ಯಾದಗಿರಿ: ಜಿಲ್ಲಾ ಕೇಂದ್ರದ ಕೂಗಳತೆ ದೂರದಲ್ಲಿರುವ ತಾಲೂಕಿನ ಮಸ್ಕನಳ್ಳಿ, ವರ್ಕನಳ್ಳಿ ಹಾಗೂ ಹಳೀಗೇರಾದಲ್ಲಿ ಕಲ್ಲು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು ಜನರ ನಿದ್ದೆಗೆಡಿಸಿದೆ. ಸುಮಾರು ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
ಮಸ್ಕನಳ್ಳಿಯಲ್ಲಿ ಸ್ಫೋಟದ ಸದ್ದಿನಿಂದ ಮನೆಗಳು ಹಾಗೂ ಶಾಲೆ ಕಟ್ಟಡ ಗೋಡೆ ಸೀಳಿದ್ದು, ಸೊ ಸ್ಫೋಟದ ರಭಸಕ್ಕೆ ಕಲ್ಲುಗಳು ಸಿಡಿಯುವ ಭಯವೂ ಜನರಲ್ಲಿ ಆತಂಕ ಮೂಡಿಸಿದೆ. ಸಾಕಷ್ಟು ಆಳಕ್ಕೆ ತೋಡಿ ಬೃಹತ್ ಆಕಾರದಲ್ಲಿ ಕಲ್ಲುಗಳನ್ನು ಒಡೆದು ಟ್ರಾಕ್ಟರ್ ಮತ್ತು ಟಿಪ್ಪರ್‌ಗಳ ಮೂಲಕ ಸಾಗಿಸುವ ಕಾರ್ಯ ಎಗ್ಗಿಲ್ಲದೆ ಸಾಗಿದೆ.
ಇನ್ನು ಗ್ರಾಮಗಳಲ್ಲಿ ಅಂತರ್ಜಲಮಟ್ಟ ತೀವ್ರ ಕುಸಿಯುತ್ತಿದ್ದು ವರ್ಷದಿಂದ ವರ್ಷಕ್ಕೆ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಬ್ಲಾಸ್ಟಿಂಗ್ ಶಬ್ದದಿಂದ ಜನತೆ ಭಯಭೀತರಾಗಿದ್ದು, ಕೆಲವರಿಗೆ ಸರಿಯಾಗಿ ಕಿವಿಯೂ ಕೇಳದಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಇರುವ ಜಾಗದಲ್ಲಿಯೇ ಕಡುಬಡವರು ಸರ್ಕಾರದ ವಸತಿ ಯೋಜನೆಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿದ್ದರೆ, ಆ ಮನೆಗಳೂ ಸ್ಫೋಟದ ಸದ್ದಿಗೆ ಸೀಳುತ್ತಿದ್ದು ಯಾವಾಗ ಏನಾಗುತ್ತದೋ ಎನ್ನುವ ಭಯದಲ್ಲಿಯೇ ಕಾಲ ಕಳೆಯುವಂತಾಗಿದೆ.
ನಿಯಮ ಮೀರಿ ಕಲ್ಲು ಗಣಿಗಾರಿಕೆ: ನಿಯಮದ ಪ್ರಕಾರ ಗ್ರಾಮದಿಂದ 3 ಕಿಮೀ ದೂರದಲ್ಲಿ ಗಣಿಗಾರಿಕೆ ನಡೆಸಬೇಕು ಎಂದಿದ್ದರೂ ಗ್ರಾಮಕ್ಕೆ ಅರ್ಧ ಕಿಮೀ ಅಂತರದಲ್ಲಿಯೇ ಕಲ್ಲು ಬ್ಲಾಸ್ಟಿಂಗ್ ಮಾಡಲಾಗುತ್ತಿದೆ. ಯಾದಗಿರಿಗೆ ಗಣರಾಜ್ಯೋತ್ಸವ ಹಿನ್ನೆಲೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಭೇಟಿ ನೀಡುತ್ತಿದ್ದು, ಜಿಲ್ಲೆಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕುರಿತು ಗಮನ ಹರಿಸಬೇಕಿದೆ.
ಸ್ಫೋಟದಿಂದ ರಾತ್ರಿ ಹೊತ್ತು ಕಲ್ಲು ಗ್ರಾಮದಲ್ಲಿ ಬೀಳುತ್ತಿವೆ. 6 ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿದೆ. ಮಲಗಿದ್ದ ಸ್ಥಳದಿಂದ ವ್ಯಕ್ತಿಯನ್ನು ಎತ್ತಿ ಬಿಸಾಡಿದಂತೆ ಭಾಸವಾಗುತ್ತದೆ. ಜೀವ ಝಲ್ ಎನ್ನುತ್ತದೆ. ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸಿ ಜನರು ನೆಮ್ಮದಿಯಿಂದ ಇರಲು ಅನುಕೂಲ ಮಾಡಬೇಕು.
ಹೆಸರು ಹೇಳಲಿಚ್ಛಿಸದ ಗ್ರಾಮಸ್ಥೆ, ಮಸ್ಕನಳಿ
ಜಿಲ್ಲೆಯಲ್ಲಿ 23 ಕ್ವಾರಿಗಳಿವೆ. ಅಕ್ರಮ ಸ್ಫೋಟಕ ಸಂಗ್ರಹಿಸಿ ಬ್ಲಾಸ್ಟ್ ಮಾಡುತ್ತಿರುವುದು ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಕಂಡು ಬಂದಿಲ್ಲ. ಈ ಬಗ್ಗೆ
ಎಲ್ಲ ಕ್ವಾರಿಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಸಂಬಂಧಿ ಸಿದ ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳಿಗೆ
ನಿರ್ದೇಶನ ನೀಡಲಾಗಿದೆ. ಅಕ್ರಮ ನಡೆಯುವುದು ಕಂಡು ಬಂದರೆ ತಕ್ಷಣವೇ ಎಫ್ ಐಆರ್ ದಾಖಲು ಮಾಡಲು ಸೂಚಿಸಲಾಗಿದೆ.
ಡಾ| ರಾಗಪ್ರಿಯಾ.ಆರ್. ಜಿಲ್ಲಾಧಿಕಾರಿ
*ಅನೀಲ ಬಸೂದೆ