ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆಯ ವಿದ್ತುತ್ ಸ್ಥಾವರ ನಿರ್ಮಾಣ ಮಾಡಲಾಗುತ್ತಿದೆ. ಸದರಿ ಸ್ಥಾವರ ಜಮೀನು ರೈತರಿಗೆ ಸೇರಿದ್ದು, ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸಲಾಗುತ್ತಿದೆ. ತಕ್ಷಣ ಕಾಮಗಾರಿ ನಿಲ್ಲಿಸದಿದ್ದರೆ ರೈತರು ಪ್ರಾಣ ತ್ಯಾಗಕ್ಕೂ ಸಿದ್ಧರಾಗಿ ಹೋರಾಟಕ್ಕೆ ಇಳಿಯಬೇಕಾದೀತು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ ಎಚ್ಚರಿಸಿದರು.
ಬುಧವಾರ ಮುದ್ದೇಬಿಹಾಳ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣಪುರದ ಬಸವಸಾಗರ ಜಲಾಶಯದ ಬಳಿ ನಡೆಯುತ್ತಿರುವ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯ ವಿದ್ಯುತ್ ಸ್ಥಾವರ ಕಾಮಗಾರಿಗೆ ನಕಲಿ ದಾಖಲೆ ಸೃಷ್ಟಿಸಿ ರೈತರ ಜಮೀನಿನಲ್ಲಿ ಅಕ್ರಮವಾಗಿ ಸ್ಥಾವರ ನಿರ್ಮಿಸಲಾಗುತ್ತಿದೆ.
ಈ ಕುರಿತು ಬಾಧಿತ ರೈತರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ, ಅಧಿಕಾರಿಗಳು ಸ್ಪಂದಿಸಿಲ್ಲ. ಒಂದೊಮ್ಮೆ ಪೊಲೀಸರು ಬಲಪ್ರಯೋಗಿಸಿ ಸರ್ಕಾರ ಅಕ್ರಮ ವಿದ್ಯುತ್ ಸ್ಥಾವರ ನಿರ್ಮಾಣ ಕಾಮಗಾರಿ ಮುಂದುವರೆಸಿದರೆ ಕಾಮಗಾರಿ ಸ್ಥಳದಲ್ಲೇ ರೈತರು ಠಿಕಾಣಿ ಹೂಡಿ ಅಹೋರಾತ್ರಿ ಹೋರಾಟ ಮಾಡಲಿದ್ದಾರೆ. ತಕ್ಷಣ ಮೂಲ ರೈತರಿಗೆ ಜಮೀನು ಹಸ್ತಾಂತರಿಸದಿದ್ದರೆ ರೈತರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲೂ ಹಿಂಜರಿಕೆ ಮಾಡುವುದಿಲ್ಲ ಎಂದು ಎಚ್ಚರಿಸಿದರು.
1972 ರಲ್ಲಿ ಭೂಸ್ವಾಧಿನಗೊಂಡ 24.26 ಎಕರೆ ಜಮೀನಿಗೆ 1981ರಲ್ಲಿ ಟೆನೆನ್ಸಿ ಕಾಯ್ದೆ ಅನ್ವಯ ಭೂನ್ಯಾಯ ಮಂಡಳಿಯಲ್ಲಿ ಫಾರ್ಮ ನಂ-10 ರ ಮೂಲಕ ಮಂಜೂರು ಮಾಡಲಾಗಿದೆ. ಹೀಗಿದ್ದೂ ಕೂಡ 2019ರಲ್ಲಿ ಸದರಿ ರೈತರ ಜಮೀನಿನಲ್ಲಿ ಅಕ್ರಮವಾಗಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ವಿವರಿಸಿದರು.
ಶೀಘ್ರದಲ್ಲೇ ಈ ಅನ್ಯಾಯದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಹೋರಾಟ ಹಮ್ಮಿಕೊಂಡು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ. ಸರ್ಕಾರ ಪೊಲೀಸ್ ಬಲ ಪ್ರಯೋಗಿಸಿ ರೈತರ ಮೇಲೆ ದೌರ್ಜನ್ಯ ನಡೆಸಿದರೆ ಪ್ರಾಣತ್ಯಾಗಕ್ಕೂ ಸಿದ್ಧ ಎಂದರು.