ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುರಾಡಳಿತವನ್ನು ನಿರ್ನಾಮ ಮಾಡಲು ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಬೂತ್ ಮಟ್ಟದ ಪ್ರತಿನಿಧಿಗಳು ಬಿಜೆಪಿಗೆ ಪೂರ್ಣ ಬಹುಮತ ತಂದು ಕೊಡುವ ಸಂಕಲ್ಪ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದಾರೆ. ಶುಕ್ರವಾರ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಹಾಗೂ ಮೈಸೂರಿನಲ್ಲಿ ನವಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮೇ 12ರಂದು ಒಂದೇ ಹಂತದಲ್ಲಿ ಮತದಾನ ಘೋಷಣೆಯಾಗಿದ್ದು, ಮೇ15 ರಂದು ಮತ ಎಣಿಕೆ ಸಂದರ್ಭದಲ್ಲಿ ಸಿದ್ದು ಮನೆ ಕಡೆಗೆ, ಬಿಎಸ್‌ವೈ ಮುಖ್ಯಮಂತ್ರಿಯ ಗದ್ದುಗೆಗೆ ಏರಲಿದ್ದಾರೆ ಎಂದು ಭವಿಷ್ಯ ನುಡಿದರು. ಭ್ರಷ್ಟಾಚಾರ ಮತ್ತು ಹಿಂಸಾಚಾರದ ಪ್ರತಿರೂಪವಾದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಿತ್ತೂಗೆಯಲು ಜೆಡಿಎಸ್‌ಗೆ ಸಾಮರ್ಥ್ಯವಿಲ್ಲ.
ಹೀಗಾಗಿ ಬಿಜೆಪಿ ಗೆಲ್ಲಿಸಿ, ಕರ್ನಾಟಕದ ವಿಕಾಸಕ್ಕೆ ಸಹಕರಿಸಿ. ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರವನ್ನು ಬರೆಯುವುದಾದರೆ ಕರ್ನಾಟಕದಲ್ಲಷ್ಟೇ ಅಲ್ಲ, ಕೇರಳದ ಗಡಿವರೆಗೂ ಬರೆಯಬಹುದು. ಈ ಚುನಾವಣೆಯಲ್ಲಿ ಕರ್ನಾಟಕದ ವಿಕಾಸಕ್ಕೆ ಕೆಲಸ ಮಾಡುವ ಬಿಜೆಪಿ ಸರ್ಕಾರ ಬೇಕಾ? ಕಾಂಗ್ರೆಸ್ ನೇತೃತ್ವದ ಕಮೀಷನ್ ಸರ್ಕಾರ ಬೇಕಾ?
ನೀವೇ ತೀರ್ಮಾನಿಸಿ ಎಂದರು. ಸಿದ್ದರಾಮಯ್ಯ ರಾಜ್ಯದ ಅಸ್ಮಿತೆಯನ್ನೇ ಬದಲಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಮುನ್ನುಡಿ ಬರೆದ ಸರ್ ಎಂ.ವಿಶ್ವೇಶ್ವರಯ್ಯ, ನಾಡಗೀತೆ ರಚಿಸಿದ ಮಹಾ ಕವಿ ಕುವೆಂಪು ಅವರ ಜಯಂತಿ ಆಚರಿಸುವುದು ಬೇಕಿಲ್ಲ.ಟಿಪ್ಪು ಜಯಂತಿ ಮಾಡುತ್ತಾರೆ ಎಂದು ಟೀಕಿಸಿದರು.
ಬಾಯ್ತಪ್ಪಿ ಮಾತಾಡಿದೆ: ಚಿತ್ರದುರ್ಗದಲ್ಲಿ ಬಾಯ್ತಪ್ಪಿನಿಂದ ಆಡಿದ ಮಾತಿಗೆ ಸಿದ್ದರಾಮಯ್ಯ ಅವರಿಂದ ರಾಹುಲ್ ಗಾಂಧಿವರೆಗೆ ಸಾಮಾಜಿಕ ಜಾಲತಾಣದಲ್ಲಿ ಜಾಡಿಸಿದರು. ಆದರೆ, ನಾನು ಬಾಯ್ತಪ್ಪಿ ಮಾತನಾಡಬಹುದು. ರಾಜ್ಯದ ಜನತೆ ಈ ಬಾರಿ ಕಾಂಗ್ರೆಸ್ ಗೆಲ್ಲಿಸುವ ತಪ್ಪು ನಿರ್ಣಯ ಮಾಡಲಾರರು ಎಂಬ ವಿಶ್ವಾಸವಿದೆ ಎಂದರು.