ಬೆಂಗಳೂರು: ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಅಕ್ರಮ ನಡೆದಿರುವ ಆರೋಪ ಮೇಲಿಂದ ಮೇಲೆ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮನೆಗಳ “ಮರು ಸಮೀಕ್ಷೆ’ಗೆ ಸರಕಾರ ಮುಂದಾಗಿದೆ.
ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಅಕ್ರಮ ನಡೆಯುತ್ತಿದ್ದು, ಅನರ್ಹರಿಗೂ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಿಜವಾದ ಸಂತ್ರಸ್ತರನ್ನು ಪತ್ತೆಹಚ್ಚಲು ಮರು ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಪ್ರಾಯೋಗಿಕವಾಗಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಮರು ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ.
ರಾಜ್ಯ ಸರಕಾರದ ಸುಮಾರು 38,000 ಕೋಟಿ ರೂ. ಪರಿಹಾರ ನೀಡಲು ಸಲ್ಲಿಕೆಯಾಗಿದ್ದ ಮನವಿ ಬಗ್ಗೆ ಕೇಂದ್ರ ಸರಕಾರ ಆಕ್ಷೇಪ ವ್ಯಕ್ತಪಡಿಸಿ, ಪರಿಹಾರದ ಸಮೀಕ್ಷೆ ಅವೈಜ್ಞಾನಿಕ ವಾಗಿತ್ತು ಎಂದು ಮರುಸಮೀಕ್ಷೆಗೆ ಸೂಚಿಸಿತ್ತು ಎನ್ನಲಾಗಿದೆ. ಅಲ್ಲದೆ ಹಾನಿಗೊಳಗಾದ ಮನೆಗಳ ಸಮೀಕ್ಷೆಯಲ್ಲಿ ತಾರತಮ್ಯವಾಗಿದ್ದು ಮರು ಸಮೀಕ್ಷೆ ನಡೆಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ “ಮರು ಸಮೀಕ್ಷೆ’ಗೆ ಯಡಿಯೂರಪ್ಪ ಸರಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಆಗಸ್ಟ್ ತಿಂಗಳಲ್ಲಿ ರಾಜ್ಯದ ಶತಮಾನದಲ್ಲಿಯೇ ಅತೀ ದೊಡ್ಡ ಪ್ರಮಾಣದ ಪ್ರವಾಹ ಉಂಟಾಗಿದ್ದು, 22 ಜಿಲ್ಲೆಗಳ 103 ತಾಲೂಕುಗಳು ತೊಂದರೆಗೀಡಾಗಿದ್ದವು. ಸಂತ್ರಸ್ತರಿಗೆ ಪರಿಹಾರ ಕೊಡಿಸುವಲ್ಲಿ ಮಧ್ಯ ವರ್ತಿಗಳು ಸೇರಿಕೊಂಡಿದ್ದು, ಸಿ ಗ್ರೇಡ್ ಹಾನಿ ಗೀಡಾದವರಿಗೆ ಎ ಗ್ರೇಡ್ ಹಾನಿಯ ಪರಿಹಾರ ಕೊಡಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಿಜವಾದ ಸಂತ್ರಸ್ತರಿಗೆ ಮಾತ್ರ ಸೂಕ್ತ
ಪರಿಹಾರ ನೀಡಬೇಕು ಎನ್ನುವ ಕಾರಣಕ್ಕೆ ಸರಕಾರ ಮರು ಸಮೀಕ್ಷೆಗೆ ಮುಂದಾಗಿದೆ ಎನ್ನಲಾಗಿದೆ.
ಪ್ರವಾಹದಲ್ಲಿ ಮನೆ ಕಳೆದುಕೊಂಡವ ರಿಗೆ ಪರಿಹಾರ ನೀಡುವಲ್ಲಿ ವ್ಯತ್ಯಾಸ ವಾಗಿರುವುದು ಬೆಳಕಿಗೆ ಬಂದಿದೆ. ನಾನೇ ಖುದ್ದು ಪರಿಶೀಲನೆ ಮಾಡಿದಾಗ ನಿಜವಾದ ಸಂತ್ರಸ್ತ ರಿಗೆ ಸೂಕ್ತ ಪರಿಹಾರ ಸಿಗದಿರುವುದು ಕಂಡು ಬಂದಿದೆ. ಹೀಗಾಗಿ ಆರೋಪ ಕೇಳಿ ಬಂದ ಕಡೆಗಳಲ್ಲಿ ಮರು ಸಮೀಕ್ಷೆ ಮಾಡಲು ಸೂಚಿಸಲಾಗಿದೆ.
– ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ
- ಶಂಕರ ಪಾಗೋಜಿ