Advertisement

ವಿಮಾನದ ಸೀಟ್‌ನಡಿ 6.5 ಕೆ.ಜಿ. ಚಿನ್ನ ಬಚ್ಚಿಟ್ಟು ಸಾಗಣೆಗೆ ಯತ್ನ!

03:16 PM Jul 19, 2023 | Team Udayavani |

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಲ್ಕು ಕೋಟಿ ರೂ. ಮೌಲ್ಯದ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಅಕ್ರಮವಾಗಿ ಚಿನ್ನದ ಬಿಸ್ಕತ್‌ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನಿಂದ ಇಂಡಿಗೋ ವಿಮಾನದಲ್ಲಿ ಬಂದ ಚೆನ್ನೈ ಮೂಲದ ವ್ಯಕ್ತಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಈತನಿಂದ 4 ಕೋಟಿ ರೂ. ಮೌಲ್ಯದ 6.5 ಕೆ.ಜಿ. ತೂಕದ ಏಳು ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಸ್ಮಗ್ಲರ್‌ ಜತೆ ಸೇರಿ ಕೃತ್ಯ: ಸ್ಮಗ್ಲರ್‌ ಜತೆ ಸೇರಿಕೊಂಡು ಅಕ್ರಮವಾಗಿ ಚಿನ್ನ ಸಾಗಣೆಗೆ ಪ್ರಯಾಣಿಕ ಯತ್ನಿಸಿದ್ದು ಬೆಳಕಿಗೆ ಬಂದಿದೆ. ಮೊದಲಿಗೆ ಚಿನ್ನದ ಸ್ಮಗ್ಲರ್‌ ವಿಮಾನದ ಸೀಟ್‌ನ ಕೆಳಗಡೆ ಏಳು ಚಿನ್ನದ ಬಿಸ್ಕತ್‌ಗಳನ್ನು ಬಚ್ಚಿಟ್ಟು ಬಂಧಿತ ಆರೋಪಿಗೆ ತಿಳಿಸಿದ್ದನು. ಹೀಗಾಗಿ ಆತ ಅದೇ ಸೀಟ್‌ ಬುಕ್‌ ಮಾಡಿಕೊಂಡು ಬೆಂಗಳೂರು ಬರುತ್ತಿದ್ದಂತೆಯೇ ಸೀಟ್‌ ಕೆಳಗೆ ಇಟ್ಟಿದ್ದ ಚಿನ್ನವನ್ನು ಬ್ಯಾಗಿನಲ್ಲಿ ಹಾಕಿಕೊಂಡು ವಿಮಾನ ಇಳಿದು ಬಂದಿದ್ದಾನೆ. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಏಳು ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿವೆ.

ದೇಶೀಯ ಪ್ರಯಾಣಿಕರನ್ನು ಪರಿಶೀಲನೆ ಮಾಡುವುದಿಲ್ಲ. ಹೀಗಾಗಿ ಸುಲಭವಾಗಿ ಚಿನ್ನ ಸಾಗಿಸಬಹುದು ಎಂದು ಆರೋಪಿ ಯೋಚಿಸಿದ್ದನು. ಆದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ವೇಳೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದೀಗ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ವಿಮಾನದ ಸೀಟ್‌ ಕೆಳಗಡೆ ಚಿನ್ನ ಬಚ್ಚಿಟ್ಟಿರುವ ಬಗ್ಗೆ ತನಿಖೆ ನಡೆಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next