Advertisement

Bangalore: ನಾದಿನಿ ಜತೆ ಅಕ್ರಮ ಸಂಬಂಧ: ಚಿನ್ನದ ವ್ಯಾಪಾರಿ ಹತ್ಯೆ

12:07 PM Feb 21, 2024 | Team Udayavani |

ಬೆಂಗಳೂರು: ನಾದಿನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಚಿನ್ನಾಭರಣ ವ್ಯಾಪಾರಿಯನ್ನು ಚಿನ್ನದಗಟ್ಟಿ ಕೊಡಿಸುವ ನೆಪದಲ್ಲಿ ಕರೆದೊಯ್ದು ಭೀಕರವಾಗಿ ಹತ್ಯೆಗೈದಿರುವ ಘಟನೆ ಹಲಸೂರು ಗೇಟ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ನಗರತ್‌ಪೇಟೆ ನಿವಾಸಿ ಮೊಹಮ್ಮದ್‌ ಅಕ್ತರ್‌ ಅಲಿ(49) ಕೊಲೆಯಾದವ. ಕೃತ್ಯ ಎಸಗಿದ ಶಹನವಾಜ್‌ ಹಾಗೂ ಆತನ ಸಹಚರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮೊಹಮ್ಮದ್‌ ಅಕ್ತರ್‌ ಅಲಿ ಕುಟುಂಬ ಬಹಳ ವರ್ಷಗಳಿಂದ ನಗರತ್‌ಪೇಟೆಯಲ್ಲಿ ವಾಸವಾಗಿದ್ದು, ಮನೆ ಸಮೀಪದಲ್ಲಿಯೇ ಎರಡು ಚಿನ್ನಾಭರಣ ಅಂಗಡಿ ಇಟ್ಟುಕೊಂಡಿದ್ದರು. ಇನ್ನು ಆರೋಪಿ ಶಹನವಾಜ್‌ ಕ್ಯಾಬ್‌ ಚಾಲಕನಾಗಿದ್ದು, ಆತ ಕೂಡ ನಗರತ್‌ಪೇಟೆಯಲ್ಲೇ ಪತ್ನಿ ಜತೆ ವಾಸವಾಗಿದ್ದ.

ಮೊಹಮ್ಮದ್‌ ಅಕ್ತರ್‌ ಅಲಿ ಪತ್ನಿ ಮತ್ತು ಶಹನವಾಜ್‌ ಪತ್ನಿ ಸಹೋದರಿ ಆಗಿದ್ದಾರೆ. ಈ ಮಧ್ಯೆ ಕೆಲ ವರ್ಷದಿಂದ ಮೊಹಮ್ಮದ್‌ ಅಕ್ತರ್‌ ಅಲಿ, ತನ್ನ ಪತ್ನಿ ಸಹೋದರಿ ಜತೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರವಾಗಿ ಶಹನವಾಜ್‌ ದಂಪತಿ ನಡುವೆ ಪದೇ ಪದೆ ಜಗಳ ನಡೆಯುತ್ತಿತ್ತು. ಅದರಿಂದ ಬೇಸತ್ತಿದ್ದ ಶಹನವಾಜ್‌, ಮೊಹಮ್ಮದ್‌ ಅಕ್ತರ್‌ ಅಲಿ ಕೊಲೆಗೆ ಕಳೆದ ಒಂದೂವರೆ ತಿಂಗಳಿಂದ ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದರು.

ಪಿನಾಕಿನಿ ನದಿಗೆ ಮೃತದೇಹ ಎಸೆದ ಹಂತಕರು: ಮೊದಲೆ ಸಂಚಿನಂತೆ ಸೋಮವಾರ ಸಂಜೆ ಮೊಹ ಮ್ಮದ್‌ ಅಖ್ತರ್‌ ಅಲಿಗೆ ಕರೆ ಮಾಡಿದ್ದ ಆರೋಪಿ, ಕಡಿಮೆ ಬೆಲೆಗೆ ಚಿನ್ನದ ಗಟ್ಟಿ ಕೊಡಿ ಸುವುದಾಗಿ ಹೊಸಕೋಟೆ ಕಡೆ ಕರೆದೊಯ್ದಿದ್ದಾನೆ. ಅದೇ ವೇಳೆ ಸ್ಥಳಕ್ಕೆ ತನ್ನ ಸಹಚರರನ್ನು ಕರೆಸಿಕೊಂಡಿದ್ದಾನೆ. ಬಳಿಕ ಆರೋಪಿಗಳು ಹೊಸಕೋಟೆ ಅರಣ್ಯ ಪ್ರದೇಶದಲ್ಲಿ ಮೊಹಮ್ಮದ್‌ ಅಕ್ತರ್‌ ಅಲಿಯ ಕುತ್ತಿಗೆ ಬಿಗಿದು ಕೊಲೆಗೈದಿದ್ದಾರೆ. ನಂತರ ಕಾರಿನಲ್ಲಿ ಶವ ಸಾಗಿಸಿಕೊಂಡು ಪಿನಾಕಿನಿ ನದಿಗೆ ಸೇರುವ ಚರಂಡಿ ಬಳಿ ಮೃತದೇಹ ತಂದು, ಹೊಟ್ಟೆ ಹಾಗೂ ದೇಹದ ಇತರೆ ಭಾಗಗಳನ್ನು ಕೊಯ್ದು ಚೀಲದಲ್ಲಿ ಮೃತದೇಹ ಹಾಕಿ ಪಿನಾಕಿನಿ ನದಿಗೆ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

Advertisement

ಅತ್ತಿಗೆ ಜತೆ ಬಂದು ದೂರು: ಮೊಹಮ್ಮದ್‌ ಅಖ್ತರ್‌ ಅಲಿ, ರಾತ್ರಿಯಾದರೂ ಮನೆಗೆ ಬಾರದಿದ್ದರಿಂದ ಆತಂಕಗೊಂಡ ಆತನ ಪತ್ನಿ ತಡರಾತ್ರಿ ಹಲಸೂರು ಗೇಟ್‌ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ಶಹನವಾಜ್‌ ಕೂಡ ಠಾಣೆಗೆ ಬಂದಿದ್ದ. ಈ ವೇಳೆ ಆತನ ವರ್ತನೆಯಲ್ಲಿ ಅನುಮಾನ ಬಂದಿತ್ತು. ಬಳಿಕ ಅಕ್ತರ್‌ ಅಲಿ ಮೊಬೈಲ್‌ ಕರೆಗಳನ್ನು ಪರಿಶೀಲಿಸಿದಾಗ ಶಹನವಾಜ್‌ ಮೊಬೈಲ್‌ ಕೂಡ ಜತೆ ಕಾರ್ಯನಿರ್ವ ಹಿಸಿರುವುದು ಪತ್ತೆಯಾಗಿತ್ತು. ಅನುಮಾನದ ಮೇರೆಗೆ ಮಂಗಳವಾರ ಬೆಳಗ್ಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

ಚಿನ್ನಾಭರಣ ಮಳಿಗೆ ವಶಕ್ಕೂ ಆರೋಪಿ ಸಂಚು :

ಪ್ರಕರಣದ ವಿಚಾರಣೆಯಲ್ಲಿ ಆರೋಪಿ ಪತ್ನಿ ಜತೆ ಅಕ್ರಮ ಸಂಬಂಧ ಮಾತ್ರವಲ್ಲ, ಮೊಹ ಮ್ಮದ್‌ ಅಕ್ತರ್‌ ಅಲಿ ನಡೆಸುತ್ತಿದ್ದ ಎರಡು ಚಿನ್ನಾಭರಣ ಮಳಿಗೆ ಮೇಲೂ ಆರೋಪಿ ಕಣ್ಣಿಟ್ಟಿದ್ದ. ಹೀಗಾಗಿ ಸುಳ್ಳು ಆಮಿಷವೊಡ್ಡಿ ಕರೆದೊಯ್ದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next