ಬೆಳಗಾವಿ: ವರ್ಷಪೂರ್ತಿ ದುಡಿದ ಕೆಲಸಕ್ಕೆ ಸಿಕ್ಕ ಬೋನಸ್… ಫಟಾಫಟ್ ಹಣ ಗಳಿಸುವ ದುರಾಸೆ… ಓಣಿ ಓಣಿಗಳಲ್ಲಿ ಚಾಪೆ ಹಾಸಿ ಆಟದ ಕೈಚಳಕ… ಉಪವಾಸ ಇದ್ದುಕೊಂಡು ರಾತ್ರಿಯಿಡೀ ಎಲೆ ಒಗೆದು ಅಂದರ್-ಬಾಹರ್ ಆಟದಲ್ಲಿ ಮಗ್ನರಾಗುವ ಕಲಿಗಳು… ಜೇಬು ಗರಂ ಇದ್ದರೆ ಎಂಜಾಯ್‌ಮೆಂಟ್, ಖಾಲಿಯಾದರೆ ಕೈ ಒಡ್ಡುವ ಅತೃಪ್ತ ಮನಸ್ಸುಗಳು. ಹಬ್ಬವೂ ಇಲ್ಲ, ಹಣವೂ ಇಲ್ಲ ಎಂಬಂತೆ ಸೊಟ್ಟ ಮುಖ ಮಾಡಿಕೊಂಡು ಸಾಲದ ಸುಳಿಗೆ ಸಿಲುಕುವ ಜೂಜುಕೋರರು… ದೀಪಾವಳಿ ಹಬ್ಬಕ್ಕಾಗಿ ಬಹುತೇಕರು ಅಂದರ್ -ಬಾಹರ್ ಆಟಕ್ಕಾಗಿ ಕಾದು ಕುಳಿತಿರುತ್ತಾರೆ.
ಹಬ್ಬಗಳಲ್ಲು ಜೂಜಾಟ ಆಡುವುದು ತಪ್ಪಲ್ಲ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಪ್ರತಿ ವರ್ಷ ನಡೆಯುವ ಜೂಜಾಟದ ಬಗ್ಗೆ ಯಾರಿಗೂ ಗೊತ್ತಿಲ್ಲವೆಂದೇನೂ ಇಲ್ಲ. ಪೊಲೀಸರಿಗೂ ಸಹಿತ ಗೊತ್ತಿರುವ ಇಸ್ಪೀಟ್ ಎಲೆಗಳ ಆಟ ಜೋರಾಗಿಯೇ ಇರುತ್ತದೆ. ಓಣಿ, ಚಾಳಗಳಲ್ಲಿ ಚಾಪೆ ಹಾಸಿ 10-12 ಜನರಗುಂಪು ಸೇರಿ ಜೂಜಾಟದಲ್ಲಿ ತೊಡಗುವುದು ಸಹಜವಾಗಿದೆ. ಆದರೆ ಇದಕ್ಕೆ ಪೊಲೀಸರು ಕಡಿವಾಣ ಹಾಕುವರೇ ಎಂಬ ಪ್ರಶ್ನೆ ನಾಗರಿಕರದ್ದು.
ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ದುಡಿಯುವ ಕೈಗಳಿಗೆ ಕೈ ತುಂಬ ಬೋನಸ್ ಸಿಗುತ್ತದೆ. ಈ ಹಣವನ್ನು ಇಟ್ಟುಕೊಂಡು ಜೇಬು ಬಿಸಿ ಮಾಡಿಕೊಳ್ಳಲು ಅಂದರ್-ಬಾಹರ್ ಆಟಕ್ಕಾಗಿ ಕಾದು ಕುಳಿತಿರುತ್ತಾರೆ. ನಾಲ್ಕೈದು ಜನ ಸೇರಿದರೆಂದರೆ ಇಸ್ಪಿಟ್ ಎಲೆಗಳ ಬಾಕ್ಸ್ ಹಿಡಿದುಕೊಂಡು ಆಟದಲ್ಲಿ ಮಗ್ನರಾಗುತ್ತಾರೆ. ಆಟ ಆಡಲು ಹೋಗುವಾಗ ಇರುವ ಸ್ನೇಹ ಆಟ ಮುಗಿದ ಬಳಿಕ ಖತಂ ಆಗುವುದು ಈ ಆಟದ ವಿಶೇಷ.
ಅಡ್ಡೆಗಳಲ್ಲಿ ಬೈಠಕ್ ಶುರು: ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅಂದರ್-ಬಾಹರ್ ಆಟದ ಗಮ್ಮತ್ತು ಜೋರಾಗಿ ಇರುತ್ತದೆ. ರಾಜ್ಯಾದ್ಯಂತ ಸಾರ್ವತ್ರಿಕವಾಗಿ ಈ ಆಟ ನಡೆಯುತ್ತದೆ. ಎಲ್ಲ ಕಡೆಗಳಲ್ಲೂ ರಾಜಾರೋಷವಾಗಿ ಜೂಜಾಟ ನಡೆಯುತ್ತದೆ. ಆದರೆ ಪೊಲೀಸರು ಮಾತ್ರ ಕಣ್ಣು ಮುಚ್ಚಿ ಕುಳಿತಿರುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ದೀಪಾವಳಿ ಮುನ್ನಾ ದಿನದಿಂದ ಒಂದೊಂದು ಅಡ್ಡೆಯ ಬೈಠಕ್‌ನಲ್ಲಿ ಏನಿಲ್ಲವೆಂದರೂ ಲಕ್ಷಾಂತರ ರೂ. ಡಾವ ನಡೆಯುತ್ತವೆ.
ದುಸರಾ, ತಿಸರಾ, ಚೌತಾ ಎಂದು ಎಲೆ ಒಗೆಯುವ ಡಾವಗಳ ಮೂಲಕವೇ ಈ ಆಟ ಸಾಗುತ್ತದೆ. ಈ ಆಟದ ಅಡ್ಡೆಗಳು ನಗರದ ಬಹುತೇಕ ಕಡೆಗಳಲ್ಲಿ ಇರುತ್ತವೆ. ದೀಪಾವಳಿ ಪಾಡ್ಯ ಹಬ್ಬದ ದಿನವಂತೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವೇ ಇಲ್ಲ. ಎಲ್ಲ ಕಡೆಗಳಲ್ಲೂ ಜೂಜಾಟ ಇರುತ್ತದೆ. ಎಲ್ಲ ಅಡ್ಡೆಗಳಲ್ಲೂ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಯುತ್ತದೆ.
-ಭೈರೋಬಾ ಕಾಂಬಳೆ