ಬೀದರ: ಇತ್ತೀಚೆಗೆ ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಸಾಗಿಸುತ್ತಿದ್ದ ಹಾಗೂ ಸಂಗ್ರಹಿಸಿಟ್ಟ ಅಕ್ಕಿ ಹಾಗೂ ಇತರೆ ಆಹಾರ ದಾಸ್ತಾನುಗಳಲ್ಲಿ ಪಡಿತರ ಸೇರಿದಂತೆ ಹೆಚ್ಚು ಪ್ರಮಾಣದಲ್ಲಿ ಶಾಲೆಗಳ ಹಾಗೂ ವಸತಿ ನಿಲಯಗಳ ಬಿಸಿ ಊಟಕ್ಕೆ ಸರಬರಾಜು ಮಾಡುವ ಆಹಾರ ದಾಸ್ತಾನು ಆಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಅವರು ಈ ಕುರಿತು ಮಾಹಿತಿ ನೀಡಿ, ಜಿಲ್ಲೆಯಲ್ಲಿ ವಿವಿಧೆಡೆ ದಾಳಿ ನಡೆದ ಸಂದರ್ಭದಲ್ಲಿ ಪತ್ತೆಯಾದ ಅಕ್ಕಿ ಪ್ರಮಾಣದಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳ ಮಧ್ಯಾಹ್ನದ ಬಿಸಿ ಊಟದ ಅಕ್ಕಿ ಹಾಗೂ ವಸತಿ ನಿಲಯಗಳಿಗೆ ಪೂರೈಕೆ ಆಗಬೇಕಾದ ಅಕ್ಕಿ ಇರುವ ಶಂಕೆ ವ್ಯಕ್ತವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಕುರಿತು ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ವಿವಿಧೆಡೆ ನಡೆದ ದಾಳಿಯಲ್ಲಿ ಸಾವಿರಕ್ಕೂ ಹೆಚ್ಚು ಕ್ವಿಂಟಲ್ ಅಕ್ಕಿ ಜಪ್ತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದು, ಲಕ್ಷಾಂತರ ರೂ. ಮೌಲ್ಯದ ಆಹಾರ ದಾಸ್ತಾನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಅಕ್ಕಿ ಹಾಗೂ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿಗೆ ಕನ್ನ ಹಾಕುವ ಕೆಲಸ ರಾಜಾರೋಷವಾಗಿ ನಡೆಯುತ್ತಿದ್ದು, ಈ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಕುರಿತು ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ತನಿಖೆಯ ನಂತರ ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಇದಕ್ಕೆ ಕುಮ್ಮಕ್ಕು ನೀಡುವ ಪ್ರಭಾವಿಗಳ ವಿರುದ್ಧ ಕೂಡ ಕಾನೂನು ಕ್ರಮ ಕೈಗೊಳ್ಳುವ ಕುರಿತು ಭರವಸೆ ನೀಡಿದ್ದಾರೆ.
ಈ ಅಕ್ರಮ ದಂಧೆ ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಅನುಸರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸದ್ಯ ಆಹಾರ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಹೆಚ್ಚಿನ ಕಾರ್ಯಕ್ಕೆ ಹಿನ್ನಡೆ ಆಗುತ್ತಿದೆ ಎಂದರು. ಪಡಿತರ ಅಂಗಡಿ ಹಾಗೂ ಬಿಸಿ ಊಟಕ್ಕೆ ಸರಬರಾಜು ಆಗುತ್ತಿರುವ ಅನ್ನ ಭಾಗ್ಯಯೋಜನೆಯ ತೋಗರಿ ಬೇಳೆ ಕಳಪೆ ದೂರುಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ತೊಗರಿ ಬೇಳೆ ಕುರಿತು
ಪರಿಶೀಲನೆ ನಡೆಸಲಾಗುವುದು.
ಕಳಪೆ ತೊಗರಿ ಬೆಳೆ ವಿತರಣೆ ಆದರೆ ಗ್ರಾಹಕರು ದೂರು ಸಲ್ಲಿಸಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ದಾಖಲಾದ ವಿವಿಧ ಪ್ರಕರಣಗಳಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ ಎಂಬುವುದನ್ನು ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿ ಮಾಹಿತಿ ನೀಡುವುದಾಗಿ ಹೇಳಿದರು.