ಮುಳಬಾಗಿಲು: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ವಿರುದ್ಧ ಉದಯವಾಣಿ ವರದಿ ಪ್ರಕಟಿಸಿದ ಬೆನ್ನಲ್ಲೇ ತಟಸ್ಥರಾಗಿದ್ದ ದಂಧೆ ಕೋರರು, ಸರ್ಕಾರಿ ರಜಾ ದಿನಗಳಲ್ಲಿ ಮರಳನ್ನು ತೆಗೆಯಲು ಮುಂದಾಗಿದ್ದಾರೆ.
ನಂಗಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹೇಗಿದ್ದರೂ ಇತ್ತ ಕಡೆ ಸುಳಿಯುವುದಿಲ್ಲವೆಂಬುದನ್ನು ಅರಿತ ಮರಳು ದಂಧೆಕೋರರು ಮುಷ್ಟೂರು ಮಾಣಿಕ್ಯನತ್ತ ಕೆರೆ, ನಂಗಲಿ ಕೆರೆ, ಬ್ಯಾಟನೂರು ಕೆರೆ, ಬೂಡಿದೇರು, ಪದ್ಮಘಟ್ಟ ಕೃಷಿ ಜಮೀನು, ಕೌಂಡಿನ್ಯ ನದಿಯ ವಿವಿಧ ಕಡೆ ಯಾವುದೇ ಅಡೆ ತಡೆಗಳಿಲ್ಲದೇ ಮರಳು ತೆಗೆದುಬೆಂಗಳೂರಿಗೆ ಸಾಗಾಣಿಕೆ ಮಾಡಲು ಮುದಿಗೆರೆ ಕ್ರಾಸ್‌ನ ಅಂಗಡಿ ಹಿಂಭಾಗದಲ್ಲಿ ಹಾಕಿದ್ದರಲ್ಲದೇ, ಮರಳು ತೆಗೆಯುವ ಸ್ಥಳಗಳಲ್ಲಿಯೇ ರಾಶಿಹಾಕಿದ್ದರು.ಅದರಲ್ಲೂಮುಖ್ಯವಾಗಿಮುಷ್ಟೂರುಗ್ರಾಮದ ಅಂಚಿನಲ್ಲಿ ಹಾದು ಹೋಗಿರುವ ಕೌಂಡಿನ್ಯ ನದಿಯಂಚಿನ ಒಂದು ಸ್ಥಳದಲ್ಲಿ ಮುಷ್ಟೂರು ಗ್ರಾಪಂ ನಿರ್ಗಮಿತ ಅಧ್ಯಕ್ಷ ಅಶ್ವತ್ಥಗೌಡ ಎಂಬ ವ್ಯಕ್ತಿಯ ಹೆಸರಿನಲ್ಲಿ 4-5 ಕೂಲಿಗಳು ಅಕ್ರಮವಾಗಿ ಮರಳು ತೆಗೆದು ರಾಶಿಹಾಕಿದ್ದರು.ಅದರ ಸಮೀಪದಲ್ಲಿಯೇ ಮುಷ್ಟೂರು ಗ್ರಾಮದ ಸಿಎಸ್‌ಆರ್ ಸುಬ್ಬರಾಮಪ್ಪ ಜೆಸಿಬಿಯಿಂದ ಅಕ್ರಮವಾಗಿ ಮರಳು ತೆಗೆಸಿ ಜೆಸಿಬಿ ಸ್ಥಳದಿಂದ ಪರಾರಿಯಾದರೂ ಈ ಕುರಿತು ಮಾತನಾಡಿದ ಸುಬ್ಬರಾಮಪ್ಪ, ಸ್ಥಳೀಯ ಪೊಲೀಸರು ಮತ್ತು ತಹಶೀಲ್ದಾರ್ ಸಹಕಾರ ನೀಡುತ್ತಿರುವುದಾಗಿ ತಿಳಿಸಿದರಲ್ಲದೇ ರಾಜಾರೋಷವಾಗಿ ಟ್ರ್ಯಾಕ್ಟರ್‌ಗೆ ತುಂಬಿಸಿ ಸಾಗಾಣಿಕೆ ಮಾಡಿದರು.
ಕುಮ್ಮಕ್ಕು: ಕಂದಾಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಕುಮ್ಮಕ್ಕಿನಿಂದ ಹಾಗೂ ಭಾನುವಾರದ ರಜೆಯಾದ್ದರಿಂದತಹಶೀಲ್ದಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮನೆಯಲ್ಲಿರುತ್ತಾರೆ. ಹೀಗಾಗಿ ಮರಳು ದಂಧೆ ಅನಾಯಾಸವಾಗಿ ನಡೆಯುತ್ತಿದೆ. ಏನೇ ಆದರೂ ಸ್ಥಗಿತಗೊಂಡಿದ್ದ ಅಕ್ರಮ ಮರಳು ದಂಧೆ ಭಾನುವಾರದ ರಜೆಯಂದು ಸದ್ದಿಲ್ಲದೇ ಆರಂಭಗೊಂಡಿದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅತ್ತ ಕಡೆ ಸುಳಿಯದೇ ಇದ್ದರಿಂದ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬರುತ್ತಿದೆ. ದಂಧೆಕೋರರು ಹಾಡಹಗಲೇ ಮರಳನ್ನು ಟ್ರ್ಯಾಕ್ಟರ್‌ಗಳಲ್ಲಿ ತುಂಬಿ ಕಾಣದಂತೆ ಮೇಲೆ ಟಾರ್ಪಾಲ್‌ನಿಂದ ಮುಚ್ಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಳಬಾಗಿಲಿಗೆ ರಾಜಾರೋಷವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ. ಅಲ್ಲದೇ, ಕತ್ತಲಲ್ಲಿ ಲಾರಿಗೆ ತುಂಬಿ ಬೆಂಗಳೂರಿಗೆ ಸಾಗಿಸಲು ಸಿದ್ಧತೆ ಮಾಡಿಕೊಂಡಿರುವುದನ್ನು ಗಮನಿಸುತ್ತಿದ್ದರೆ, ಮರಳು ಮಾಫಿಯಾ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಸಡ್ಡು ಹೊಡೆಯುತ್ತಿದೆಯೇ ಎಂಬ ಅನುಮಾನ ಮೂಡದೇ ಇರದು.
ತಟಸ್ಥರಾಗಿದ್ದರು : ತಾಲೂಕಿನ ನಂಗಲಿಠಾಣಾ ವ್ಯಾಪ್ತಿಯ ವಿವಿಧ ಕೆರೆ-ಕಾಲುವೆ ಮತ್ತು ಕೃಷಿ ಜಮೀನುಗಳಲ್ಲಿ ಅಕ್ರಮ ಮರಳು ದಂಧೆ ರಾಜಕಾರಣಿಗಳು, ಕಂದಾಯ ಇಲಾಖೆ ಮತ್ತು ಪೊಲೀಸರ ಕುಮ್ಮಕ್ಕಿನಿಂದ ರಾಜಾರೋಷವಾಗಿ ನಡೆಯುತ್ತಿತ್ತು. ಈ ಕುರಿತು”ಉದಯವಾಣಿ’ ಎಲ್ಲಾ ಕಡೆ ಸಂಚರಿಸಿ ಮಾಹಿತಿ ಸಂಗ್ರಹಿಸಿ ನ.19 ರಂದು “ಅಕ್ರಮ ಮರಳು ದಂಧೆ ನಿಯಂತ್ರಿಸುವವರ್ಯಾರು’ ಎಂಬತಲೆ ಬರಹದಡಿ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಮರಳು ದಂಧೆಕೋರರು ತಟಸ್ಥರಾಗಿದ್ದರು.
ತಾಲೂಕಿನ ವಿವಿಧಕೆರೆ ಮತ್ತುಕಾಲುವೆಗಳಲ್ಲಿ ಆರಂಭಗೊಂಡಿರುವ ಅಕ್ರಮ ಮರಳು ದಂಧೆಗೆಕಡಿವಾಣ ಹಾಕಲು ತಹಶೀಲ್ದಾರ್ ಮತ್ತು ಪೊಲೀಸ್ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಅಧಿಕಾರಿಗಳಿಗೆ ಸೂಚಿಸಲಾಗುವುದು. ಈ ಮೂಲಕ ತಲೆ ಎತ್ತಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲಾಗುವುದು.
–ಸತ್ಯಭಾಮ, ಜಿಲ್ಲಾಧಿಕಾರಿ