ದೊಡ್ಡಬಳ್ಳಾಪುರ: ಸರ್ಕಾರಿ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದವರಿಗೆ ರಾಜ್ಯ ಸರ್ಕಾರದ ಅಕ್ರಮ ಸಕ್ರಮ ಯೋಜನೆಯಲ್ಲಿ ಅರ್ಜಿಗಳನ್ನು ಸಲ್ಲಿಸಲು ಕೊನೆ ಅವಕಾಶವಾಗಿ 2018ರ ಫೆಬ್ರವರಿ 4 ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ತಹಶೀಲ್ದಾರ್ ಬಿ.ಎ.ಮೋಹನ್ ತಿಳಿಸಿದರು.
ತಾಲೂಕಿನ ಎಸ್.ಎಸ್.ಘಾಟಿಯಲ್ಲಿ ನಡೆದ ಸಮಾರಂಭದಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ಅರ್ಜಿಸಲ್ಲಿಸಿದ್ದ ಫಲಾನುಭವಿಗಳಿಗೆ ಹಕ್ಕು ಪತ್ರಗಳ ವಿತರಣ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಇನ್ನು ಸಾಕಷ್ಟು ಜನರು ಸರ್ಕಾರಿ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಿದ್ದಾರೆ.
ಆದರೆ ಇವರು ಗ್ರಾಮ ಪಂಚಾಯಿತಿ ವತಿಯಿಂದ ಖಾತೆ ಮಾಡಿಸಿಕೊಂಡಿದ್ದೇವೆ ಎನ್ನುತ್ತ 94 ಸಿ ಕಾಯಿದೆಯಡಿಯಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿಗಳನ್ನು ಸಲ್ಲಿಸಿಲ್ಲ. ಕಂದಾಯ ಇಲಾಖೆಯಿಂದ ಹಕ್ಕು ಪತ್ರಗಳನ್ನು ಪಡೆದರೆ ಮಾತ್ರ ಕಾನೂನು ಬದ್ಧವಾಗಿ ಇರುತ್ತದೆ. ಹೀಗಾಗಿ ಕೊನೆ ಅವಕಾಶವಾಗಿ ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ 20×30 ಅಳತೆಯ ಮನೆ, ಗ್ರಾಮಾಂತರ ಪ್ರದೇಶದಲ್ಲಿ 30×40 ರಿಂದ 50×80ರವರೆಗಿನ ಅಳತೆ ಮನೆಗಳನ್ನು ಹೊಂದಿರುವವರು 94ಸಿ ಅಡಿಯಲ್ಲಿ ನಾಡ ಕಚೇರಿಗಳಲ್ಲಿ ಅರ್ಜಿಗಳನ್ನು ಸಲ್ಲಿಸಿ ಸಕ್ರಮಗೊಳಿಸಿಕೊಳ್ಳಲು ಅವಕಾಶ ಇದೆ ಎಂದರು.
ಹೈಕೋರ್ಟ್‌ನಲ್ಲಿ ಇದ್ದ ತಡೆಯಾಜ್ಞೆ ತೆರವಾಗಿರುವುದ ರಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರಗಳನ್ನು ನೀಡಲು ಸಿದ್ಧತೆಗಳು ನಡೆಯುತ್ತಿವೆ. ಸ್ಥಳೀಯ ಸಂಸದರು, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ವಿತರಣೆ ಮಾಡಲಾಗುವುದು ಎಂದರು. ಇದೇ ವೇಳೆ ಹಕ್ಕು ಪತ್ರಗಳನ್ನು ಶಾಸಕ ಪಿಳ್ಳಮುನಿಶಾಮಪ್ಪವಿತರಿಸಿದರು. ಬಮೂಲ್ ಅಧ್ಯಕ್ಷ ಎಚ್.ಅಪ್ಪಯ್ಯಣ್ಣ, ಮೇಲಿನಜೂಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ, ಹಾಡೋನಹಳ್ಳಿ ಗ್ರಾಪಂ ಅಧ್ಯಕ್ಷ ಎಚ್.ನಾರಾಯಣಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟೇಶ್‌ಬಾಬು, ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲಾ, ತೂಬಗೆರೆ ಹೋಬಳಿ ಉಪತಹಶೀಲ್ದಾರ್ ನಾರಾಯಣಸ್ವಾಮಿ, ಘಾಟಿ ಸುಬ್ರಹ್ಮಣ್ಯಸ್ವಾಮಿ ದೇಗುಲ ವ್ಯವಸ್ಥಾಪನ ಸಮಿತಿ
ಅಧ್ಯಕ್ಷ ಜಿ.ಎಂ.ಚನ್ನಪ್ಪ, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಜಲದಿ ರಂಗಪ್ಪ, ಪಿಡಿಒ ಗಂಗಬೈರಪ್ಪ ಭಾಗವಹಿಸಿದ್ದರು.