Advertisement

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ: ಎಬಿವಿಪಿ ಆಕ್ರೋಶ

12:40 PM May 05, 2022 | Team Udayavani |

ಬಾಗಲಕೋಟೆ: ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸುವ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವಂತೆ ಒತ್ತಾಯಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಬಾಗಲಕೋಟೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಬಳಿಕ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಉನ್ನತ ಬೇವಿನಕಟ್ಟಿ ಈ ವೇಳೆ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸರಕಾರಿ ಹುದ್ದೆಗೆ ಆಯ್ಕೆಗೊಳ್ಳುವುದು ಪ್ರತಿಯೊಬ್ಬ ವಿದ್ಯಾವಂತ ನಿರುದ್ಯೋಗಿಯ ಕನಸಾಗಿರುತ್ತದೆ. ಆದರೆ, ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುತ್ತಿರುವುದು ವಿಪರ್ಯಾಸ. ಇದನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ನ್ಯಾಯಯುತವಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ತಮ್ಮ ಕನಸನ್ನು ನನಸಾಗಿಸಲು ಅನೇಕ ಸವಾಲು ಎದುರಿಸಿ ಹುದ್ದೆಗಳ ಸಂಖ್ಯೆ ಬೆರಳೆಕೆಯಷ್ಟಿದ್ದರೂ ಸಾವಿರಾರು-ಲಕ್ಷಾಂತರ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಾರೆ. ಆದರೆ ಅವರು ಎದುರಿಸುವ ಪರೀಕ್ಷೆಗಳಲ್ಲಿಯೇ ದೊಡ್ಡಮಟ್ಟದಲ್ಲಿ ಅಕ್ರಮಗಳು ನಡೆಯುತ್ತಿವೆ. ಇದರಿಂದಾಗಿ ಬಡ ಮತ್ತು ಪ್ರತಿಭಾವಂತ ನಿರುದ್ಯೋಗಿಗಳ ಕನಸಿಗೆ ತಣ್ಣೀರೆರಚಿದಂತೆ. ಅಷ್ಟೇ ಅಲ್ಲದೆ ಅನ್ಯಾಯ ಎಸಗಿದಂತೆಯೂ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ಕೆಇಎ, ಕೆಪಿಎಸ್‌ಸಿ ಮತ್ತು ಬೇರೆ ಬೇರೆ ಸಂಸ್ಥೆಗಳಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಅದರಲ್ಲಿ ತೇರ್ಗಡೆಯಾದವರನ್ನು ಅರ್ಹತೆಯ ಮಾನದಂಡದ ಆಧಾರದಲ್ಲಿ ಹುದ್ದೆಗಳಿಗೆ ನೆಮಿಸಿಕೊಳ್ಳುವ ವಿಧಾನವನ್ನು ಸರಕಾರ ಮೊದಲಿಂದಲೂ ಅನುಸರಿಸುತ್ತ ಬಂದಿದೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ವಿದ್ಯಾವಂತ ನಿರುದ್ಯೋಗಿಗಳನ್ನು ತೀವ್ರ ಹತಾಸರನ್ನಾಗಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಎಎಸ್‌, ಪಿಎಸ್‌ಐ, ಎಸ್‌ಡಿಎ, ಎಫ್‌ಡಿಎ ಹಾಗೂ ಸಹಾಯಕ ಪ್ರಾಧ್ಯಾಪಕರ ಮತ್ತು ಇನ್ನುಳಿದ ಹುದ್ದೆಗಳ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಾನೂನು ನಿಯಮಾವಳಿಗಳ ಅನುಸಾರ ನ್ಯಾಯಯುತವಾಗಿ ಪಾರದರ್ಶಕವಾಗಿ ನಡೆದಲ್ಲಿ ಮಾತ್ರ ಗೌರವ, ಘನತೆ ಇರುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸರಕಾರವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಪರೀಕ್ಷೆಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ತಪ್ಪಿತಸ್ಥರು ಎಷ್ಟೇ ದೊಡ್ಡವರಾಗಿರಲಿ, ಎಷ್ಟೇ ಪ್ರಭಾವಶಾಲಿಯಾರಲಿ, ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಕಠಿಣ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

Advertisement

ಎಬಿವಿಪಿ ನಗರ ಕಾರ್ಯದರ್ಶಿ ಜ್ಯೋತಿ ಸಜ್ಜನ, ತಾಲೂಕು ಸಂಚಾಲಕ ಪ್ರಶಾಂತ ಮುರನಾಳ, ಕಾರ್ಯಕರ್ತ ಮಹಾದೇವಿ ಕೋಟಿ, ಶ್ರೇಯಸ್‌ ಶೆಟ್ಟಿ, ನಿಖೀಲ ಹೆಬ್ಟಾಳ, ಹಯವದನ ದೇಸಾಯಿ, ಸುನಿಲ ಹಳ್ಳೂರ, ಸಚಿನ್‌ ಗೌಡರ, ಓಂಕಾರ ಪೀಪಲ್ವ, ಅಭಿಷೇಕ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next