Advertisement
ಬೇಳೂರು ತೆಂಕಬೆಟ್ಟು ಪರಿಸರದಲ್ಲಿನ ಹಸುಗಳನ್ನು ಏಸ್ ವಾಹನದಲ್ಲಿ ಹಿಂಸಾತ್ಮಕವಾಗಿ ಕಟ್ಟಿ ಹಾಕಿ ಮಧುವನ ಮಾರ್ಗವಾಗಿ ಅಕ್ರಮವಾಗಿ ಗೋವುಗಳನ್ನು ಸಾಗುತ್ತಿರುವ ಐವರ ತಂಡಗಳ ಬಗ್ಗೆ ನಿಖರವಾದ ಮಾಹಿತಿ ನೀಡಿದ ಸ್ಥಳೀಯ ಯುವಕರ ತಂಡ ತತ್‌ಕ್ಷಣವೇ ಕೋಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅದೇ ಸಂದರ್ಭದಲ್ಲಿ ಗ್ರಾಮ ಗಸ್ತಿನಲ್ಲಿದ್ದ ಎಎಸ್‌ಐ ಗಣೇಶ್ ಪೈ ಹಾಗೂ ಪೊಲೀಸ್ ಸಿಬಂದಿ ಪ್ರಸನ್ನ ಮಾಲಾಡಿ ಅವರು ಪೊಲೀಸ್ ಜೀಪ್‌ನಲ್ಲಿ ಏಸ್ ವಾಹನವನ್ನು ಹಿಂಬಾಲಿಸಿದಾಗ ಆರೋಪಿಗಳು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಕೋಟ ಪೊಲೀಸರು ಮೂರು ಹಸುಗಳನ್ನು ರಕ್ಷಿಸಿ, ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಮೂರು ಹಸುಗಳ ಕಿವಿಯಲ್ಲಿ ಕಿವಿಯೋಲೆಗಳಿದ್ದು, ಈ ಅಕ್ರಮ ಗೋಸಾಗಾಟದ ಹಿಂದೆ ಬೃಹತ್ ಜಾಲವೊಂದು ಕಾರ್ಯಚರಿಸುತ್ತಿರುವ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಗ್ರಾಮಸ್ಥರು ಆತಂಕ ಗೊಂಡಿದ್ದಾರೆ.