ಮಡಿಕೇರಿ : ಕೇರಳದ ಲಾಟರಿಯನ್ನು ಅಕ್ರಮವಾಗಿ ಕೊಡಗಿನ ವಿವಿಧೆಡೆ ಮಾರಾಟ ಮಾಡುತ್ತಿದ್ದ ಜಾಲವನ್ನು ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಸುಂಟಿಕೊಪ್ಪ ಪೊಲೀಸರು ಪತ್ತೆ ಮಾಡಿ ಮೂವರನ್ನು ಬಂಧಿಸಿದ್ದಾರೆ.
ಸುಂಟಿಕೊಪ್ಪದ ನಿವಾಸಿ, ಎಳನೀರು ವ್ಯಾಪಾರಿ ಸಲೀಂ ಅಲಿಯಾಸ್ ತನು (44), 7ನೇ ಹೊಸಕೊಟೆಯ ಉಪ್ಪುತೋಡು ನಿವಾಸಿ ಕೂಲಿ ಕಾರ್ಮಿಕ ಮೂಸ (44) ಹಾಗೂ 7ನೇ ಹೊಸಕೊಟೆ ಕಲ್ಲುಕೋರೆ ನಿವಾಸಿ, ಆಟೋ ಚಾಲಕ ದೇವರಾಜು (53) ಬಂಧಿತರಾಗಿದ್ದು, ಇವರಿಂದ 3.17 ಲ. ರೂ. ಮುಖ ಬೆಲೆಯ 9319 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಕೇರಳದ ಲಾಟರಿ ಟಿಕೆಟ್ ಮಾರಾಟ ಜಾಲದ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕಿ ದಾಳಿ ನಡೆಸುವಂತೆ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಎಸ್‌ಪಿ ಸುಮನ್ ಪೆನ್ನೇಕರ್ ನಿರ್ದೇಶನ ನೀಡಿದ್ದರು. ಅದರಂತೆ ಸೆ.30ರಂದು ಸುಂಟಿಕೊಪ್ಪ ನಗರದ 1ನೇ ಬ್ಲಾಕ್‌ನ ವಾಸಿ ಸಲೀಂ ಅಲಿಯಾಸ್ ತನು ಕೇರಳದ ಲಾಟರಿಯನ್ನು ಮಾರುವ ಉದ್ದೇಶದಿಂದ ಇಟ್ಟುಕೊಂಡಿರುವ ಬಗ್ಗೆ ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್‌ಪೆಕ್ಟರ್ ಎಂ. ಮಹೇಶ್ ಹಾಗೂ ಸಿಬಂದಿಗೆ ಮಾಹಿತಿ ಸಿಕ್ಕಿತ್ತು. ಎಸ್‌ಪಿ ಮಾರ್ಗದರ್ಶನದಂತೆ ಸುಂಟಿಕೊಪ್ಪ ಠಾಣಾಧಿಕಾರಿ ಹಾಗೂ ಸಿಬಂದಿ ಜತೆ ಸಲೀಂ ಮನೆಯ ಮೇಲೆ ದಾಳಿ ನಡೆಸಲಾಯಿತು.
ಈ ಸಂದರ್ಭ ಅಲ್ಲಿ ಮೂಸ ಹಾಗೂ ದೇವರಾಜು ಕೂಡ ಇದ್ದರು. ತಾವು ಸಲೀಂನಿಂದ ಮಾರಾಟಕ್ಕಾಗಿ ಲಾಟರಿ ಖರೀದಿಸಲು ಬಂದಿರುವುದಾಗಿ ಅವರು ತಿಳಿಸಿದ್ದರು ಹಾಗೂ ಕೋಣೆಯಲ್ಲಿ ಲಾಟರಿ ಟಿಕೆಟ್‌ಗಳನ್ನು ಕಂಡು ಬಂದಿತ್ತು. ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೇರಳದ ಇರಿಟ್ಟಿ ನಗರದಿಂದ ಸುಂಟಿಕೊಪ್ಪ ನಿವಾಸಿ ಅತೀಕ್ ಮೂಲಕ ಲಾಟರಿ ಟಿಕೆಟ್‌ಗಳನ್ನು ತರಿಸಿಕೊಂಡಿರುವುದಾಗಿ ಮತ್ತು ಅವುಗಳನ್ನು ಸುಂಟಿಕೊಪ್ಪ, ಕುಶಾಲನಗರ, ಸೋಮವಾರಪೇಟೆಗಳಲ್ಲಿ ಸಂತೆ ನಡೆಯುವ ದಿನ ಮಾರಾಟ ಮಾಡಲು ಹಂಚಿಕೊಳ್ಳುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿದ್ದಾರೆ.