಲಾಭಿಷೇಕ ಮಾಡಿದರು.
ಡೋಲಿಯನ್ನು ನಿರಾಕರಿಸಿದ 69 ರ ಹರೆಯದ ಸಿಎಂ ಸಿದ್ದರಾಮಯ್ಯ ಅವರು ಸಚಿವೆ ಉಮಾಶ್ರಿ , ಸಚಿವರಾದ ಮಂಜು ಮತ್ತು ಭದ್ರತಾ ಸಿಬಂದಿಗಳೊಂದಿಗೆ ವಿಂಧ್ಯಗಿರಿಯ 700 ಮೆಟ್ಟಿಲುಗಳನ್ನು ನಿರಾಯಾಸವಾಗಿ ಏರಿದರು. ಕಲಶಗಳಲ್ಲಿದ್ದ ನೀರನ್ನು ವೈರಾಗ್ಯ ಮೂರ್ತಿಯ ತಲೆಯ ಮೇಲೆರೆದು ಪ್ರಾರ್ಥಿಸಿದರು.
ಏನೂ ಆಗಿಲ್ಲ, ಹಿಂಸೆ ಬೇಡ ಎಂದು ನಡೆದೆ!
‘ಬೆಟ್ಟ ವನ್ನು ಇಳಿದು ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ನಾನು ಡೋಲಿಯವರಿಗೆ ಹಿಂಸೆ ಆಗಬಾರದು ಎಂದು ನಡೆದುಕೊಂಡೆ ಹೋದೆ. ನನಗೆ ಸುಸ್ತೇ ಆಗಲಿಲ್ಲ. ಐ ಆ್ಯಮ್ ಆಲ್ ರೈಟ್’ ಎಂದರು.
‘ಹಿಂದೆ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ನಾನು ಹಣಕಾಸು ಸಚಿವನಾಗಿ ಮಹಾಮಸ್ತಕಾಭಿಷೇಕಕ್ಕೆ ಹಣ ಬಿಡುಗಡೆ ಮಾಡಿದ್ದೆ. ಆದ್ರೆ ಮಸ್ತಕಾಭಿಷೇಕ ನಡೆಯುವ ಹೊತ್ತಿಗೆ ಮುಖ್ಯಮಂತ್ರಿಗಳಾಗಿದ್ದ ಧರಂ ಸಿಂಗ್ ಅವರು ದೇವೇಗೌಡರ ಮಾತು ಕೇಳಿ ನನ್ನನ್ನು ಡಿಸ್‌ಮಿಸ್ ಮಾಡಿದ್ರು’ ಎಂದರು.
‘ಇದಕ್ಕೆ ಕೇಂದ್ರ ಸರ್ಕಾರ ಒಂದೂ ರೂಪಾಯಿಯೂ ನೆರವು ನೀಡಿಲ್ಲ’ ಎಂದರು.
‘6 ಕೋಟಿ ಕನ್ನಡಿಗ ಪರವಾಗಿ ಜಲಾಭಿಷೇಕ ಮಾಡಿದ್ದೇನೆ.ನಾಡಿಗೆ ಒಳ್ಳೆಯದಾಗಲಿ, ನಾಡು ಸಮೃದ್ಧಿಯಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ’ ಎಂದರು.