ಬೇತಮಂಗಲ: ಬೆಂಗಳೂರು-ಚೆನ್ನೈ ಕಾರಿಡಾರ್ ರಸ್ತೆಯ ಗುತ್ತಿಗೆದಾರರು ನಿರಂತರವಾಗಿ ಕೆರೆಗಳಲ್ಲಿ ಕಾನೂನು ಬಾಹಿರವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದರೂ, ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
ಕೆಜಿಎಫ್ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ನಡೆಯುತ್ತಿರುವ ಬೆಂಗಳೂರು-ಚೆನ್ನೈ ಕಾರಿಡಾರ್ ರಸ್ತೆ ಕಾಮಗಾರಿಗೆ ತಾಲೂಕಿನ ಬಹುತೇಕ ಕೆರೆಗಳಲ್ಲಿ ಸರ್ಕಾರದ ನಿಯಮ ಪಾಲಿಸದೆ ಮಣ್ಣು ಸಾಗಾಣಿಕೆ ಮಾಡುತ್ತಿದ್ದರು, ಸಂಬಂಧಿಸಿದ ಅಧಿಕಾರಿಗಳು ಮಾತ್ರ ಯಾವ ಕ್ರಮಕ್ಕೂ ಮುಂದಾಗದೇ ಸುಮ್ಮನೇ ಕುಳಿತಿದ್ದಾರೆ.
ಕೆರೆಗಳ ಸ್ವರೂಪವೇ ನಾಶ: ರಸ್ತೆ ಕಾಮಗಾರಿ ಗುತ್ತಿಗೆದಾರರು ಕೆರೆಗಳಲ್ಲಿ ಸುಮಾರು 20-30 ಅಡ್ಡಿಯ ಅಳದ ವರೆಗೂ ಮಣ್ಣು ತೆಗೆಯುವ ಮೂಲಕ ಕೆರೆಯ ಸ್ವರೂಪವೇ ಬದಲಿಸಿದ್ದಾರೆ. ಇನ್ನೊಂದು ಕಡೆ ಕೆರೆಯಲ್ಲಿ ಅಳದವರೆಗೂ ಮಣ್ಣು ತೆಗೆದಿದ್ದು, ಮಳೆಗಾಲದ ಸಮಯದಲ್ಲಿ ತಗ್ಗುಗಳಲ್ಲಿ ನೀರು ತುಂಬುವುದರಿಂದ ಅಪಾಯ ತಪ್ಪಿದ್ದಲ್ಲ.
ಹಾಳಾದ ಹಳ್ಳಿಗಳ ರಸ್ತೆಗಳು: ಕಾರಿಡಾರ್ ರಸ್ತೆಗೆ ಬೃಹತ್ ವಾಹನಗಳಲ್ಲಿ ಮಣ್ಣು ಸಾಗಾಣಿಕೆ ಮಾಡುತ್ತಿರುವುದರಿಂದ ಹಳ್ಳಿ ಭಾಗದ ಬಹುತೇಕ ರಸ್ತೆಗಳು ಸಂಪೂರ್ಣ ನಾಶವಾಗಿವೆ, ಇನ್ನು ಕೆಲವು ರಸ್ತೆಗಳಲ್ಲಿ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಬೇತಮಂಗಲ – ಕ್ಯಾಸಂಬಳ್ಳಿ ರಸ್ತೆ ಸಂಪೂರ್ಣ ನಾಶವಾಗಿ ವಾಹನ ಸಂಚಾರಕ್ಕೆ ತೊಂದರೆ ಯಾಗುತ್ತಿದ್ದು, ಅಲ್ಪ-ಸ್ವಲ್ಪ ಮಳೆ ಬಂದರೆ ಮಾತ್ರ ರಸ್ತೆಯೂ ಕೆಸರು ಗದ್ದೆಯಾಗುತ್ತದೆ, ಇದರಿಂದ ವಾಹನಗಳು ಹಾಗೂ ಸಾರ್ವಜನಿಕರು ಸಹ ಸಂಚರಿಸಲು ಹರಸಾಹಸ ಪಡುವಂತಾಗಿದೆ. ಬೇತಮಂಗಲ-ಕ್ಯಾಸಂಬಳ್ಳಿ ಮಾರ್ಗದ ಆಟೋ ಚಾಲಕರು, ವಾಹನ ಸಂಚಾಲಕರು ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸಹ ರಸ್ತೆಯನ್ನು ಸರಿ ಪಡಿಸಬೇಕೆಂದು ಒತ್ತಾಯ ಮಾಡಿದ ಘಟನೆಗಳು ನಡೆದಿವೆ.
ಕೆರೆ ಕೋಡಿ ತೆರೆದು, ನೀರು ಪೋಲು: ಇಲ್ಲಿನ ಪೋತರಾಜನಹಳ್ಳಿ ಗ್ರಾಮದ ಕೆರೆಯಲ್ಲಿ ಮಣ್ಣು ತೆಗೆಯಲು ಗುತ್ತಿಗೆದಾರರು ಕೆರೆಯ ಕೋಡಿ ತೆರುವುಗೊಳಿಸಿದ್ದು, ಕೆರೆಯ ನೀರನ್ನು ಖಾಲಿ ಮಾಡಿ 1 ವರ್ಷದಿಂದ ಕೆರೆಯಲ್ಲಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದಾರೆ. ಶೀಘ್ರವಾಗಿ ಕೆರೆಯ ಕೋಡಿ ಸರಿಪಡಿಸಿ ಮಳೆ ನೀರು ಶೇಖರಣೆಯಾಗಲು ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೆರೆಗೆ ಕಂದಾಯ ಇಲಾಖೆ ಅಧಿಕಾರಿಗಳು, ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಪೋತರಾಜನಹಳ್ಳಿ ಗ್ರಾಮದ ಸುಮಾರು 100ಕ್ಕೂ ಹೆಚ್ಚು ರೈತರು ಕೆರೆಯ ನೀರಿನ ಮೂಲಕ ಕೃಷಿ ಚಟುವಟಿಕೆ ಯಲ್ಲಿ ಜೀವನ ರೂಪಿಸಿಕೊಂಡಿದ್ದರು, ಗುತ್ತಿಗೆದಾರರು ಕೆರೆಯ ನೀರನ್ನು ಹೊರಗೆ ಬಿಟ್ಟಿದ್ದು, ಅನಗತ್ಯವಾಗಿ ಮಣ್ಣು ತೆಗೆಯು ತ್ತಿದ್ದಾರೆ, ಸಂಬಂಧ ಪಟ್ಟ ಇಲಾಖೆ ಅಧಿಕಾರಿ ಗಳು ಭೇಟಿ ನೀಡಿ ಕ್ರಮ ಕೈಗೊಳ್ಳಬೇಕಿದೆ.
●ಅಪ್ಪಿ, ಗ್ರಾಪಂ ಸದಸ್ಯ ಪೋತರಾಜನಹಳ್ಳಿ
ಕಂದಾಯ ಇಲಾಖೆ ಹಾಗೂ ಭೂ ವಿಜ್ಞಾನ ಇಲಾಖೆಯಲ್ಲಿ ಕೆರೆಗಳಲ್ಲಿ ಮಣ್ಣು ತೆಗೆಯಲು 04 ಅಡ್ಡಿಗಳು ಮಾತ್ರ ಅನುಮತಿ ನೀಡಿದ್ದಾರೆ. ಅದರೆ, ಗುತ್ತಿಗೆ ದಾರರು 20-30 ಅಡ್ಡಿಗಳವರೆಗೂ ಮಣ್ಣು ತೆಗೆಯುತ್ತಿದ್ದರು, ಅಧಿಕಾರಿಗಳು ಮಾತ್ರ ಇತ್ತ ಗಮನ ನೀಡದೆ ಮೌನವಾಗಿಯೇ ಉಳಿದಿದ್ದಾರೆ.
● ಹರೀಕುಮಾರ್, ರೈತ ಸಂಘದ ಮುಖಂಡರು
-ಆರ್.ಪುರುಷೋತ್ತಮ್ ರೆಡ್ಡಿ